ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.6
ಗುಣಮಟ್ಟದ ಶಿಕ್ಷಣ ಪ್ರಮುಖ ಆದ್ಯತೆಯಾಗಬೇಕು. ವಾಸ್ತವಾಂಶಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಮನೋಭಾವ ಬೆಳೆಸುವ ಬದಲು, ಪ್ರಶ್ನಿಸದೆ ಎಲ್ಲವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಮಕ್ಕಳಲ್ಲಿ ಬೆಳೆಯುತ್ತಿದೆ ಎಂದು ವಿಧಾನಪರಿಷತ್ತಿನ ಸದಸ್ಯರಾದ ಎಸ್.ಎಲ್. ಭೋಜೇಗೌಡ ಕಳವಳ ವ್ಯಕ್ತಪಡಿಸಿದರು.
ನಗರದ ಕಸ್ತೂರಬಾ ಪದವಿಪೂರ್ವ ಕಾಲೇಜಿನ ವತಿಯಿಂದ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿವಿಧ ವಿದ್ಯಾರ್ಥಿನಿ ಸಂಘಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಹಾಗೂ ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮೊದಲು ಆದ್ಯತೆ ನೀಡಬೇಕಾಗಿದೆ. ಮೂಲಭೂತ ವ್ಯವಸ್ಥೆಗಳಿಲ್ಲದೆ ಕೇವಲ ಹೊಸ ಶಿಕ್ಷಣ ನೀತಿಗಳನ್ನು ಜಾರಿಗೊಳಿಸಿದರೆ ನಿರೀಕ್ಷಿತ ಫಲಿತಾಂಶ ಸಾಧಿಸಲು ಸಾಧ್ಯವಾಗುವುದಿಲ್ಲ.
ಪಠ್ಯಪುಸ್ತಕಗಳ ರಚನೆ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು. ವೈಜ್ಞಾನಿಕ ಮನೋಭಾವ, ಮಾನವೀಯ ಮೌಲ್ಯಗಳು, ಭಾಷಾ ಪ್ರಾವೀಣ್ಯ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸುವಂತಹ, ನಾಡು-ನುಡಿಗೆ ಬೆಳಕಾಗುವ ಪಠ್ಯಪುಸ್ತಕಗಳನ್ನು ರೂಪಿಸುವ ಅಗತ್ಯವಿದೆ.
ಕನ್ನಡವನ್ನು ಆಡಳಿತ ಭಾಷೆಯಾಗಿ ಬಲಪಡಿಸುವ ಉದ್ದೇಶ ಶ್ಲಾಘನೀಯ. ಅದಕ್ಕೆ ಪೂರಕವಾಗಿ ಯಾವ ರೀತಿಯ ಮೂಲಭೂತ ಸೌಕರ್ಯವನ್ನು ಕನ್ನಡ ಶಾಲೆಗೆ ನೀಡಬೇಕು ಎಂಬ ದೂರದೃಷ್ಟಿ ಸರ್ಕಾರಕ್ಕಿಲ್ಲ. ಮೊದಲು ಸರ್ಕಾರಿ ಶಾಲೆಗಳ ಮೇಲೆ ಮಾನ್ಯತೆ ನವೀಕರಣದ ಮಾನದಂಡ ಅಳವಡಿಸಿ, ನಂತರ ಖಾಸಗಿ ಶಾಲೆಗಳ ಮೇಲೆ ಗುಣಮಟ್ಟದ ಮಾನದಂಡಗಳೊಂದಿಗೆ ಮೌಲ್ಯಮಾಪನ ನಡೆಸಿ ಎಂದು ಹೇಳಿದರು.
ಪದವಿಯ ನಂತರ ಕುಟುಂಬಕ್ಕೆ ನಾಡಿಗೆ ಬೆಳಕಾಗುವ ಸಂದರ್ಭದಲ್ಲಿ, ನಾವು ಓದಿದ ವಿದ್ಯಾಸಂಸ್ಥೆಯನ್ನು ಎಂದಿಗೂ ಮರೆಯದಿರಿ. ಹಿರಿಯರು ಕಟ್ಟಿದ ಸ್ವಾಸ್ಥ್ಯ ಸಮಾಜದಲ್ಲಿ ಮಾನವೀಯ ನೆಲೆಗಳೊಂದಿಗೆ ಉತ್ತಮ ಸಂಬಂಧಗಳ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಕನ್ನಡ ಸಾಹಿತ್ಯ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರೇರಣೀಯ ಮಾತುಗಳನ್ನು ನೀಡಿದೆ. ಅಂತಹ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ, ಪಡೆದ ಶಿಕ್ಷಣದಿಂದ ನಿಜವಾದ ಸಾರ್ಥಕ ಸಾಧ್ಯ ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್. ಎನ್. ನಾಗರಾಜ ಮಾತನಾಡಿ, ನಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಹಲವು ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ ಸರ್ಕಾರದಿಂದ ನೇಮಕಗೊಳ್ಳಬೇಕಾದ ಬೋಧಕರ ಕೊರತೆಯಿದ್ದರೂ, ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಆಡಳಿತ ಮಂಡಳಿಯೇ ಹೆಚ್ಚುವರಿ ಬೋಧಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡಲು ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ, ಯಾವುದೇ ವಿಷಯದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುವ ಅವಕಾಶವಿದೆ. ಆದರೆ ಮಾಹಿತಿಯನ್ನು ವಿವೇಚನೆಯೊಂದಿಗೆ ಅರ್ಥೈಸಿ, ಆಧುನಿಕ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪಠ್ಯಜ್ಞಾನದ ಜೊತೆಗೆ ವಾಸ್ತವತೆಯನ್ನು ಅರಿಯುವ ವಿವೇಚನಾ ಶಕ್ತಿಯನ್ನು, ವಿದ್ಯಾರ್ಥಿಗಳಲ್ಲಿ ಬೆಳೆಸುವ ಜವಾಬ್ದಾರಿ ಗುರುಗಳ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಇತಿಹಾಸ ಉಪನ್ಯಾಸಕರಾದ ಎಚ್.ವಿ.ಶುಭಕರ್ ದಂಪತಿಗಳನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್. ಎಸ್.ಎಚ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ.ಸಿ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷರಾದ ಸುಜನಾ.ಕೆ, ಉಪಾಧ್ಯಕ್ಷರಾದ ಯಶಸ್ವಿನಿ, ಚೇತನಾ ಕುಮಾರಿ, ಸೀಮಾ ಭಾನು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
