ಶಿವಮೊಗ್ಗ ಟಲೆಕ್ಸ್ ಸುದ್ದಿ,ಜು.13
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20- 2026ರ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ತಂಡವು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.
ಶಿವಮೊಗ್ಗ ಯೋಧಾಸ್ ಹಾಗೂ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಮೊದಲು ಬ್ಯಾಟಿಂಗಗ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡ ಶಿವಮೊಗ್ಗ ಯೋಧಾಸ್‌ಗೆ ಗೆಲುವಿಗೆ 185 ರನ್ ಟಾರ್ಗೆಟ್ ನೀಡಿತ್ತು. 185 ರನ್ ಬೆನ್ನತ್ತಿದ್ದ ಶಿವಮೊಗ್ಗ ಯೋಧಾಸ್ 185 ರನ್ 6 ವಿಕೆಟ್ ಕಳೆದುಕೊಂಡು 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.
ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಎಂಎಲ್‌ಸಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ದೇಶಕ ಡಿ.ಎಸ್. ಅರುಣ್ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅಭಿನಂದಿಸಿದರು.

ತಂಡದ ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ, ಫ್ರಾಂಚೈಸಿ ಆಡಳಿತ ಮಂಡಳಿ ಹಾಗೂ ಶಿವಮೊಗ್ಗ KSCA ತಂಡದ ಎಲ್ಲ ಪದಾಧಿಕಾರಿಗಳ ಶ್ರಮವನ್ನು ಶ್ಲಾಘಿಸಿದರು. ಈ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.
“ಶಿವಮೊಗ್ಗ ಯೋಧಾಸ್ ತಂಡದ ಈ ಅದ್ಭುತ ಸಾಧನೆ ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬ ಕ್ರೀಡಾಭಿಮಾನಿಗೂ ಹೆಮ್ಮೆಯ ಕ್ಷಣವಾಗಿದೆ. ಈ ಗೆಲುವು ತಂಡದ ಆಟಗಾರರ ಪರಿಶ್ರಮ, ತರಬೇತುದಾರರ ಮಾರ್ಗದರ್ಶನ ಹಾಗೂ ತಂಡದ ಸಮರ್ಪಣೆಯ ಫಲವಾಗಿದೆ. ಮಹಾರಾಜ ಟ್ರೋಫಿಯಂತಹ ಪ್ರತಿಷ್ಠಿತ ಟೂರ್ನಿಗಳು ರಾಜ್ಯದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಇಲ್ಲಿಂದ ಹೊರಹೊಮ್ಮುವ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಲಿ”

– ಡಿ.ಎಸ್. ಅರುಣ್
