ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.24
‘ವೋಟ್ ಚೋರಿ’ ಮೂಲಕ ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದಾಖಲೆಗಳನ್ನು ಮುಂದಿಟ್ಟು ಗಂಭೀರ ಆರೋಪ ಮಾಡಿದ್ದರು. ಈಗ ನಿಮ್ಮ ಆಯುಕ್ತರ ಗಂಭೀರ ಆರೋಪಕ್ಕೆ ಉತ್ತರವೇನು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕುಟುಕಿದ್ದಾರೆ.
ಗುರುವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಚುನಾವಣಾ ಆಯೋಗದ ಆಯುಕ್ತರಿಂದ ನಡೆದಿರುವ ಅಕ್ರಮವನ್ನು ಖಂಡಿಸಿ ಪೋಸ್ಟರ್ ಹಂಚಿಕೊಂಡಿದ್ದು, ಅಸಮಾಧಾನ ಹೊರಹಾಕಿದ್ದಾರೆ.

ರಾಹುಲ್ ಗಾಂಧಿ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಚುನಾವಣೆಗಳ ಕುರಿತು ಎತ್ತಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ತಳ್ಳಿಹಾಕಿದ್ದ ಚುನಾವಣಾ ಆಯೋಗ, ಈಗ ತನ್ನದೇ ಇಬ್ಬರು ಆಯುಕ್ತರು ದಾಖಲಿಸಿರುವ ಗಂಭೀರ ಆಕ್ಷೇಪಗಳಿಗೆ ಬಿಜೆಪಿ ಏನು ಉತ್ತರ ಕೊಡುತ್ತದೆ? ಎಂದಿದ್ದಾರೆ.
ಗಮನಿಸಿ: 48 ಗಂಟೆಗಳಲ್ಲಿ ರಾಜೀನಾಮೆ ನೀಡದಿದ್ದರೆ “ಜಂತರ್ ಮಂತರ್-2” ಮಾದರಿ ಪ್ರತಿಭಟನೆ
ಚುನಾವಣಾ ಆಯೋಗದ ಸ್ವತಂತ್ರತೆಯ ಬಗ್ಗೆ ಪ್ರತಿಯೊಬ್ಬ ಭಾರತೀಯರಲ್ಲಿ ಅನುಮಾನ ಮೂಡುವುದು ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಹಲವು ರಾಜ್ಯಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜ್ಞಾನೇಶ್ ಕುಮಾರ್ ತೆಗೆದುಕೊಂಡಿರುವ ವಿವಾದಿತ ನಿರ್ಧಾರಗಳ ಬಗ್ಗೆ ಸ್ವತಂತ್ರ ತನಿಖೆಯಾಗಬೇಕಿದೆ.
ಸಾಂವಿಧಾನಿಕ ಸಂಸ್ಥೆಯನ್ನು ರಕ್ಷಿಸಲು ಸಂವಿಧಾನದ ರಕ್ಷಕರಾಗಿರುವ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ, ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯತಿಗೊಳಿಸಿ, ನ್ಯಾಯಾಂಗ ತನಿಖೆಗೆ ಆದೇಶ ನೀಡುವ ಮೂಲಕ, ಚುನಾವಣಾ ಆಯೋಗದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನರ ವಿಶ್ವಾಸವನ್ನು ಮತ್ತೊಮ್ಮೆ ಮರುಸ್ಥಾಪಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
