ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.15
ಶಿಕ್ಷಣದ ಮೂಲಕ ಸಮಾಜದ ಭವಿಷ್ಯ ಕಟ್ಟುವ ಮಹತ್ವದ ಕಾರ್ಯಕ್ಕೆ ಶತಮಾನಕ್ಕೂ ಹೆಚ್ಚು ಕಾಲದಿಂದ ಸಾಕ್ಷಿಯಾಗಿರುವ ಶಿವಮೊಗ್ಗದ ನಗರ ಡಿವಿಷನ್ ವೀರಶೈವ ವಿದ್ಯಾರ್ಥಿ ನಿಲಯ (ಎನ್.ಡಿ.ವಿ. ಹಾಸ್ಟೆಲ್) ಇದೀಗ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ರೂಪ ಪಡೆದು ಭಾನುವಾರ ಉದ್ಟಾಟನೆಗೆ ಸಜ್ಜಾಗಿದೆ.
ಹಳೆಯ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವಸತಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 9 ಕೋಟಿ ವೆಚ್ಚದಲ್ಲಿ ಈ ಭವ್ಯ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದೆ.
ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಅವಕಾಶ ಕಲ್ಪಿಸುವ ದೂರದೃಷ್ಟಿಯಿಂದ ಈವಿದ್ಯಾರ್ಥಿ ನಿಲಯದ ಪರಂಪರೆ ಆರಂಭಗೊಂಡಿತ್ತು. ಗ್ರಾಮೀಣ ಹಾಗೂ ದೂರದ ಪ್ರದೇಶಗಳಿಂದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಿದ್ದ ವಿದ್ಯಾರ್ಥಿಗಳಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ 1916ರಲ್ಲಿ ಶಿವಮೊಗ್ಗದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಚಾಲನೆ ದೊರೆಯಿತು.
1916 ʻಸ್ಪೂಡೆಂಟ್ಸ್ ಹೋಮ್ʼ:
1916 ರಲ್ಲಿ ವೀರಶೈವ ಸಮಾಜ ಶೈಕ್ಷಣಿಕವಾಗಿ ಮಾತ್ರವಲ್ಲದೆ ಹಲವು ವಿಚಾರಗಳಲ್ಲಿ ಹಿಂದುಳಿದಿತ್ತು. ಅದಕ್ಕೆ ಕಾರಣ ಸಮಾಜದಲ್ಲಿ ಬಹಳಷ್ಟು ವಿದ್ಯಾವಂತರು ಇಲ್ಲದಿರುವುದನ್ನು ಗಮನಸಿ ಈ ಲೋಪವನ್ನು ಹೋಗಲಾಡಿಸಲು ನಾವು ಯಾವುದೊಂದು ಉಪಾಯ ಕೈಗೊಳ್ಳಬೇಕೆಂದು ಆಗಿನ ಸಮಾಜದ ಸ್ವಾಮೀಜಿಗಳು ಹಾಗೂ ಗುರು ಹಿರಿಯರು ಚರ್ಚಿಸಿದ್ದರು.
ವಿದ್ಯಾಭಿವೃದ್ಧಿಗೆ ಮಾಡಬೇಕಾದ ಸೌಕರ್ಯಗಳಲ್ಲಿ ಮುಖ್ಯವಾದುದು ವಿದ್ಯಾರ್ಥಿಗಳಿಗೆ ಅನ್ನ ದಾಸೋಹ ಮತ್ತು ಏಕಾಂತ ಪಾಠ ಅದಕ್ಕೆ ಅನುಕೂಲವಾಗುವ ʻಸ್ಪೂಡೆಂಟ್ಸ್ ಹೋಮ್ʼ ಅಂದರೆ ವಿದ್ಯಾರ್ಥಿ ನಿಲಯ ಆರಂಭಿಸಲು ನಿರ್ಧಿರಿಸಿದ್ದರು.
