Homeಜಿಲ್ಲೆಹಸಿವು, ಬಡತನ, ಅಸಮಾನತೆಯ ವಿರುದ್ಧದ ಹೋರಾಟವೇ ನಮ್ಮ ಕರ್ತವ್ಯ

ಹಸಿವು, ಬಡತನ, ಅಸಮಾನತೆಯ ವಿರುದ್ಧದ ಹೋರಾಟವೇ ನಮ್ಮ ಕರ್ತವ್ಯ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.15

“ಸ್ವಾತಂತ್ರ‍್ಯ ಎಂದರೆ ಕೇವಲ ಧ್ವಜ ಹಾರಿಸುವುದಲ್ಲ, ಪ್ರತಿಯೊಬ್ಬ ಮನುಷ್ಯನೂ ಗೌರವದಿಂದ ಬದುಕುವ ವಾತಾವರಣ ನಿರ್ಮಿಸುವುದೇ ನಿಜವಾದ ಸ್ವಾತಂತ್ರ‍್ಯ. ಹಸಿವು, ಬಡತನ ಮತ್ತು ಅಸಮಾನತೆಯ ವಿರುದ್ಧದ ಹೋರಾಟವೇ ನಮ್ಮ ಇಂದಿನ ಕರ್ತವ್ಯ” ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ  ಶನಿವಾರ ಏರ್ಪಡಿಸಲಾಗಿದ್ದ 80ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಶುಭಾಶಯ ಕೋರಿ ಸಂದೇಶ ನೀಡಿರುವ ಅವರು, ಸೌಹಾರ್ದತೆ, ಸಾಮಾಜಿಕ ನ್ಯಾಯ ಸಂವಿಧಾನದ ಗೌರವವಾಗಿದೆ. ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಿ, ಕನ್ನಡದ ನೆಲ-ಜಲ-ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾ ಶಿವಮೊಗ್ಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಅದಕ್ಕೆ ಸರ್ವರ ಸಹಕಾರ ಬೇಕಾಗಿದೆ ಎಂದರು.

ಗಮನಿಸಿ: ನೀಟ್ ಪರೀಕ್ಷೆ ಬ್ಯಾನ್ ಮಾಡಬೇಕು: ಮಧು ಬಂಗಾರಪ್ಪ

1947 ರ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗಕ್ಕೆ ಗೌರವ ಸಲ್ಲಿಸುತ್ತಾ, ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಹೊಣೆ. ಈಸೂರಿನ ಸ್ವಾಭಿಮಾನವನ್ನು ಉಳಿಸಿ, ಕುವೆಂಪು ಅವರ ‘ವಿಶ್ವಮಾನವ’ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಹೊಸ ಅವಕಾಶ, ರೈತರಿಗೆ ಬಲ ಹಾಗೂ ಪ್ರತಿಯೊಬ್ಬರಿಗೂ ಗೌರವಯುತ ಬದುಕು ನೀಡುವ ಹೊಸ ಭಾರತವನ್ನು ಕಟ್ಟಲು ಒಟ್ಟಾಗಿ ಹೋರಾಡಿ ಗೆಲ್ಲೋಣ ಎಂದು ಕರೆ ನೀಡಿದರು.

ಭಾರತ್ ಜೋಡೋ ಯುವಕ ಸಂಘ:

ಯುವಶಕ್ತಿಯನ್ನು ಸಮಾಜ ನಿರ್ಮಾಣದಲ್ಲಿ ತೊಡಗಿಸುವ ಉದ್ದೇಶದಿಂದ ರಾಜ್ಯಾದ್ಯಂತ 10,000 “ಭಾರತ್ ಜೋಡೋ ಯುವಕ ಸಂಘ” ಗಳನ್ನು ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ. ಪ್ರತಿ ಯುವಕ ಸಂಘಕ್ಕೆ ಸರ್ಕಾರವು ವಾರ್ಷಿಕ ರೂ.10 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ನೀಡಲಿದ್ದು, ಯುವಜನತೆ ಉದ್ಯೋಗ, ಶಿಕ್ಷಣ ಮತ್ತು ಸಮಾಜದ ಏಳಿಗೆಗಾಗಿ ಧ್ವನಿ ಎತ್ತಲು ಹಾಗೂ ಸರ್ಕಾರದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಇದು ವೇದಿಕೆಯಾಗಲಿದೆ ಎಂದರು.

1000 ಕೆಪಿಎಸ್ ಶಾಲೆಗಳು:

ರಾಜ್ಯದಲ್ಲಿ 1,000 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲಾಗಿದ್ದು, ಮುಂದಿನ ಹಂತದಲ್ಲಿ ಮತ್ತಷ್ಟು 1,000 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ 11 ಕೆಪಿಎಸ್ ಶಾಲೆಗಳು ಕಾರ್ಯಾಚರಿಸುತ್ತಿದ್ದು, ಈ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ 59 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಜಿಲ್ಲೆಯ 222 ಸರ್ಕಾರಿ ಶಾಲೆಗಳಲ್ಲಿ ಪೂರ್ವಾ ಪ್ರಾಥಮಿಕ ತರಗತಿಗಳು ನಡೆಯುತ್ತಿವೆ. ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗೆ 319 ಲಕ್ಷ ಹಾಗೂ ನೂತನ ಕೊಠಡಿಗಳ ನಿರ್ಮಾಣಕ್ಕೆ ರೂ. 1,180 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

