ಶಂಕರಘಟ್ಟ, ಮೇ. 4: ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರುಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ ಕೆ. ವಿ. ಅಕ್ಷರ ಮತ್ತು ರಾಷ್ಟ್ರೀಯಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ ಪ್ರೊ. ಎಚ್. ಎ. ರಂಗನಾಥ್ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಮೇ 6 ರಂದು ನಡೆಯಲಿರುವ 35 ನೇ ವಾರ್ಷಿಕ ಘಟಿಕೋತ್ಸವದಲ್ಲಿಗೌರವ ಡಾಕ್ಟರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಿದೆ.
ಈ ಬಗ್ಗೆ ರಾಜ್ಯಪಾಲರಿಂದ ಅಧಿಕೃತ ಅನುಮೋದನೆ ದೊರೆತಿದ್ದು, ರಾಜ್ಯದ ಮೂವರು ಸಾಧಕರಿಗೆಕುವೆಂಪು ವಿವಿ ಗೌರವ ಸಲ್ಲಿಸಲಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಗಾಗಿ ಕೋಣಂದೂರುಲಿಂಗಪ್ಪ, ರಂಗಭೂಮಿಯ ಸೇವೆಗೆ ಕೆ. ವಿ. ಅಕ್ಷರ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಗೆ ಪ್ರೊ. ಎಚ್. ಎ. ರಂಗನಾಥ್ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಕೋಣಂದೂರು ಲಿಂಗಪ್ಪ:
ಕೋಣಂದೂರು ಲಿಂಗಪ್ಪ ಅವರು ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದಲ್ಲಿ ಶ್ರೀರಾಮಪ್ಪ–ಶ್ರೀಮತಿ ಗೌರಮ್ಮ ದಂಪತಿಗಳ ಮಡಿಲಲ್ಲಿ1934 ಫೆಬ್ರವರಿ 24ರಂದು ಜನಿಸಿದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರು. ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿಪ್ರೌಢಶಿಕ್ಷಣ ಪಡೆದವರು. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ, ಬಿ.ಎಲ್. ಪದವಿಯನ್ನು ಬೆಂಗಳೂರಿನಲ್ಲಿಪಡೆದವರು.

ಬೆಂಗಳೂರು ಮಹಾನಗರ ಪಾಲಿಕೆಯ ಪ್ರೌಢಶಾಲೆ ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿಬೆಂಗಳೂರು ನಗರದ ಮಲ್ಲೇಶ್ವರಂ, ಚಾಮರಾಜಪೇಟೆ ಮೊದಲಾದಕಡೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. 1969 ರಿಂದ ಶಿವಮೊಗ್ಗದಲ್ಲಿ ವಕೀಲರಾಗಿ ಸೇವೆ ಆರಂಭಿಸಿದವರು. ಸಮಾಜವಾದಿ ಚಳುವಳಿಯ ಆರಂಭದಿಂದಲೇ ಸಕ್ರಿಯವಾಗಿ ಗುರುತಿಸಿ ಕೊಂಡವರು. ಜನತಾದಳದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಯಸ್ಕರ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಲಿಂಗಪ್ಪನವರು ಕನ್ನಡ ಯುವಜನ ಸಭಾವನ್ನು ಸ್ಥಾಪಿಸಿ, ಸಂಚಾಲಕರಾಗಿ ಕನ್ನಡ ನಾಡು–ನುಡಿಯ ಸಂವರ್ಧನೆಗೆ ಚಳುವಳಿಗಳನ್ನು ರೂಪಿಸಿದವರು.
1972 ರಿಂದ 79 ರವರೆಗೆ ಕರ್ನಾಟಕ ವಿಧಾನಸಭೆ ಸದಸ್ಯರಾಗಿ, 1989ರಿಂದ 92ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಅನನ್ಯವಾದ ಸೇವೆ ಸಲ್ಲಿಸಿದವರು. ಕರ್ನಾಟಕ ನಾಮಕರಣಕ್ಕಾಗಿ ಹೋರಾಡಿದವರು. ”ಉಳುವವನೇ ಹೊಲದೊಡಯ” ಹೋರಾಟ ಆರಂಭಿಸಿದವರು. ಹಾವನೂರು ವರದಿ ಅನುಷ್ಠಾನಕ್ಕಾಗಿ ಶ್ರಮಿಸಿದವರು. ಕರ್ನಾಟಕ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾಗಿ, ಶಿವಮೊಗ್ಗ ಜಿಲ್ಲಾ ಜನತಾ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಸಮತಪಕ್ಷದ ಕಾರ್ಯದರ್ಶಿಯಾಗಿ ಅಪೂರ್ವವಾದ ಸೇವೆ ಸಲ್ಲಿಸಿದವರು.