ಈ ವಿಷಯದಲ್ಲಿ ಅನಂತಪುರ ಮಠದ ಮಹಾಸ್ವಾಮಿಗಳಾದ ಶ್ರೀ ಮನ್ನಿರಂಜನ ಜಗದ್ಗುರು ಅವರು ಶಿವಮೊಗ್ಗದಲ್ಲಿ ಒಂದು ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಬೇಕೆಂದು, ಅಲ್ಲದೆ ಅದರ ಪೋಷಣೆಗಾಗಿ ಒಂದು ಫಂಡನ್ನು ಶೇಖರಿಸಬೇಕೆಂದು ಬಹು ದಿನಗಳಿಂದ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಾ ಬಂದಿದ್ದರು.
ಅಂದಿನ ಮೈಸೂರು ಮಹಾರಾಜರ ಸರ್ಕಾರ ಆ ವರ್ಷದ ಬಜೆಟ್ ನಲ್ಲಿ ಹಿಂದುಳಿದ ಜನಾಂಗದ ಪ್ರೋತ್ಸಾಹಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಮಾಡಿತ್ತು. ಆಗಿನ ಕಾಲಕ್ಕೆ ಅದೊಂದು ದೊಡ್ಡ ಮೊತ್ತವಾಗಿದ್ದು, ಉದ್ದೇಶ ಸಾಧನೆಗೆ ಚಾಲನೆ ನೀಡಿತು. ಈ ಉದ್ದೇಶವನ್ನು ಯಾವ ರೀತಿ ನೆರವೇರಿಸಬೇಕೆಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲು ವೀರಶೈವ ಮತಾಭಿಮಾನಿಗಳ ಸರ್ವರ ಸಮ್ಮೇಳನವನ್ನು ಸಂಘಟಿಸಿ, 1916 ಸೆ 23 ರಂದು ಆನಂತಪುರದ ಶ್ರೀ ಮನ್ನಿರಂಜನ ಜಗದ್ಗುರು ಲಿಂಗ ಮಹಾಸ್ವಾಮಿಗಳಾವರ ಅದ್ಯಕ್ಷತೆಯಲ್ಲಿ ಸಭೆ ಸೇರಿಸಿ, ನಗರ ಡಿವಿಜನ್ ವೀರಶೈವ ವಿದ್ಯಾವರ್ಧಕ ಸಂಘ ವನ್ನು ಸ್ಥಾಪಿಸಿ ಅದರ ಮೂಲಕ ಕಾರ್ಯಾನಿರ್ವಹಿಸಲು ನಿರ್ಧರಿಸಲಾಯಿತು.
ಈ ಉದ್ದೇಶ ಸಾಧನೆಯ ಅಭಿವೃದ್ಧಿಗಾಗಿ 1 ಲಕ್ಷ ರೂ. ಫಂಡನ್ನು ಕೂಡಿಸಬೇಕೆಂದು ನಿರ್ಧರಿಸಲಾಯಿತು, ಇದಕ್ಕೆ ಮುಖ್ಯ ಪೋಷಕರಾಗಿದ್ದುಕೊಂಡು ಸರ್ವ ವಿಧದಿಂದಲೂ ಸಂಘವನ್ನು ಏಳಿಗೆಗೆ ತರುವ ಪ್ರಮುಖ ಜವಾಬ್ದಾರಿಯನ್ನು ಶ್ರೀಮನ್ನಿ ರಂಜನ ಜಗದ್ಗುರು ಶ್ರೀ ಲಿಂಗ ಸ್ವಾಮಿಗಳವರು ವಹಿಸಕೊಂಡು ನೆರವೇರಿಸಿದ್ದರು.
ಈ ಸಂಸ್ಥೆಯ ಬೆಳವಣಿಗೆಯಲ್ಲಿ ಸಮಾಜದ ಅನೇಕ ದಾನಿಗಳ ಕೊಡುಗೆ ಸ್ಮರಣೀಯ. ಖ್ಯಾತ ರಂಗಕರ್ಮಿ ಗುಬ್ಬಿ ವೀರಣ್ಣನವರು ಶಿವಮೊಗ್ಗದಲ್ಲಿ ನಾಟಕ ಪ್ರದರ್ಶಿಸಿ ಬಂದ ಆದಾಯವನ್ನು ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ನೀಡಿದ್ದರೆಂಬುದು ಸಂಸ್ಥೆಯ ಸೇವಾ ಪರಂಪರೆಗೆ ಸಾಕ್ಷಿಯಾಗಿದೆ.
