ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.7
ಕಸ್ತೂರಿ ರಂಗನ್ ವರದಿ ವಿರೋಧಿಸಿ ಕೈಗೊಂಡಿದ್ದ ಪಾದಯಾತ್ರೆಯಿಂದ ಕಾಂಗ್ರೆಸ್ ನಾಯಕ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಆರ್ ಎಂ ಮಂಜುನಾಥ್ ಗೌಡ ಮತ್ತು ಅವರ ಬಳಗ ದೂರ ಉಳಿದಿದ್ದು, ಒಗ್ಗಟ್ಟಾಗಿ ವಿರೋಧಿಸಬೇಕೆಂಬ ಹುರುಪಿನಲ್ಲಿದ್ದ ಕಾಂಗ್ರೆಸ್ ಬಳಗಕ್ಕೆ ಒಡಕಿನ ಕಾವು ತಟ್ಟಿದೆ.
ಕೇಂದ್ರ ಸರ್ಕಾರದ ನೀತಿಯಿಂದ ಪಶ್ಚಿಮ ಘಟ್ಟಗಳಲ್ಲಿ ಅದರಲ್ಲೂ ಮಲೆನಾಡು ಭಾಗಗಳಲ್ಲಿ ಇದರ ಪರಿಣಾಮ ಹೆಚ್ಚಾಗಲಿದೆ. ಇದರಿಂದ ಇಲ್ಲಿನ ರೈತರು ಸೇರಿದಂತೆ ಅನೇಕರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದನ್ನು ತಡೆಯಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್ನ ಇಡೀ ತಂಡವೇ ತೀರ್ಥಹಳ್ಳಿಯಿಂದ ಈ ಹೋರಾಟವನ್ನು ಆರಂಭ ಮಾಡಿದೆ.
ಗಮನಿಸಿ: ಬಸವರಾಜ ಕನ್ನಾಳೆ ಜೊತೆಗೆ ಆರ್.ಆಶೋಕ್ ಫೋಟೋ-ಖರ್ಗೆ ತರಾಟೆ
ಪಾದಯಾತ್ರೆಯಲ್ಲಿ ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ರಾಜ್ಯ ವಕ್ತಾರ ಕಿಮ್ಮನೆ ರತ್ನಾಕರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶ್ವೇತಾ ಬಂಡಿ, ಜವಳಿ ಮೂಲ ಸೌಲಭ್ಯ ಅಧ್ಯಕ್ಷ ಚೇನತ್ ಕೆ ಗೌಡ ಸೇರಿದಂತೆ ಇಡೀ ಕಾಂಗ್ರೆಸ್ ಕಾರ್ಯಕರ್ತರೇ ನೆರೆದಿದ್ದರು.
ಆದರೆ ಸರಣಿ ಸುದ್ದಿಗೋಷ್ಠಿ ಮಾಡಿ ಜಿಲ್ಲಾಧಿಕಾರಿಗೆ, ಮುಖ್ಯಮಂತ್ರಿಗೆ ಮನವಿ ಮಾಡುವ ಮೂಲಕ ಈವರದಿ ನಿಲ್ಲಿಸಬೇಕು ಎನ್ನುತ್ತಾ ಪಾದಯಾತ್ರೆಯನ್ನು ಕೈಗೊಂಡಿದ್ದ ಮಂಜುನಾಥ್ ಗೌಡರೇ ಇದರಿಂದ ಹಿಂದೆ ಸರಿದಿದ್ದಾರೆ.
ಇದು ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆಯನ್ನು ಬಯಲುಗೊಳಿಸಿದೆ.
ಈ ಪಾದಯಾತ್ರೆಗೆ ಮಂಜುನಾಥ್ ಗೌಡ ರ ಇಡೀ ತಂಡವೂ ಗೈರಾಗಿದೆ. ನಿಧಾನ ದೂರ ಸರಿದಿರುವ ಗೌಡರು ತಮ್ಮೊಳಗಿನ ಅಸಹನೆಯನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ.
ಕಿಮ್ಮನೆ ರತ್ನಾಕರ್ ಮೇಲಿರುವ ಗೌಡರ ಹುಸಿ ಮುನಿಸು ಪಾದಯಾತ್ರೆಗೆ ಗೈರಾಗುವ ಮೂಲಕ ಹೊರಹಾಕಿದ್ದಾರೆ. ಹಾಗೇ ನೋಡಿದರೆ ಇದು ಇಂದಿನದಲ್ಲ ಮಂಜುನಾಥ್ ಗೌಡರು ಕಾಂಗ್ರೆಸ್ ಪಕ್ಷಕ್ಕೆಸೇರಿದಾಗಿನಿಂದಲೂ ಇದೆ.
