Homeಜಿಲ್ಲೆ*ವಿಶೇಷ ಲೇಖನ* ರೈತರ ಕಣ್ಣಲ್ಲಿ ಆತಂಕ- ಮಳೆಗಾಗಿ ಗ್ರಾಮದೇವತೆಗಳ ಗಡಿಪೂಜೆ

*ವಿಶೇಷ ಲೇಖನ* ರೈತರ ಕಣ್ಣಲ್ಲಿ ಆತಂಕ- ಮಳೆಗಾಗಿ ಗ್ರಾಮದೇವತೆಗಳ ಗಡಿಪೂಜೆ

Spread the love
  • ಆರುಂಡಿ ಶ್ರೀನಿವಾಸ್

ಸಾಮಾನ್ಯವಾಗಿ ಗ್ರಾಮೀಣ ಜನರು ಮಳೆ ಬಾರದೆ ಇದ್ದಾಗ ದೇವರಲ್ಲಿ ಮೊರೆ ಹೋಗುವುದು ಅನಿವಾರ್ಯ. ಹಲವು ಪ್ರದೇಶಗಳಲ್ಲಿ ಹಲವು ರೀತಿಯಲ್ಲಿ ಮಳೆಗಾಗಿ ಪೂಜೆ ಪುನಸ್ಕಾರ, ಹೋಮ-ಹವನ ಇತ್ಯಾದಿಗಳ ನಡೆಯುತ್ತಲೆ ಇವೆ.ಇದು ಒಂದು ರೀತಿಯ ಜಾನಪದ ನಂಬಿಕೆಯೂ ಹೌದು. ಅತ್ತೊಂದು ಪ್ರಸಂಗ ನ್ಯಾಮತಿಯ ಬಳಿಯ ಪಲವನಹಳ್ಳಿ ನಡೆದಿದೆ.

ಜುಲೈ ತಿಂಗಳು ಕಳೆಯುತ್ತಿದ್ದರು ಮಲೆನಾಡು ಸೇರಿದಂತೆ ಬಯಲು ಸೀಮೆಗಳಲ್ಲಿ ಮಳೆ ಕೈಕೊಟ್ಟಿದ್ದು, ರೈತರು ಸೇರಿದಂತೆ ಜನ ಸಮುದಾಯ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇತ್ತೀಚಿಗೆ ಒಂದೆರೆಡು ದಿನ ಮಲೆನಾಡು ಭಾಗದಲ್ಲಿ ಮಳೆ ಬಂದಿದ್ದು ಬಿಟ್ಟರೆ ಅನೇಕ ಜಿಲ್ಲೆಗಳಲ್ಲಿ ಮಳೆಯೇ ಆಗಿಲ್ಲ.

ಊರಿನ ಕೆರೆಗಳು, ಬಾವಿಗಳು ಒಣಗಿ ವ್ಯವಸಾಯಕ್ಕೆ ಇರಲಿ, ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಕೂಡ ನೀರಿಲ್ಲದಂತೆ ಆಗಿದೆ. ಬಹುತೇಕ ಭಾಗಗಳಲ್ಲಿ ಏತ ನೀರಾವರಿ ಯೋಜನೆಗಳು ಕೂಡ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ಗ್ರಾಮಾಂತರ ಕೆರೆಗಳಿಗೆ ನೀರು ತುಂಬಿಸಲು ಕಷ್ಟವಾಗುತ್ತಿದೆ. ಮಲೆನಾಡು ಭಾಗದ ತುಂಗಾ ನದಿಯಲ್ಲಿ ನೀರಿದ್ದರು ಕೂಡ ಮೆಸ್ಕಾಂ ವಿದ್ಯುತ್ ಕಂಪನಿಗೆ 125 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಇನ್ನು ಬಯಲು ಸೀಮೆಯ ಗೊಳನ್ನು ಕೇಳುವವರೆ ಇಲ್ಲವಾಗಿದೆ.