‘ರೈತ ಮಿತ್ರ’:

ರೈತರ ಹಿತರಕ್ಷಣೆಗಾಗಿ ‘ಮುಖ್ಯಮಂತ್ರಿಗಳ ರೈತ ಚೈತನ್ಯ’ ಹಾಗೂ ‘ರೈತ ಮಿತ್ರ’ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮುಂಗಾರು ಮಳೆಯ ಏರುಪೇರು, ಅತಿವೃಷ್ಟಿ ಹಾಗೂ ಬೆಳೆ ಹಾನಿಗೊಳಗಾದ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ತ್ವರಿತ ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಾರ್ವಜನಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸಲು ‘ಪ್ರಜಾಸೇವೆ’ ಎಂಬ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲಾಗಿದೆ. ತಾಲೂಕು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ಸ್ಥಳದಲ್ಲೇ ಸಮಸ್ಯೆ ಪರಿಹರಿಸುವ ‘ಪ್ರಜಾಸೇವಾ ಅಭಿಯಾನ’ ಜಾರಿಗೆ ಬಂದಿದೆ.

‘ಯುವ ಉದ್ಯೋಗ ಸೇತು’:

ಖಾಸಗಿ ವಲಯದಲ್ಲಿ ಉದ್ಯೋಗ ಬಯಸುವ ಯುವಕರು ಮತ್ತು ಉದ್ಯೋಗದಾತರ ನಡುವೆ ಸಂಪರ್ಕ ಕಲ್ಪಿಸಲು ಂI (ಕೃತಕ ಬುದ್ಧಿಮತ್ತೆ) ಆಧಾರಿತ ‘ಯುವ ಉದ್ಯೋಗ ಸೇತು’ ವೇದಿಕೆಯನ್ನು ಜಾರಿಗೆ ತರಲಾಗಿದೆ.

ಮೆಗ್ಗಾನ್ ಆಸ್ಪತ್ರೆ ಮೇಲ್ದರ್ಜೆ:

ಮೆಗ್ಗಾನ್ ಆಸ್ಪತ್ರೆಯ ಮೇಲ್ದರ್ಜೆಗೆ ಏರಿಸುವ ಕೆಲಸ ನಡೆಯುತ್ತಿದ್ದು, ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ವಿಭಾಗ ಹಾಗೂ ತೀವ್ರ ನಿಗಾ ಘಟಕಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ದಶಕಗಳಿಂದ ಬಾಕಿ ಇರುವ ಶರಾವತಿ ಸಂತ್ರಸ್ತರ ಹಾಗೂ ಬಗರ್ ಹುಕ್ಕುಂ ಸಾಗುವಳಿದಾರರ ಹಕ್ಕುಗಳ ನಿವಾರಣೆಗೆ ಸರ್ಕಾರ ಆದ್ಯತೆ ನೀಡಿದೆ.

ರೈತರು, ಬಡವರು ಹಾಗೂ ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ‘ಎಸ್‌ಆರ್ ಬೊಮ್ಮಾಯಿ’ ಮತ್ತು ‘ದೇವರಾಜ ಅರಸು’ ಅವರ ಆಶಯದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 1990ರಲ್ಲಿ ಕೇವಲ 12,000 ಹೆಕ್ಟೇರ್ ಇದ್ದ ಅಡಿಕೆ ಬೆಳೆಯು ಇಂದು 1.4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ಇಂತಹ ಹಲವು ಜನಪರ ಯೋಜನೆಗಳ ಮೂಲಕ ಜನರ ಜೀವನಮಟ್ಟ ಸುಧಾರಿಸಿದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ಇಂದಿಗೂ ರಾಜ್ಯದ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ ಎಂದರು.

ಸ್ವಾತಂತ್ರ‍್ಯೋತ್ಸವ ವಿಶೇಷತೆಗಳು :

29 ಕವಾಯಿತು ತುಕಡಿಗಳು ಶಿಸ್ತು ಮತ್ತು ಆಕರ್ಷಕ ಪಥ ಸಂಚಲನ ನಡೆಸಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಡಿಎಆರ್ ಆರ್ ಪಿಐ ಯುವರಾಜ್ ಇವರು ಕವಾಯಿತು ಮುಖ್ಯ ದಂಡ ನಾಯಕರಾಗಿ ಕನ್ನಡದಲ್ಲಿ ಆದೇಶಗಳನ್ನು ನೀಡಿದರು. ವಿವಿಧ ಶಾಲಾ-ಕಾಲೇಜುಗಳಿಂದ ಸುಮಾರು 18000 ಮಕ್ಕಳು ಸ್ವಾತಂತ್ರ‍್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದರಲ್ಲಿ ಉತ್ತಮವಾದ ಪಥಸಂಚಲ, ನೃತ್ಯಕ್ಕೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕರಾದ ಎಸ್ ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ರಾಜ್ಯ ಜವಳ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ ಚೇತನ್ ಗೌಡ, ರಾಜ್ಯ ಎಸ್ ಸಿ, ಎಸ್ ಟಿ, ಅಲೆಮಾರಿಗಳ ಅಭಿವೃದ್ದಿ ಸಂಘದ ಅಧ್ಯಕ್ಷೆ ಪಲ್ಲವಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ಎಸಿ, ತಹಶೀಲ್ದಾರ್, ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments