ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.18
ಭ್ರಷ್ಟಾಚಾರಿ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಅತ್ಯಂತ ಖಂಡನೀಯವಾಗಿದ್ದು, ಅವರನ್ನು ಸಂಪುಟದಿAದ ಕೂಡಲೇ ಕೈಬಿಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಬಿಜೆಪಿಯಿಂದ ಹಮ್ಮಿಕೊಂಡಿರುವ ಸಚಿವ ನಾಗೇಂದ್ರ ಪದಚ್ಯುತಿಗೆ ಆಗ್ರಹಿಸಿ ಡಿಸಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಎಸಗಿದ್ದ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಆದರೆ, ಈಗ ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಭ್ರಷ್ಟ ಕಾಂಗ್ರೆಸ್ ನ ಮುಖವಾಡ ಕಳಚಿ ಬಿದ್ದಿದೆ. ಇದು ಭ್ರಷ್ಟ ದರೋಡೆಕೋರ ಸರ್ಕಾರ. ಎಸ್‌ಸಿ, ಎಸ್‌ಟಿ ನಿಗಮದ ರೈತರ ಗಂಗಾ ಕಲ್ಯಾಣ ಯೋಜನೆಯ ಹಣ ನುಂಗಿದ್ದಾರೆ. 187 ಕೋಟಿ ರೂ.ಗಳನ್ನು ಪೆಟ್ರೋಲ್ ಬಂಕ್ ಸೇರಿದಂತೆ ಇನ್ನಿತರ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿ ಅಲ್ಲಿಂದ ಬಂಗಾರದ ಬಿಸ್ಕೆಟ್ ಹಾಗೂ ನಗದು ರೂಪದಲ್ಲಿ ಮತ್ತು ಹವಾಲಾ ರೂಪದಲ್ಲಿ 2024ರ ಪಾರ್ಲಿಮೆಂಟ್ ಚುನಾವಣೆಗೆ ಹಾಗೂ ಹೈಕಮಾಂಡ್‌ಗೆ ನೀಡಲು ಬಳಸಿಕೊಂಡಿದೆ ಎಂದು ಇಡಿ ಚಾರ್ಜ್ಶೀಟ್‌ನಲ್ಲಿ ತಿಳಿಸಿದೆ ಎಂದರು.
ಗಮನಿಸಿ: ಬಿ.ಕೆ.ಹರಿಪ್ರಸಾದ್ ಒಬ್ಬ ಗೂಂಡಾ: ಕೆ.ಎಸ್.ಈಶ್ವರಪ್ಪ
ಈ ಕಾಂಗ್ರೆಸ್‌ಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಮತದಾರರಿಗೆ ಸುಳ್ಳು ಭರವಸೆ ಹಾಗೂ ಆಮಿಷವೊಡ್ಡಿ 140 ಸೀಟ್ ಬಂದಿದೆ. ನಮ್ಮ ಸರ್ಕಾರ ಇರುವಾಗ ಮಾಡಿದ ಯೋಜನೆಗಳನ್ನು ಅಲ್ಪಸ್ವಲ್ಪ ಮುಗಿಸಿದ್ದು ಬಿಟ್ಟರೆ ಒಂದೇ ಒಂದು ಹೊಸ ಯೋಜನೆಗೆ ಗುದ್ದಲಿ ಪೂಜೆ ಮಾಡಿಲ್ಲ. ಗ್ಯಾರಂಟಿ ಹೆಸರಲ್ಲಿ ಹಿಂದುಳಿದ ವರ್ಗದ ಮತ್ತು ಪರಿಶಿಷ್ಟ ಜಾತಿ, ಪಂಗಡದ ಅನುದಾನವನ್ನು ಲೂಟಿ ಹೊಡೆದಿದ್ದೇ ಇವರ ಸಾಧನೆ ಎಂದು ಟೀಕಿಸಿದರು.
ಶಕ್ತಿ ಯೋಜನೆಯಲ್ಲೂ ಮೋಸ. ಬಸ್ ಗಳನ್ನು ಹೆಚ್ಚಿಗೆ ಮಾಡಿಲ್ಲ. ಒಂದೆಡೆ ಟಿಕೆಟ್ ದರ ಏರಿಸಿದರು. ಗ್ರಾಮಾಂತರ ಮಕ್ಕಳಿಗೆ ಶಾಲಾ, ಕಾಲೇಜುಗಳಿಗೆ ಹೋಗಲು ಬಸ್ ಇಲ್ಲದಂತೆ ಮಾಡಿದರು. ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ 5 ಸಾವಿರ ಕೋಟಿ ರೂ. ನಾಪತ್ತೆ ಮಾಡಿದರು. 200 ಯೂನಿಟ್ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ಎಂದು ಹೇಳಿ ವಿದ್ಯುತ್ ದರ ಏರಿಸಿ ಈಗ 50 ಯೂನಿಟ್‌ಗಿಂತ ಜಾಸ್ತಿ ಬಳಸಿದರೆ ಹೆಚ್ಚುವರಿ ಶುಲ್ಕ ಹಾಕುತ್ತಿದ್ದಾರೆ. ಲೆಕ್ಕಕ್ಕೆ ಮಾತ್ರ ಚೆಕ್ಕುಲಿ ಕಾಣುತ್ತಿದ್ದು, ಒಳಗಿನ ಸುರುಳಿಯನ್ನು ತಿಂದು ಮುಗಿಸಿದ್ದಾರೆ. ಇದು ಕಾಂಗ್ರೆಸ್ ಆಡಳಿತ ವೈಖರಿ ಎಂದರು.
