ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.3
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದರೂ ಏನು ಉಪಯೋಗವಿಲ್ಲ, ಬೆಲೆಯಿಲ್ಲ. ಪಕ್ಷದಲ್ಲಿ ಬೆಲೆಯೆನ್ನಿದ್ದರು ದೊಡ್ಡವರಿಗೆ ಮಾತ್ರ. ಇದರಿಂದ ನನ್ನ ಕ್ಷೇತ್ರದ ಜನರಿಗೆ ಅವಮಾನ ಆಗಿದೆ. ಹಾಗಾಗಿ ರಾಜೀನಾಮೆ ನೀಡಲು ಬಯಸಿದ್ದೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರ ಹಾಕಿದರು.
ಸಚಿವ ಸ್ಥಾನ ಆಕ್ಷಾಂಕಿಯಾಗಿದ್ದ ಬೇಳೂರು ಗೋಪಾಲಕೃಷ್ಣ ಅವರಿಗೆ ಸೋಮವಾರ ಹೈಕಮಾಂಡ್ ನಿಂದ ಬಂದ ಸಚಿವರ ಪಟ್ಟಿ ಬೇಸರ ಮೂಡಿಸಿದ್ದು, ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹೈ ಕಮಾಂಡ್ ನಿರ್ಧಾರದಿಂದ ನನಗೆ ಬಹಳ ನೋವಾಗಿದೆ. ಬೇಸರ ತಂದಿದೆ. ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಹುಸಿಯಾಗಿದೆ. ಇದರಿಂದ ನಮ್ಮ ಕಾರ್ಯಕರ್ತರು ಹಾಗೂ ತಾಲ್ಲೂಕು ಜನರಿಗೂ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗಮನಿಸಿ: ಆಯೋಗ್ಯ-2 ‘ಮಿಲ್ಕಿ ಬ್ಯೂಟಿ’ ಹಾಡಲ್ಲಿ ನಟಿ ಪ್ರಜ್ಞಾ
ಈ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಮೂರು ವರ್ಷ ನಂತರ ಸಚಿವ ಸ್ಥಾನ ಬದಲಾವಣೆ ಮಾಡುತ್ತೇವೆ. ಅದೇ ರೀತಿ ನಿಗಮ ಮಂಡಳಿಯಲ್ಲೂ ಎರಡು ವರ್ಷದ ನಂತರ ಬದಲಾವಣೆ ಮಾಡುತ್ತೇವೆ ಎಂದಿದ್ದರು. ಆದರೆ ಈಗ ಕಾಂಗ್ರೆಸ್ ತನ್ನ ಹಳೆ ವರಸೆಯನ್ನು ಪ್ರದರ್ಶಿಸುತ್ತಿದ್ದು, ಯಾವ ಮಾನದಂಡ ಮೇಲೆ ಸಚಿವ ಸಂಪುಟಕ್ಕೆ ಶಾಸಕರನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಯಾವ ಉದ್ದೇಶದಿಂದ ನನಗೆ ಸಚಿವ ಸ್ಥಾನ ನೀಡಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷದಲ್ಲಿ ಯಾವುದೇ ರೀತಿ ಗೊಂದಲ ಸೃಷ್ಟಿಸಿಲ್ಲ. ಪ್ರತಿ ಬಾರಿ ವಿರೋಧ ಪಕ್ಷವನ್ನು ಗಟ್ಟಿಯಾಗಿ ಎದುರಿಸುತ್ತಾ ಬಂದಿದ್ದೇನೆ. ಆದರೂ ಹೈಕಮಾಂಡ್ ಪ್ರಬಲವಾದವರಿಗೆ, ಮುಖ್ಯಮಂತ್ರಿ, ಮಂತ್ರಿ ಮಕ್ಕಳಿಗೆ ಸಚಿವ ಸ್ಥಾನವನ್ನು ನೀಡುತ್ತಿದೆ. ಹೀಗಾದರೆ ಸಾಮಾನ್ಯ ಜನರಾಗಿ ಬಂದಿರುವ ನಮ್ಮ ಕಥೇ ಏನು?. ಕ್ಷೇತ್ರದ ಜನರು ನಮ್ಮನ್ನು ಆಯ್ಕೆ ಮಾಡಿ ಕಳಿಸಿದ್ದಾರೆ ಅವರಿಗೇನೆಂದು ಉತ್ತರಿಸಲಿ. ಅವರೆಲ್ಲಾ ಬೇಸರಿಂದ ಕಣ್ಣೀರು ಹಾಕುತ್ತಿದ್ದಾರೆ.
ಸಚಿವ ಸ್ಥಾನಕ್ಕಾಗಿ ನಾನು ಯಾವ ನಾಯಕರನ್ನು ಕೇಳಿಲ್ಲ. ಅವರೆಲ್ಲಾ ಮಂತ್ರಿಮಂಡಲದಲ್ಲಿ ಹಾಗೂ ಮಂತ್ರಿ ಸ್ಥಾನ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಹಾಗಾಗಿ ಯಾರನ್ನು ಮಾತನಾಡಿಸುವುದಿಲ್ಲ. ನನ್ನ ಕ್ಷೇತ್ರದ ಜನರಿಗೆ ಅವಮಾನ ಆಗಿದೆ ಹಾಗಾಗಿ ರಾಜೀನಾಮೆಯ ನೀಡುವ ತೀರ್ಮಾನ ಮಾಡಿದ್ದೇನೆ ಎಂದರು.
