ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಆ.19
ರೈತರು ಸಂಘಟಿತರಾದಾಗ ಸ್ವಾಭಿಮಾನದ ಬದುಕನ್ನು ಗಳಿಸಬಹುದು. ರೈತ ಸಂಘ ಚಳವಳಿಗಳಿಗೆ ಹೊಸತನ ನೀಡಿತ್ತು. ಈಗ ರೈತ ಸಂಘಟನೆಗಳು ಮತ್ತು ಚಳವಳಿಗಳು ಬೇರೆ ಬೇರೆ ದಾರಿ ಹಿಡಿದಿದೆ. ಯಾವುದೇ ಕ್ಷೇತ್ರದಲ್ಲಿ ಹಿನ್ನಡೆಯಾಗಲಿ ಆದರೆ ಕೃಷಿ ಕ್ಷೇತ್ರದಲ್ಲಿ ಮಾತ್ರ ಹಿನ್ನಡೆಯಾಗಬಾರದು ಎಂದು ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಹೇಳಿದರು.
ಅವರು ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಸಂಘದ ಸಂಸ್ಥಾಪಕರಾದ ಡಾ.ಎಚ್.ಎಸ್. ರುದ್ರಪ್ಪನವರ ಸವಿ ನೆನಪಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಮನಿಸಿ: ‘ಶುದ್ದೀಕರಣ’ ಘಟನೆಯಿಂದ ಸಂವಿಧಾನಿಕ ಮೌಲ್ಯಗಳಿಗೆ ಅವಮಾನ
ಎಚ್ ಎಸ್ ರುದ್ರಪ್ಪನವರು ಸದಾ ರೈತ ಪರ ಚಿಂತನೆ ಮಾಡುವವರು. ಶಿವಮೊಗ್ಗದಲ್ಲಿ ನೂತನ ಎಪಿಎಂಸಿ ಮಾರುಕಟ್ಟೆ ಆದಾಗ ಅಲ್ಲಿ ಹೋಗಲು ಯಾವ ವರ್ತಕರು ತಯಾರಿರಲಿಲ್ಲ. ಆಗ ರುದ್ರಪ್ಪನವರು ಅಲ್ಲಿ ರೈತರ ಮತ್ತು ವರ್ತಕರ ಸಭೆ ನಡೆಸಿ ಎಪಿಎಂಸಿಗೆ ಎಲ್ಲರೂ ಬರಬೇಕು ಎಂದು ಕರೆಕೊಟ್ಟರು. ಆಗ ಎಲ್ಲರೂ ಅಲ್ಲಿಗೆ ಬಂದು ವ್ಯಾಪಾರ ವಹಿವಾಟು ಶುರು ಮಾಡಿಕೊಂಡರು. ಅವರ ಮಾತಿನಿಂದ ಈಗಲೂ ಎಪಿಎಂಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಅವರ ನಾಯಕತ್ವದ ಗುಣ ಕಾಣುತ್ತದೆ ಎಂದರು.
ರೈತ ಸಂಘದ ಆರಂಭದ ಚಳವಳಿ ನೆನಪು ಮಾಡಿಕೊಂಡಾಗ ಸ್ವಾತಂತ್ರ‍್ಯ ಹೋರಾಟದ ನೆನಪಾಗುತ್ತದೆ. ಒಬ್ಬ ರೈತ ಪ್ರಜಾಪ್ರಭುತ್ವದಲ್ಲಿ ಪ್ರಭು ಆಗಲು ಸಾಧ್ಯವಿದೆ ಎಂದು ತೋರಿಸಿಕೊಟ್ಟ ಚಳವಳಿ ಆಗಿನ ರೈತ ಚಳವಳಿಗಳಾಗಿತ್ತು ಎಂದರು.