ಕೇಂದ್ರದಿಂದ ಜಿಲ್ಲೆಗೆ ಈಗಾಗಲೇ ಬ್ಯಾಟರಿ ಚಾಲಿತ 50 ಬಸ್ ಗಳು ಬಂದಿವೆ. ರೈತರಿಗೆ ಕೃಷಿ ಸಮ್ಮಾನ್ ಯೋಜನೆ ನೀಡಿದ್ದು ಮೋದಿ ಸರ್ಕಾರ. ಬಿಎಸ್‌ವೈ 4 ಸಾವಿರ ರೂ. ಸೇರಿಸಿ 10 ಸಾವಿರ ಕೊಡುತ್ತಿದ್ದರು. ಈಗ ಅದನ್ನು ಈ ಸರ್ಕಾರ ನಿಲ್ಲಿಸಿದೆ. ರೈತರ ಮಕ್ಕಳಿಗೆ ಬೊಮ್ಮಾಯಿ ಸರ್ಕಾರ ನೀಡಿದ್ದ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಿದೆ. ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನೂ ಸರಿಯಾಗಿ ಕೊಡುತ್ತಿಲ್ಲ. ವಾಲ್ಮೀಕಿ ಸಮುದಾಯದ ಬೇರೆ ಯಾರಿಗಾದರೂ ಮಂತ್ರಿ ಸ್ಥಾನ ಕೊಡಿ. ಆದರೆ, ನಾಗೇಂದ್ರ ಅವರನ್ನು ಮುಂದುವರೆಸಿದರೆ ನಮ್ಮ ಹೋರಾಟ ನಿಲ್ಲಿವುದಿಲ್ಲ ಎಂದರು.
15ನೇ ಹಣಕಾಸು ನಿಧಿ ಅನುದಾನ ಕೊಡಬೇಕಾದರೆ ಮೊದಲು ಗ್ರಾ.ಪಂ ಚುನಾವಣೆ ನಡೆಸಿ ಎಂದು ಮೋದಿ ಸರ್ಕಾರ ತಾಕೀತು ಮಾಡಿದ ಬಳಿಕ ಈಗ ಗ್ರಾಪಂ ಚುನಾವಣೆಗೆ ಮುಂದಾಗಿದೆ ಎಂದರು.
ನೀಟ್ ಪರೀಕ್ಷೆ ಮಾಡಿದ್ದರಿಂದ ಅನೇಕ ಬಡ ಮಕ್ಕಳಿಗೆ ವೈದ್ಯ ಸೀಟ್ ಸಿಕ್ಕಿದೆ. ಆನ್‌ಲೈನ್ ಯುಗದಲ್ಲಿ ಪ್ರಶ್ನೆಪತ್ರಿಕೆ ಬಯಲಾಗುವುದು ಸುಲಭ. ಆದರೆ ಒಂದೇ ತಿಂಗಳಲ್ಲಿ ಮರು ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ರಾಜೀನಾಮೆ ನೀಡಿದರೂ ಸಹ ಅನಾವಶ್ಯಕ ಪ್ರತಿಭಟನೆ ನಡೆಸಿ ಒಂದು ತಿಂಗಳ ಸಂಸತ್ ಅಧಿವೇಶನ ಹಾಳು ಮಾಡಿದರು. ಸಾರ್ವಜನಿಕರ 80 ಕೋಟಿ ಹಣವನ್ನು ವ್ಯರ್ಥ ಮಾಡಿಸಿದರು. ಎಸ್‌ಐಆರ್ ಬಗ್ಗೆ ದೂಷಿಸಿದರು. ಇವಿಎಂ ಬಗ್ಗೆ ಕ್ಯಾತೆ ತೆಗೆದರು. ಕೇರಳದಲ್ಲಿ ಕಾಂಗ್ರೆಸ್ ಬಂದಾಗ ಎಸ್‌ಐಆರ್ ಮತ್ತು ಇವಿಎಂ ಬಗ್ಗೆ ಚಕಾರವೆತ್ತಲಿಲ್ಲ. ಇದು ದ್ವಂದ್ವ ನೀತಿ. ಈ ಭಂಡ, ಭ್ರಷ್ಟ ಕಾಂಗ್ರೆಸ್ ಆಡಳಿತದ ವಿರುದ್ಧ ರಾಜ್ಯದ ಹಳ್ಳಿ ಹಳ್ಳಿಗೆ ಬಿಜೆಪಿ ಕಾರ್ಯಕರ್ತರ ದಂಡು ತೆರಳಿ ಜನರಿಗೆ ಸತ್ಯಾಸತ್ಯತೆಯ ಅರಿವು ಮೂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಗುರುಮೂರ್ತಿ, ಹನುಮಂತಪ್ಪ, ಮಾಲತೇಶ್, ಹರೀಶ್, ಗಿರೀಶ್, ರಾಮಾನಾಯ್ಕ್, ಮೂರ್ತಿ, ಸುರೇಖಾ ಮುರಳೀಧರ್, ಶಾಂತಾ ಸುರೇಂದ್ರ, ವೀರಭದ್ರಪ್ಪ ಪೂಜಾರ್, ಸುಮಾ ಭೂಪಾಳಂ, ಮಂಗಳಾ ನಾಗೇಂದ್ರ, ಚಂದ್ರಶೇಖರ್ ಎಸ್., ಸೇರಿದಂತೆ ಪ್ರಮುಖರಿದ್ದರು.