ತೀರ್ಥಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ಗೆ ಟಿಕೆಟ್ ನೀಡಿದ್ದಾಗಿನಿಂದಲೂ ಇದೆ. ಒಂದಲ್ಲ ಒಂದು ಮನಸ್ತಾಪ, ಒಡಕು ತೀರ್ಥಹಳ್ಳಿ ಕಾಂಗ್ರೆಸ್ ಬಳಗದಲ್ಲಿ ನಡೆಯತ್ತಲೆ ಇದೆ. ಅದರಮುಂದಿನ ಭಾಗವಾಗಿ ಕಸ್ತೂರಿ ರಂಗನ್ ವರದಿ ವಿರೋಧದ ಪಾದಯಾತ್ರೆಯಲ್ಲಿ ಆಗಿರುವ ಗೈರು.
ಆದರೆ ಈ ಪಾದಯಾತ್ರೆಗೆ ಕಾಂಗ್ರೆಸ್ಸಿಗರೆಲ್ಲರೂ ಭಾಗವಹಿಸಬಹುದು ಎಂದು ಕಿಮ್ಮನೆ ರತ್ನಾಕರ್ ಅವರು ಹೇಳಿದ್ದರೂ ಮಂಜುನಾಥ್ ಗೌಡರು ಮತ್ತು ಅವರ ಹಿಂಬಾಲಕರಿಗೆ ಯಾವುದೇ ಆಹ್ವಾನ ನೀಡಿಲ್ಲ ಎನ್ನಲಾಗುತ್ತಿದೆ.
ಮಂಜುನಾಥ್ ಗೌಡು ಈ ವರದಿ ಸಂಬಂಧಿಸಿದಂತೆ ಸುದ್ದಿಗೋಷ್ಟಿ ಮಾಡಿದ ಬಳಿಕ ಕಿಮ್ಮನೆ ರತ್ನಾಕರ್ಅವರು ಅದೇ ವಿಷಯ ಇಟ್ಟುಕೊಂಡು ಪ್ರತ್ಯೇಕ ಸುದ್ದಿಗೋಷ್ಠಿಯ ಮಾಡಿದ್ದರು. ಈಗ ಪಾದಯಾತ್ರೆಯಲ್ಲಿ ಕಿಮ್ಮನೆ ಅವರು ಕಾಣಿಸಿಕೊಂಡರು ಗೌಡರು ಮಾತ್ರ ದೂರ ಉಳಿದಿದ್ದಾರೆ.
ಮುಸುಕಿನ ಗುದ್ದಾಟ:
ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಿಂದ ಆರಂಭವಾದ ಕಾಂಗ್ರೆಸ್ನೊಳಗೆ ಮುಸುಕಿನ ಗುದ್ದಾಟ ಇಲ್ಲಿಗೆ ಮುಗಿಯುವುದಿಲ್ಲ ಎಂಬುದು ಈ ಘಟನೆಯಿಂದ ಗೋಚರವಾಗುತ್ತಿದೆ. ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯರು ಅಥವಾ ಸಚಿವರು ಸಮಜಾಯಿಷಿ ಕೊಟ್ಟರೂ
ಒಡಕು ಮಾತ್ರ ಇಲ್ಲ ಎನ್ನುವಂತಿಲ್ಲ. ಅದನ್ನು ಎಷ್ಟೇ ಸರಿಪಡಿಸಲು ಮುಂದಾದರು ಅದು ಮತ್ತೇ ಮತ್ತೇ ಪುಟಿದೇಳುವುದು ಕಾಣುತ್ತಿದೆ. ಅದಕ್ಕೆ ಈ ಪಾದಯಾತ್ರೆಯೇ ಸಾಕ್ಷಿಕರಿಸಿದೆ.
ಒಟ್ಟಾರೆ ಕಾಂಗ್ರೆಸ್ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವ ಮೂಲಕ ಪಾದಯಾತ್ರೆ ಕೈಗೊಂಡಿದ್ದಾರೆ. ಇದರಿಂದ ಬಿಜೆಪಿಯ ಕೇಂದ್ರ ಸರ್ಕಾರದ ಜುಟ್ಟನ್ನು ಹಿಡಿಯುವ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಮಂಜುನಾಥ್ ಗೌಡರ ಗೈರು ರಾಜಕೀಯ ವಲಯದಲ್ಲಿ ಒಂದಿಷ್ಟು ಚರ್ಚೆ ಗ್ರಾಸವಾಗಿರುವುದಂತೂ ನಿಶ್ಚಿತ.
