ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.15
ನೀಟ್ ಪರೀಕ್ಷೆಗೆ ರಾಜ್ಯ ಸರ್ಕಾರದ ವಿರೋಧವಿದ್ದು, ಯಾವುದೇ ಕಾರಣಕ್ಕೂ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಇದನ್ನು ಬ್ಯಾನ್ ಮಾಡಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರೀಕ್ಷೆಗಳ ಹೆಸರಲ್ಲಿ ಮಕ್ಕಳ ಮೇಲೆ ಶೋಷಣೆ ಆಗಬಾರದು. ಅಲ್ಲದೆ, ಪರೀಕ್ಷೆ ಕಾರಣಕ್ಕಾಗಿಯೇ ಮಕ್ಕಳ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕೆ ನಾವು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಮೂರು ಪರೀಕ್ಷೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಇದು ಯಾರದೋ ಹಿತಾಸಕ್ತಿಗೆ ಅಲ್ಲ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದೇ ಆಗಿದೆ. ಆದರೆ ನೀಟ್ ನಲ್ಲಿ ಕೆಟ್ಟ ವ್ಯವಸ್ಥೆ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವುದು ದುರಂತ” ಎಂದರು.
ರಾಜ್ಯದಲ್ಲಿ ಈ ಹಿಂದೆ ಇದ್ದ ಸಿಇಟಿ ಅತ್ಯುತ್ತುಮ ಮಾದರಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ಅದರ ಬದಲಿಗೆ ಇಡೀ ದೇಶದ್ಯಾಂತ ಏಕ ಮಾದರಿ ಇರಲಿ ಎಂದು ನೀಟ್ ಜಾರಿಗೆ ತಂದಿತು. ಆದರೆ ಅದರಿಂದ ಆಗಿದ್ದೇನು? ರಾಜಸ್ಥಾನ, ಹರಿಯಾಣದಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ದೊಡ್ಡ ಅವಾಂತರವೇ ನಡೆದು ಹೋಯಿತು. ಪರೀಕ್ಷೆಗಾಗಿ ವರ್ಷಗಟ್ಟಲೆ ಶ್ರಮವಹಿಸಿ, ಓದಿದ ವಿದ್ಯಾರ್ಥಿಗಳ ಬುದಕು ಬೀದಿಗೆ ಬಂತು. ಅವರ ಭವಿಷ್ಯದ ಜತೆಗೆ ಚೆಲ್ಲಾಟ ನಡೆಸಲಾಯಿತು. ಇದು ಅತ್ಯಂತ ಖಂಡನೀಯ. ಹಾಗಾಗಿಯೇ ರಾಜ್ಯದಲ್ಲಿ ನೀಟ್ ಬ್ಯಾನ್ ಆಗಬೇಕೆನ್ನವುದು ರಾಜ್ಯ ಸರ್ಕಾರದ ನಿಲುವು ಆಗಿದೆ” ಎಂದು ಸ್ಪಷ್ಟ ಪಡಿಸಿದರು.
ಅಧಿವೇಶನದಲ್ಲಿ ಈ ಬಗ್ಗೆ ಏನಾದರೂ ನಿರ್ಣಯ ಕೈಗೊಳ್ಳಲಾಗುತ್ತಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಈ ಬಗ್ಗೆ ಮೊದಲು ಮುಖ್ಯಮಂತ್ರಿಗಳ ಜತೆಗೆ ಚರ್ಚೆ ನಡೆಸಬೇಕಿದೆ. ಅವರು ಕೂಡ ನೀಟ್ ರದ್ದಾಗಬೇಕೆನ್ನುವುದನ್ನು ಹೇಳಿದ್ದಾರೆ. ಅದು ನಮ್ಮ ಪಕ್ಷ ನಿಲುವು ಕೂಡ ಆಗಿದೆ. ಆದರೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ, ನಿರ್ಣಯ ಕೈಗೊಳ್ಳುವುದರ ಬಗ್ಗೆ ಮೊದಲು ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಉಳಿದಂತೆ ರಾಜ್ಯದಲ್ಲಿ ನೀಟ್ ಬ್ಯಾನ್ ಆಗಬೇಕೆನ್ನುವ ನಿಲುವಿಗೆ ಸರ್ಕಾರ ಬದ್ಧ” ಎಂದು ಪುನರುಚ್ಚರಿಸಿದರು.
” ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದಾಗ ಇಂಥ ಯಾವುದೇ ಪ್ರಮಾದ ನಡೆದಿಲ್ಲ. ಸಿಇಟಿ ಪರೀಕ್ಷಾ ಮಾದರಿಯು ಇಡೀ ದೇಶಕ್ಕೆ ಮಾದರಿಯಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಸೇರಿ ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ನಿಲುವು ಸಿಇಟಿ ಪರೀಕ್ಷಾ ಮಾದರಿಯೇ ಇರಲಿ ಎನ್ನುವುದನ್ನು ನಾವು ಹೇಳಲಿದ್ದೇವೆʼ ಎಂದು ಸಚಿವರು ತಿಳಿಸಿದರು.
ನೀಟ್ ಪರೀಕ್ಷೆಯಾದ ಲೋಪಗಳಿಂದ ಕಂಗೆಟ್ಟು ಯುವಕರು ಜಂತರ್ ಮಂತರ್ ತೀವ್ರವಾಗಿ ಹೋರಾಟ ಹಮ್ಮಿಕೊಂಡಿದ್ದರು. ಇದು ನಮ್ಮೆಲ್ಲರಿಗೂ ಎಚ್ಚರಿಕೆ ಗಂಟೆ. ದೇಶ ಅಥವಾ ರಾಜ್ಯವನ್ನು ನಡೆಸುವಾಗ ಹುಷರಾಗಿರಬೇಕು. ಯಾಕೆಂದರೆ ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ಹೋರಾಟವೇ ಸಾಕ್ಷಿ ಎಂದರು.
ಮತ್ತೆ ಸಚಿವನಾಗಿದ್ದಕ್ಕೆ ಸಂತೋಷವಾಗಿದೆ:
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಿಕ್ಕಿತ್ತು. ಈಗ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಕೂಡ ಅದೇ ಇಲಾಖೆ ನೀಡಿದ್ದು, ನನಗೆ ಸಂತೋಷ ತಂದಿದೆ. ಸದನದಲ್ಲಿ ಡಿ ಕೆ ಶಿವಕುಮಾರ್ ನಾನು ಬಂಗಾರಪ್ಪನವರ ಅಡಿಯಲ್ಲಿ ಕೆಲಸ ಮಾಡಿದ್ದೆ ಈಗ ಅವರ ಮಗನು ನನ್ನ ಅಡಿಯಲ್ಲಿ ಕೆಲಸ ಮಾಡಿಸಿಕೊಳ್ಳುವುದು ನನ್ನ ಭಾಗ್ಯ ಎಂದಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತೆ ಒಂದು ಸಾವಿರ ಕೆಪಿಎಸ್ ಶಾಲೆಗಳ ಚಾಲನೆಗೆ ಅವಕಾಶ ಮಾಡಿದ್ದಾರೆ ಮಕ್ಕಳ ಸೇವೆ ಮಾಡುವ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವ ನಾಗುವ ಅವಕಾಶವನ್ನು ಕೊಟ್ಟಿದ್ದಾರೆ ಎಂದರು.
ಶರಾವತಿ ನದಿ ಸಂತ್ರಸ್ತರ ಸಮಸ್ಯೆ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಅಡ್ವೋಕೇಟ್ ಜನರಲ್ ರಾಜ್ಯದ ಪರವಾಗಿ ಮಾನದಂಡಗಳ ಪ್ರಸ್ತಾಪನೆ ಆಗಲಿದ್ದು, ಈ ಸಮಸ್ಯೆ ಅಂತಿಮ ಘಟ್ಟದಲ್ಲಿದೆ. ಇನ್ನೆರಡು ತಿಂಗಳಲ್ಲಿ ಪರಿಹಾರ ಸಿಗುವ ವಿಶ್ವಾಸ ಇದೆ. ಸುಮಾರು 9,000 ಫಲಾನುಭವಿಗಳ ಸಂಖ್ಯೆ ಗುರುತಿಸಲಾಗಿದ್ದು. ಮಾನದಂಡಗಳ ಆಧಾರದ ಮೇಲೆ ಭೂಮಿ ಹಕ್ಕು ಸಿಗಲಿದೆ ಎಂದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶ ಮಾಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಅದನ್ನು ಬೇರೆ ರೀತಿಯಲ್ಲಿ ಬದಲಾವಣೆ ಮಾಡಬೇಕು ಎಂದರು.