ಮಳೆ ಬಾರದೆ ಜನರು ಮುಗಿಲೆತ್ತ ಮುಖ ಮಾಡಿ ನಿಂತಿದ್ದಾರೆ. ಈ ಹಿಂದೆ ಸ್ವಲ್ಪ ಮಳೆ ಬಂದಿದ್ದರಿಂದ ಬಯಲು ಸೀಮೆಯ ಕೆಲವು ಕಡೆ ಮೆಕ್ಕೆ ಜೋಳ ಸೇರಿದಂತೆ ವಿವಿಧ ಬೆಳೆಗಳ ಬೀಜಗಳನ್ನು ಭಿತ್ತಲಾಗಿತ್ತು. ಆದರೆ ಅನಂತರ ಮಳೆ ಬಾರದೆ ಇದ್ದುದರಿಂದ ಅವು ಏಳಿಗೆಯಾಗಿ ಬೆಳೆಯಲೆ ಇಲ್ಲ. ಅಳಿಸಿ ಮತ್ತೇ ಭಿತ್ತಬೇಕಾದ ಅನಿವಾರ್ಯತೆ ರೈತರಲ್ಲಿ ಮುಡಿತು.ಇದು ದುಪ್ಪಟ್ಟು ಖರ್ಚು ಅಷ್ಟಾದರು ಕೂಡ ಈಗ ಮತ್ತೇ ಮಳೆ ಇಲ್ಲ.

ಬಯಲು ಸೀಮೆಯಾದ ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮದಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದ್ದು, ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಬರಗಾಲದ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗಡಿದೇವತೆಗಳಿಗೆ ವಿಶೇಷ ಗಡಿಪೂಜೆ ಸಲ್ಲಿಸಿದ್ದಾರೆ.

ದೇವರ ಮೆರವಣಿಗೆ

ಮಳೆಗಾಗಿ ಗ್ರಾಮಸ್ಥರು ಬರಿಗಾಲಿನಲ್ಲಿ, ತಲೆಯ ಮೇಲೆ ದೇವರನ್ನು ಹೊತ್ತು ಗ್ರಾಮದ ಹೊಲ-ಗದ್ದೆಗಳ ಮೂಲಕ ಮೆರವಣಿಗೆ ಮಾಡಿದರು. ಕೈಯಲ್ಲಿ ದೇವರ ಧ್ವಜ ಹಿಡಿದು ಗ್ರಾಮದ ಯುವಕರು, ಹಿರಿಯರು ಸಾಲುಗಟ್ಟಿ ನಡೆದರು. ಮೆರವಣಿಗೆಯಲ್ಲಿ ಊರು ದೇವರುಗಳಾದ ಆಂಜನೇಯ ಸ್ವಾಮಿ, ಲಕ್ಷಿö್ಮ ರಂಗನಾಥ ಸ್ವಾಮಿ, ಶ್ರೀಗಂಗಾ ಪರಮೇಶ್ವರಿ ದೇವಿ, ಸೇವಾಲಾಲ್ ಸ್ವಾಮಿ ಹೊತ್ತು ಭಕ್ತರುಗಳು ಸಾಗಿದರು.

ಈ ವರ್ಷ ಮಳೆ ಬಾರದೆ ಇದ್ದುದರಿಂದ ಊರಿನ ಹಿರಿಯರು ಸೇರಿದಂತೆ ಎಲ್ಲಾ ಸಮುದಾಯದವರು ಸಭೆ ಸೇರಿ ಗಡಿ ಪೂಜೆ ಮಾಡಲೇ ಬೇಕು ಎಂದು ನಿರ್ಧರಿಸಿದರು. ಈ ಹಿನ್ನೆಯಲ್ಲಿ ಪೂಜೆ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಯಿತು. ಗಡಿ ಪೂಜೆ ಎಂದರೆ ಸಾಮಾನ್ಯವಲ್ಲ. ಸುಮಾರು 15 ರಿಂದ 20 ಕಿ. ಮೀ ದೂರದ ವರೆಗೆ ದೇವರಗಳನ್ನ ಹೊತ್ತು ಸಾಗಬೇಕು. ಅದು ಬರಿಗಾಲಲ್ಲೆ ಹೋಗಬೇಕು. ಗಡಿ ಪೂಜೆ ಆರಂಭವಾಗುವ ಮೊದಲು ಸಾರು ಹಾಕಬೇಕು. ಇದೊಂದು ರೀತಿಯಲ್ಲಿ ಹಬ್ಬವೇ ಆಗುತ್ತದೆ.