ಶ್ರೀ ಮುರುಘರಾಜೇಂದ್ರ ಸಂಸ್ಥಾನ ಮಠದ ಶ್ರೀಮನ್ನಿ ರಂಜನ ಜಗದ್ಗುರು ಶ್ರೀಲಿಂಗ ಸ್ವಾಮಿಗಳು 11,000, ಲಕ್ಷೇಶ್ವರದ ಅಡೆವೆಪ್ಪ ಶೆಟ್ಟರು 3000 ರೂ. ನಲ್ಲೂರು ಹಾಲಪ್ಪ ಗೌಡರು-1000, ಕಾಡಪ್ಪನವರು ಆನರಿ ರಿಮ್ಯಾಜಿಸ್ಟ್ರೇಟ್ ಶಿವಮೊಗ್ಗ, ದುಮ್ಮಿ ಪಂಚಾಕ್ಷರಪ್ಪ ನವರು ಶಿವಮೊಗ್ಗ, ಶೇಡಿಗಾರ್ ಹಾಲಪ್ಪನವರು ಶಿವಮೊಗ್ಗ, ಗಾಜನೂರು ಚನ್ನಪ್ಪನವರು ಹಾರನಹಳ್ಳಿ, ರೇವಣ ಸಿದ್ದಪ್ಪನವರು ನ್ಯಾಮತಿ, ನೌಲಪ್ಪ ಗೌಡರು ನಿಧಿಗೆ, ಶಿವಪ್ಪ ಗೌಡರು, ದೊಡ್ಡ ಗೊಪೇನಹಳ್ಳಿ, ಚನ್ನಪ್ಪಗೌಡರು ನಾಗಸಮುದ್ರ ತಲಾ 500 ರಂತೆ ದೇಣಿಗೆ ನೀಡಿದ್ದರು.
ಇನ್ನೂ ಅನೇಕರು ನೂರಾರು ರೂಪಾಯಿಗಳಂತೆ ಸಹಾಯ ಮಾಡಿದ್ದರು. ಸಿದ್ಧನಮಠದ ಮ್ಯಾನೇಜಿಂಗ್ ಕಮಿಟಿಯವರು ಈ ಫಂಡಿಗೆ ಸದ್ಯಕ್ಕೆ 6000 ರೂ. ಗಳನ್ನು ಕೊಟ್ಟು ಚಿರ ಸ್ಮರಣೀಯವಾದ ಧನಸಹಾಯವನ್ನು ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಸಮಾಜದ ಕರ್ತವ್ಯವಾಗಿದೆ.
ಅಂದಿನ ಡೆಪ್ಯುಟಿ ಸೂಪರಿಂಟೆಂಡೆಂಟ್ ಸಿದ್ಧರಾಮಣ್ಣನವರು ಶಿವಮೊಗ್ಗದ ಹೃದಯ ಭಾಗವಾದ ಹಳೆ ತಾಲ್ಲೂಕು ಕಚೇರಿ ರಸ್ತೆಯ ಪಕ್ಕದಲ್ಲಿ ವಿದ್ಯಾರ್ಥಿ ನಿಲಯಕ್ಕೆ ನಿವೇಶನ ನೀಡಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಸಹಕಾರವಾಯಿತು.
ಗಣ್ಯರನ್ನು ರೂಪಿಸಿದ ವಸತಿ ವಿದ್ಯಾಲಯ:
ಎನ್.ಡಿ.ವಿ. ವಿದ್ಯಾರ್ಥಿ ನಿಲಯ ಕೇವಲ ವಸತಿ ವ್ಯವಸ್ಥೆ ಕಲ್ಪಿಸಿದ ಸಂಸ್ಥೆಯಾಗಿರದೆ, ಹಲವು ಪ್ರತಿಭೆಗಳಿಗೆ ದಾರಿ ತೋರಿದ ವಿದ್ಯಾ ಕೇಂದ್ರವಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕರು ಕನ್ನಡ ನಾಡಿನ ಸಾಹಿತ್ಯ, ಪತ್ರಿಕೋದ್ಯಮ, ಕಲೆ, ಸಂಸ್ಕೃತಿ, ಆಡಳಿತ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ಮೈಸೂರು ಪ್ರಾಂತ್ಯದ ಸಚಿವ ಎಲ್. ಸಿದ್ದಪ್ಪ, ಮಾಜಿ ಸಚಿವ ಎಚ್. ಸಿದ್ದಯ್ಯ, ಖ್ಯಾತ ನ್ಯಾಯವಾದಿ ಎಚ್. ಲಿಂಗಪ್ಪ, ಮಾಜಿ ವಿಧಾನಸಭೆ ಸ್ಪೀಕರ್ ಹಾಗೂ ಸಚಿವರಾಗಿದ್ದ ಎಚ್.ಎಸ್. ರುದ್ರಪ್ಪ, ಸಾಹಿತಿ ಎಚ್. ತಿಪ್ಪೇರುದ್ರ ಸ್ವಾಮಿ, ಖ್ಯಾತ ಪತ್ರಕರ್ತ ಪಿ. ಲಂಕೇಶ್ ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆಯ ಅಧ್ಯಯನಕ್ಕೆ ಹೆಸರಾದ ಪ್ರೊ.ನಂಜುಂಡಪ್ಪ ಸೇರಿದಂತೆ ಹಲವು ಗಣ್ಯರ ವಿದ್ಯಾಭ್ಯಾಸದ ನೆನಪು ಈ ಸಂಸ್ಥೆಯೊಂದಿಗೆ ಬೆಸೆದುಕೊಂಡಿದೆ.
ಹೀಗಾಗಿ, ಎನ್.ಡಿ.ವಿ. ಹಾಸ್ಟೆಲ್‌ನ ಇತಿಹಾಸವೆಂದರೆ ಕೇವಲ ಒಂದು ಕಟ್ಟಡದ ಇತಿಹಾಸವಲ್ಲ. ಅದು ಶಿಕ್ಷಣಕ್ಕಾಗಿ ಹೋರಾಡಿದ ಹಿರಿಯರ ದೂರದೃಷ್ಟಿ, ದಾನಿಗಳ ಸೇವಾ ಮನೋಭಾವ ಮತ್ತು ವಿದ್ಯಾರ್ಥಿಗಳ ಕನಸುಗಳ ಇತಿಹಾಸವಾಗಿದೆ.
ಶಿಥಿಲ ಕಟ್ಟಡಕ್ಕೆ ಬದಲಾಗಿ ಈಗ ಆಧುನಿಕ ಸೌಲಭ್ಯವುಳ್ಳ ಸುಸಜ್ಜಿತ ವಿದ್ಯಾ ಕೇಂದ್ರ:
ಪ್ರಸ್ತುತ ಪೀಠಾಧಿಕಾರಿಗಳಾದ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನಡೆಯುತ್ತಿದ್ದು, ಹಳೆಯ ಕಟ್ಟಡ ಶಿಥಿಲಗೊಂಡು ವಿದ್ಯಾರ್ಥಿಗಳ ವಾಸಕ್ಕೆ ಸೂಕ್ತವಾಗದ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಆಯನೂರು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸ್ಥ ಮಂಡಳಿ ಸಭೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದ್ದು, ಸಮಾಜದ ಪ್ರಮುಖರು, ವಿದ್ಯಾ ಪ್ರೇಮಿಗಳು ಹಾಗೂ ದಾನಿಗಳ ಸಹಕಾರ ಪಡೆಯಲು ಮುಂದಾಗಿದ್ದರು. ನೂತನ ಕಟ್ಟಡವು ಕೇವಲ ವಿದ್ಯಾರ್ಥಿಗಳವಸತಿ ಕೇಂದ್ರವಾಗಿರದೆ, ಅಧ್ಯಯನ, ತರಬೇತಿ ಮತ್ತು ವ್ಯಕ್ತಿತ್ವ ವಿಕಸನದ ಸಮಗ್ರ ಕೇಂದ್ರವಾಗುವ ಉದ್ದೇಶ ಹೊಂದಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಅವಕಾಶ:
ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡದಲ್ಲಿ ವಿಶಾಲ ಗ್ರಂಥಾಲಯ, ಪ್ರಾರ್ಥನಾ ಹಾಲ್, ಪ್ರಸಾದ ನಿಲಯ, ಆಧುನಿಕ ಅಡುಗೆ ಮನೆ ಹಾಗೂ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗುವುದು. ಇದರ ಜೊತೆಗೆ ಕೆಎಎಸ್, ಯುಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ವಿಶಾಲವಾದ ತರಬೇತಿ ಹಾಗೂ ಅಧ್ಯಯನ ಹಾಲ್ ನಿರ್ಮಿಸುವ ಉದ್ದೇಶವೂ ಇದೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ.