ಎಲ್ಲದಕ್ಕೂ ಮೂಲ ಕೃಷಿ ಕ್ಷೇತ್ರವಾಗಿದೆ. ಇವತ್ತಿನ ಮಾನಸಿಕ ಸ್ಥಿತಿ ಹೇಗಿದೆ ಎಂದರೆ ದುಡಿಮೆ ರಹಿತ ಸಂಪತ್ತು ಆತ್ಮ ಸಾಕ್ಷಿಗೆ ವಿರುದ್ಧ ಭೋಗ. ನೀತಿ ರೈತ ವಾಣಿಜ್ಯ ವ್ಯಾಪಾರ ಜನ ಬಯಸ್ತಾ ಇದ್ದಾರೆ. ಆದರೆ ಆಚರಿಸಲು ತಯಾರಿಲ್ಲ ಪ್ರಚಾರ ಮತ್ತು ಬುದ್ಧಿಯನ್ನು ಪ್ರಾಣಿಗಳಿಂದ ನೋಡಿ ಸಂತೋಷಪಡುವವರಿದ್ದಾರೆ. ತತ್ವ ರೈತ ರಾಜಕೀಯ. ಶೀಲವಿಲ್ಲದ ಶಿಕ್ಷಣ. ನಾಮಕಾವಸ್ತೆ ಪರೀಕ್ಷೆಗಳು. ಗುಣಮಟ್ಟವಿಲ್ಲದ ಶಿಕ್ಷಣ. ಯಾಗ ಇಲ್ಲದ ಪೂಜೆ. ಮಾನವೀಯತೆ ಇಲ್ಲದ ವಿಜ್ಞಾನವನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ರೈತರ ಒಳಿತಿಗಾಗಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದಾರೆ ರೈತರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ‘ಅಣು ವಿದ್ಯುತ್ ಸ್ಥಾವರದ ನಾಳೆಯ ಅಪಾಯಗಳು’ ಎಂಬ ವಿಚಾರದ ಬಗ್ಗೆ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಬಿ ಎಂ ಕುಮಾರಸ್ವಾಮಿ ಮತ್ತು ‘ಶರಾವತಿ ಹಿನ್ನೀರಿಗೆ ಹೊಸ ಯೋಜನೆ ವಿದ್ಯುತ್ ಉತ್ಪಾದನೆ ನಂತರ ನಡೆಯುವ ಅಪಾಯಗಳ’ ಬಗ್ಗೆ ಪರಿಸರ ತಜ್ಞರಾದ ಅಖಿಲೇಶ್ ಚಿಪ್ಲಿ ಹಾಗೂ ‘ರಾಜ್ಯದಲ್ಲಿ ಬರ’ ಎನ್ನುವ ವಿಚಾರದ ಬಗ್ಗೆ ಡಾ ಸರ್ಪ ರಾಜ ಚಂದ್ರಗುತ್ತಿ ಇವರಿಂದ ವಿಚಾರ ಸಂಕೀರ್ಣ ನಡೆಯಿತು.
ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ಭವನದವರೆಗೆ ರೈತನಾಯಕ ರುದ್ರಪ್ಪನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಂಜುನಾಥ್ ಗೌಡ್ರು, ಬೈರೇಗೌಡರು, ಉಮೇಶ್ ಪಟೇಲ್, ವಸಂತ್ ಕುಮಾರ್, ಮಂಜುನಾಥ್ ಹಾರೇಕಪ್ಪ ,ರೇಣುಕಮ್ಮ ,ತಾರ, ರೇಖಾ ,ವೀರಭದ್ರ ಸ್ವಾಮಿ, ಇಂದೂಧರ್, ಕಲ್ಲಪ್ಪ ಲಗಾಡಿ, ಶಂಕರ್ ಬೆಳಗಾವಿ, ಬಸವರಾಜ್ ಹಾವೇರಿ, ಎಚ್ಪಿ ಸತೀಶ್, ರಮೇಶ್. ಹೆಚ್.ಎನ್ ಮೊದಲಾದವರು ಇದ್ದರು