“ದೀಪಹಚ್ಚಿರೋ” ಕವನಸಂಕಲನ ಸೇರಿದಂತೆ, ಒಳ್ಳೆಯಗಂಡ, ಆತ್ಮಹತ್ಯೆ, ಮಹಾನಾಯಕ ಬೋಸ್ ಸುಭಾಷ್ಚಂದ್ರ, ಪಾರ್ಲಿಮೆಂಟಿನಲ್ಲಿ ಪಟೇಲರು, ಶಾಸನ ಸಭೆಯಲ್ಲಿ ಶಾಂತವೇರಿ ಕೃತಿಗಳನ್ನು ರಚಿಸಿದವರು. ಸಾಹಿತ್ಯ ಸಮ್ಮೇಳನ ಅಧ್ಯಕ್ಷಗೌರವ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ಎಂ ಪಿ ಪ್ರಕಾಶ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ಹಾಮಾ ನಾಯಕ ಪ್ರಶಸ್ತಿ ಭಾಜನರಾಗಿದ್ದಾರೆ.
ಗಮನಿಸಿ:ದ್ರಾವಿಡ ನೆಲದಲ್ಲಿ ರಾಜಕೀಯ ಕ್ರಾಂತಿ: ! ವಿಜಯದಳಪತಿಯೇ ಈಗ ’ಅಧಿಪತಿ’
ಡಾ. ಕೆ. ವಿ.ಅಕ್ಷರ:
ಡಾ. ಕೆ. ವಿ. ಅಕ್ಷರ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೂಡು ಗ್ರಾಮದಲ್ಲಿನ ಶ್ರೀ ಕೆ ವಿಸುಬ್ಬಣ್ಣ ಹಾಗೂ ಶ್ರೀಮತಿ ಕೆ ವಿ ಶೈಲಜಾ ದಂಪತಿಗಳ ಮಗನಾಗಿ 1960 ಏಪ್ರಿಲ್ 24 ರಂದು ಜನಿಸಿದರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಿ. ಎ. ಪದವಿಯನ್ನು ಸಾಗರದಲ್ಲಿ ವ್ಯಾಸಂಗ ಮಾಡಿದರು. ನಂತರ ಇವರು ನವದೆಹಲಿಯಲ್ಲಿ ರಾಷ್ಟೀಯ ನಾಟಕ ಶಾಲೆಯಲ್ಲಿ ಡಿಪ್ಲೊಮೊ ಪದವಿ ಪಡೆದರು. University of Leeds ನಲ್ಲಿ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನದ ನೆರವಿನಿಂದ ನಾಟಕ ಮತ್ತು ರಂಗಕಲೆಯಲ್ಲಿ ಎಂ.ಎ. ಪದವಿ ಪಡೆದರು

ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಶ್ರೀಯುತರು ಕನ್ನಡ ರಂಗಭೂಮಿಗೆವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ.ವಿ. ಸುಬ್ಬಣ್ಣನವರ ಪುತ್ರರಾದ ಇವರು ‘ನೀನಾಸಂ‘ ವಾತಾವರಣದಲ್ಲಿ ಬೆಳೆದು ಸಹಜವಾಗಿಯೇ ರಂಗಭೂಮಿಯಲ್ಲಿ ಆಸಕ್ತಿ ಬೆಳಸಿಕೊಂಡರು. ಎಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ ಶ್ರೀಯುತರು ಸ್ವತಃ ಹಲವು ನಾಟಕಗಳನ್ನು ರಚಿಸಿದ್ದಾರೆ.
ಪರಮಪದ ಸೋಪಾನಪಟ, ಸೇತುಬಂಧನ, ಚೂರಿಕಟ್ಟೆ, ಅರ್ಥಾತ್ ಕಲ್ಯಾಣಪುರ, ಸ್ವಯಂವರಲೋಕ, ಭಾರತಯಾತ್ರೆ, ಸಹ್ಯಾದ್ರಿಕಾಂಡ ಮೊದಲಾದ ಅವರ ನಾಟಕಗಳು ಗಮನಾರ್ಹವಾಗಿವೆ. ಕಳೆದು ನಾಲ್ಕು ದಶಕಗಳಿಂದ ನೀನಾಸಂನಲ್ಲಿ ಅಧ್ಯಾಪನವನ್ನು ಹಾಗೂ ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಂಶೋಧಕರಾಗಿ, ನಾಟಕಕಾರರಾಗಿ, ಅನುವಾದಕರಾಗಿ, ನಿರ್ದೇಶಕರರಾಗಿ, ಸಂಪಾದಕರರಾಗಿ ಮತ್ತುಪ್ರಕಾಶಕರಾಗಿ ಅವರು ನಿರ್ವಹಿಸಿರುವ ಕಾರ್ಯಗಳು ಅಪೂರ್ವವಾದವುಗಳು.
ಪ್ರೊ. ಹೆಚ್. ಎ. ರಂಗನಾಥ್:
ಹಾಸನ ಅಣ್ಣೀ ಗೌಡ ರಂಗನಾಥ್ (ಹೆಚ್. ಎ. ರಂಗನಾಥ್) ಅವರು 16 ಜೂನ್ 1945 ರಂದು ಶ್ರೀ ಹೆಚ್. ಬಿ. ಅಣ್ಣೀ ಗೌಡ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಮ್ಮ ದಂಪತಿಗಳ ಮಡಿಲಲ್ಲಿ ಜನಿಸಿದರು. ಅವರು ತಮ್ಮಪ್ರಾಥಮಿಕ ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮತ್ತು ಪ್ರೌಢಶಾಲೆಯಿಂದ ಡಾಕ್ಟರೇಟ್ ಪದವಿಯವರೆಗೆ ಮೈಸೂರಿನಲ್ಲಿ ಪೂರೈಸಿದರು. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಹಾಗೂಜರ್ಮನಿ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ ಪೋಸ್ಟ್–ಡಾಕ್ಟರೇಟ್ ಸಂಶೋಧನೆಯನ್ನು ಪೂರೈಸಿದ್ದಾರೆ.

ಅವರು ತಳಿಶಾಸ್ತ್ರ ಮತ್ತು ವಿಕಾಸಶಾಸ್ತ್ರದ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಾಧ್ಯಾಪಕರೆಂದು ಪ್ರಖ್ಯಾತರಾಗಿದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ, ನ್ಯಾಕ್ (NAAC) ನಿರ್ದೇಶಕರಾಗಿ, ಕರ್ನೂಲ್ನIIIT ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಮೈಸೂರು ವಿಶ್ವವಿದ್ಯಾಲಯದ ಜೀವಮಾನದ ಗೌರವಾನ್ವಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಬೆಂಗಳೂರಿನ ಐಐಎಸ್ಸಿ (IISc) ಮತ್ತು ಮಾನವ ತಳಿಶಾಸ್ತ್ರ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
1975 ರಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಡಿಬಿಟಿ, ಡಿಎಸ್ಟಿ, ಇನ್ಸಾ(INSA), ಯುಜಿಸಿ ಮತ್ತು ಡಿಎಫ್ಜಿ (ಜರ್ಮನಿ) ಧನಸಹಾಯದೊಂದಿಗೆ “ಡ್ರೊಸೊಫಿಲಾ ಸ್ಟಾಕ್ಸೆಂಟರ್” ಮತ್ತು “ಯೂನಿಟ್ ಆನ್ ಎವಲ್ಯೂಷನ್ ಅಂಡ್ ಜೆನೆಟಿಕ್ಸ್” ಅನ್ನು ಸ್ಥಾಪಿಸಿದರು. ಇದು ದೇಶದ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿಯೇ ಮೊದಲನೆಯದಾಗಿದೆ. ಅವರು “ದಿ ಜರ್ನಲ್ಆಫ್ ಜೆನೆಟಿಕ್ಸ್” ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರು ಭಾರತ ಸರ್ಕಾರದ ವಿವಿಧ ಸಮಿತಿಗಳಾದ UGC-MHRD, ಯೋಜನಾ ಆಯೋಗ, DBT, DST, AICTE, NBA, QCI/NABET, CSR & TI ಗಳಲ್ಲಿ ಹಾಗೂ ರಾಜ್ಯ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳ ಶಾಸನಬದ್ಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಜಪಾನಿನ IIST, UNU ನ ಸಲಹಾ ಮಂಡಳಿ ಮತ್ತು ಆಸ್ಟ್ರೇಲಿಯನ್ ಅಕ್ರೆಡಿಟೇಶನ್ ಕೌನ್ಸಿಲ್ನ JOQAR ಮಾನ್ಯತೆ ಗುಂಪಿನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಶ್ರೀಯುತರು ಭಾರತದ ಎಲ್ಲಾ ವಿಜ್ಞಾನ ಅಕಾಡೆಮಿಗಳ ಫೆಲೋ (FASc., FNASc., FNA ಮತ್ತು FKSTA) ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ಇನ್ಸಾ ಯುವ ವಿಜ್ಞಾನಿ ಪದಕ (1979), ಆರ್ಯಭಟ ಪ್ರಶಸ್ತಿ (2008), ಸರ್ ಎಂ. ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ (2010), ಮತ್ತು ಸುಂದರ್ ಲಾಲ್ ಹೋರಾ ಪದಕ (2020) ಲಭಿಸಿವೆ. ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯವು ಅವರಿಗೆ “ಗೌರವ ಡಾಕ್ಟರೇಟ್” ನೀಡಿ ಗೌರವಿಸಿದೆ. ಅವರು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 102 ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಅನೇಕ ಸಂಪಾದಕೀಯ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
