ಶಿವಮೊಗ್ಗ ಟೆಲೆಕ್ಸ್ ಸುದ್ದಿ.ಸೆ.17
ಮಲೆನಾಡಿಗೆ ಮಾರಕವಾದವರು ಬಿಜೆಪಿಯವರೆ ವಿನಹ ರಾಜ್ಯ ಸರ್ಕಾರ ಕಾರಣ ಅಲ್ಲ. ಕಸ್ತೂರಿ ರಂಗನ್ ವರದಿ ಜಾರಿಗೆ ಆಗ್ರಹಿಸಿದವರೆ ಬಿಜೆಪಿ ಅವರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಹೇಳಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಕೇಂದ್ರ ಸರ್ಕಾರ 7 ಬಾರಿ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಪಶ್ಚಿಮ ಘಟ್ಟ ಪ್ರದೇಶದ ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಈ ಹೊಣೆಯನ್ನು ಕೇಂದ್ರ ಸರ್ಕಾರವೇ ಹೋರಬೇಕು ಎಂದರು.
ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರವೇ ಕಾರಣವೆಂದು ಹೇಳಿಕೆ ನೀಡಿ ಜನರ ಹಾಗೂ ರೈತರ ದಾರಿ ತಪ್ಪಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದೆಂದು ಬಿಜೆಪಿ ರಾಜ್ಯ ನಾಯಕರುಗಳು ಪ್ರತಿಭಟನೆಯನ್ನು ನಡೆಸಿ ವಿರೋಧ ವ್ಯಕ್ತಪಡಿಸಿದ್ದರು. ಇದೇ ಬಿಜೆಪಿ ನಾಯಕರು ಈಗ ವರದಿ ಜಾರಿಗೆ ಒತ್ತಾಯಿಸಿರುವುದು ಹಾಸ್ಯಸ್ಪದವಾಗಿದೆ ಎಂದರು.
2014ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ಅಂದರೆ 2014 ಆ.27 ರಲ್ಲಿಯೇ ರಾಷ್ಟ್ರೀಯ ಹಸಿರು ಪೀಠಕ್ಕೆ ವರದಿ ಜಾರಿ ಬಗ್ಗೆ ಅಫಿಡೆವಿಟ್ ಸಲ್ಲಿಸಿತ್ತು. ಈಗಾಗಲೇ 6 ಬಾರಿ ಅಧಿಸೂಚನೆ ಹೊರಡಿಸಿ ಮತ್ತೇ 7 ನೇ ಬಾರಿ ಅಧಿಸೂಚನೆ ಹೊರಡಿಸಿದೆ. ವರದಿ ಜಾರಿಯಾದಲ್ಲಿ ರಾಜ್ಯ 10 ಜಿಲ್ಲೆಗಳ ಮೇಲೆ ಇದರ ಪರಿಣಾಮ ಬೀರಲಿದೆ ಎಂದರು.
ಕಸ್ತೂರಿ ರಂಗನ್ ವರದಿ ಜಾರಿಯ ಮಾಡುವ ಅಧಿಕಾರ ಕೇಂದ್ರ ಸರ್ಕಾರದ್ದಾಗಿದ್ದು, ಆದರೆ ಬಿಜೆಪಿಯವರು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ವರದಿಯ ಸತ್ಯಾಸತ್ಯತೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೀರ್ಥಹಳ್ಳಿ ಹಾಗೂ ಬಾಳೆಹೊನ್ನೂರಿಗೆ ಸೆ.19 ರಂದು ಆಗಮಿಸಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಹಾಗೂ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಸೆ.21, 22, 23 ರಂದು ವಿಶೇಷ ಅಧಿವೇಶನವನ್ನು ಕರೆದಿದ್ದು, ಇಲ್ಲಿ ಕೈಗೊಂಡ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
2014 ರ ಸೆ.19 ರಂದು ಕೇಂದ್ರದ ಮೋದಿ ಸರ್ಕಾರ ರಾಷ್ಟ್ರೀಯ ಹಸಿರು ಪೀಠದ ಮುಂದೆ ಗೋವಾ ಫೌಂಡೇಷನ್ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡುವುದಾಗಿ ಪ್ರಮಾಣ ಪತ್ರ ಸಲ್ಲಿಸಿದನ್ನು ಆರಗ ಜ್ಞಾನೇಂದ್ರ ಅವರಾಗಲಿ, ವಿಜಯೇಂದ್ರರವರಾಗಲಿ ಅಥವಾ ಸಂಸದ ರಾಘವೇಂದ್ರರಿಗೂ ಗೊತ್ತಿಲ್ಲವೆಂದು ಕಾಣುತ್ತೆ. ಈ ಪ್ರಮಾಣ ಪತ್ರದ ಆಧಾರದ ಮೇಲೆಯೇ ಈಗ 7 ನೇ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ. 6 ಬಾರಿ ಅಧಿಸೂಚನೆಯನ್ನು ಹೊರಡಿಸಿದ ಅಪಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಆರೋಪಿಸಿದರು.
2017 ರಲ್ಲಿ ಸಿದ್ದರಾಮಯ್ಯ ಸರ್ಕಾರ ಮತ್ತು 2024 ರಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡು ಕಸ್ತೂರಿ ರಂಗನ್ ವರದಿ ಜಾರಿ ಬೇಡ ಎಂದು ತಿರಸ್ಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ರಾಜ್ಯ ಸರ್ಕಾರದ ಶಿಫಾರಸ್ಸುನ್ನು ಪರಿಗಣಿಸದ ಕೇಂದ್ರ ಸರ್ಕಾರ 7 ನೇ ಬಾರಿಗೆ ಮತ್ತೇ ಅಧಿಸೂಸನೆ ಹೊರಡಿಸಿರುವುದು ಕೇಂದ್ರದ ತಪ್ಪಲ್ಲವೇ ಎಂದು ಪ್ರಶ್ನಿಸಿದ ಅವರು ಬಿಜೆಪಿ ನಾಯಕರಿಗೆ ಈ ಸತ್ಯ ಗೊತ್ತಿಲ್ಲದೆ ಈಗ ಕಸ್ತೂರಿ ರಂಗನ್ ವರದಿ ಸಂಬಂಧಿಸಿದಂತೆ ಮೊಸಳೆ ಕಣ್ಣಿರು ಸುರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇಷ್ಟಲ್ಲದೆ ಮಲೆನಾಡಿಗೆ ಮಾರಕವಾದವರೆ ಈ ಬಿಜೆಪಿ ಅವರು ಈಗಾಗಲೇ ಅರಣ್ಯ ಉಳಿಸಲು ಪರಿಸರ ಸಂರಕ್ಷಣ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳು ಇದ್ದರು ಕೂಡ ಮತ್ತೇ ಮತ್ತೆ ಹೊಸ ಕಾಯ್ದೆಯನ್ನು ಜಾರಿ ತರುವುದು ಎಷ್ಟರ ಮಟ್ಟಿಗೆ ಸರಿ. ಇದಲ್ಲದೆ 2009 ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರನ್ನು ಒಕ್ಕೊಲ್ಲೆಬ್ಬಿಸುವ ಕಾನೂನನ್ನು ಜಾರಿಗೆ ತಂದು ಮತ್ತು ಅರಣ್ಯ ಇಂಡಿಕರಣವನ್ನು ಜಾರಿಗೆ ತಂದವರು ಕೂಡ ಅವರೇ ಹೀಗೆ ಮಲೆನಾಡಿನ ರೈತರ ಬದುಕಿಗೆ ಮಾರಕವಾದವರು ಬಿಜೆಪಿಯವರೆ ಹೊರತು ಕಾಂಗ್ರಸ್ಸಿಗರಲ್ಲ ಎಂದರು.
ಇಡೀ ದೇಶದಲ್ಲಿ 6 ರಾಜ್ಯಗಳಲ್ಲಿ ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿವೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಂತೆ ಕೇಂದ್ರ ಸರ್ಕಾರವೂ ಕೂಡ ವಿಶೇಷ ಸಂಸತ್ ಸಭೆಯನ್ನು ಕರೆಯಬೇಕು. ಈ ಬಗ್ಗೆ ಬಿಜೆಪಿ ಸಂಸದರು ಕೇಂದ್ರದ ಮುಂದೆ ಒತ್ತಡ ಹೇರಬೇಕು ಅದು ಬಿಟ್ಟು ಇಲ್ಲಿ ಪ್ರಚಾರಕ್ಕಾಗಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿ ನಾಟಕವಾಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ.ಮಂಜುನಾಥ್, ಡಿ.ಸಿ.ನಿರಂಜನ್, ಶಿವಾನಂದ, ಸೈಯದ್ ಇಫ್ತಾಕರ್, ಮುಸಾವೀರ್ ಉಪಸ್ಥಿತರಿದ್ದರು.