ಹಿರಿಯರ ಕನಸು:
ಶಿವಮೊಗ್ಗದ ಶತಮಾನದ ವಿದ್ಯಾಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಇಂದಿನ ಸಮಾಜದ ಹೊಣೆಗಾರಿಕೆಯಾಗಿದೆ. ಒಂದು ಕಾಲದಲ್ಲಿ ಹಿರಿಯರು ತಮ್ಮ ತನು–ಮನ–ಧನವನ್ನು ಅರ್ಪಿಸಿ ನಿರ್ಮಿಸಿದ ಈ ಸಂಸ್ಥೆ ಇಂದು ಹೊಸ ಸವಾಲುಗಳ ನಡುವೆ ಹೊಸ ಪೀಳಿಗೆಯನ್ನು ರೂಪಿಸುವ ಅಗತ್ಯ ಎದುರಿಸುತ್ತಿದೆ. ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸುರಕ್ಷಿತ ವಸತಿ, ಅಧ್ಯಯನದ ವಾತಾವರಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರಕಬೇಕು. ಈ ಉದ್ದೇಶದಿಂದ ನಿರ್ಮಾಣಗೊಳ್ಳಲಿರುವ ನೂತನ ವಿದ್ಯಾರ್ಥಿನಿಲಯಕ್ಕೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸುವುದು, ಹಿರಿಯರು ಕಟ್ಟಿಕೊಟ್ಟ ವಿದ್ಯಾ ಪರಂಪರೆಗೆ ಸಲ್ಲಿಸುವ ಗೌರವವಾಗಲಿದೆ.
“ನಾವು ನೀಡುವ ದೇಣಿಗೆ ಕೇವಲ ಕಟ್ಟಡ ನಿರ್ಮಿಸುವುದಿಲ್ಲ.ಅದು ಒಬ್ಬ ವಿದ್ಯಾರ್ಥಿಯ ಕನಸಿಗೆ ರೆಕ್ಕೆ ನೀಡುತ್ತದೆ. ಇಂದು ನಾವು ಮಾಡುವ ಸಹಾಯ ನಾಳಿನ ಪೀಳಿಗೆಯ ಭವಿಷ್ಯವನ್ನು ರೂಪಿಸಲಿದೆ. ಎಂಬ ಆಶಯದೊಂದಿಗೆ ದಾನಿಗಳು ಉದಾರವಾಗಿ ನೆರವು ನೀಡುವಂತೆ ಮನವಿ ಮಾಡಲಾಗಿತ್ತು.
ಈಗ ಮಂಡಳಿ ಅಧ್ಯಕ್ಷ ಆಯನೂರು ಮಂಜುನಾಥ್ ಕಟ್ಟಡ ಸಮಿತಿ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯರು ಎಸ್. ರುದ್ರೇಗೌಡ, ಗೌರವ ಕಾರ್ಯದರ್ಶಿ ಪಿ. ರುದ್ರೇಶ್ ಇವರು ನೇತೃತ್ವದಲ್ಲಿ ಭವ್ಯ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದ್ದು, ಲೋಕಾರ್ಪಣೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿದೆ.