ಬಯಲು ಸೀಮೆಯಾದರು ಕೂಡ ಕುರುಚಲು ಗುಡ್ಡಗಳಿಂದ ಎತ್ತರದ ಪ್ರದೇಶ ಗಡಿಯಾಗಿದೆ. ಆ ಗುಡ್ಡ ಬೆಟ್ಟದಲ್ಲಿ ಗಡಿ ಇದ್ದು. ಅದಕ್ಕೆ ದಾರಿಯನ್ನು ಕೂಡ ಮಾಡಬೇಕಾಗುತ್ತದೆ. ದಾರಿಯಲ್ಲಿ ಕಣಿವೆ, ಕಲ್ಲು, ಮುಳ್ಳು, ಏರು-ಇಳಿವುಗಳಿದ್ದೆ ಇರುತ್ತವೆ ಅದನ್ನೆಲ್ಲಾ ದಾಟಿ ಗಡಿಯನ್ನು ತಲುಪಿ ಅಲ್ಲಿ ದೇವರುಗಳನ್ನೆಲ್ಲಾ ಇಟ್ಟು ವೃಕ್ಷಕ್ಕೆ ಪೂಜೆ ಸಲ್ಲಿಸಬೇಕಾಗುತ್ತದೆ. ಈ ಪೂಜೆ ಕಾರ್ಯ ಇಡೀ ದಿನ ನಡೆಯುತ್ತದೆ.

ಮಳೆ ಬಾರದೆ ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ಹಲವು ವಿಚಿತ್ರ ಸಂಪ್ರದಾಯಗಳನ್ನು ಮಾಡಿಕೊಂಡಿ ಬಂದಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕಪ್ಪೆಗಳ ಮದುವೆ ಮಾಡಿಸುವುದು, ತೊನ್ನು ಬಂದವರನ್ನು ಸಮಾಧಿಯಿಂದ ತೆಗೆದು ಸುಡುವುದು ಮೊದಲಾದ ಆಚರಣೆಗಳನ್ನೂ ಇನ್ನೂ ಕೆಲವು ಗ್ರಾಮಗಳಲ್ಲಿ ಇವೆ. ಇದರಲ್ಲಿ ಬಹುಮುಖ್ಯವಾಗಿ ನ್ಯಾಮತಿ ಸುತ್ತಮುತ್ತ ಗಡಿಪೂಜೆ ಎಂಬ ವಿಶೇಷ ಪೂಜೆಯನ್ನು ನಡೆಸುತ್ತಾ ಬಂದಿದ್ದಾರೆ. ಇದಲ್ಲದೆ ಈ ತಾಲ್ಲೂಕಿನಲ್ಲಿ ಪ್ರಸಿದ್ದಿ ಪಡೆದಿರುವ ತೀರ್ಥರಾಮೇಶ್ವರ ಎಂಬ ಪುಣ್ಯಕ್ಷೇತ್ರಕ್ಕೆ ತಮ್ಮಮ್ಮ ಗ್ರಾಮಗಳ ದೇವರುಗಳನ್ನ ತಲೆ ಮೇಲೆ ಒತ್ತುಕೊಂಡು ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವು ಕೂಡ ಇದೆ. ಇದಕ್ಕೆ ವೈಜ್ಞಾನಿಕ ತಳಹದಿ ಇಲ್ಲದಿದ್ದರೂ, “ನಂಬಿದ ದೇವರು ಕೈ ಬಿಡಲ್ಲ” ಎಂಬ ಭಕ್ತಿಯೇ ಇಲ್ಲಿನ ರೈತರ ಆಸರೆ ಆಗಿದೆ.

ಮಳೆಗಾಗಿ ರೈತರು, ಗ್ರಾಮಸ್ಥರು ನಡೆಸುತ್ತಿರುವ ಈ ಪೂಜೆಗಳಿಗೆ ವೈಜ್ಞಾನಿಕ ತಲಹದಿ ಇಲ್ಲ ನಿಜ. ಆದರೆ ನಂಬಿಕೆ ಬಹಳ ಮುಖ್ಯವಾಗುತ್ತದೆ. ರೈತ ತನ್ನ ಸುತ್ತಲ್ಲಿನ ನಿಸರ್ಗವನ್ನೇ ಪೂಜಿಸುತ್ತಾನೆ. ಭಕ್ತಿಯೇ ಆತನ ಶಕ್ತಿ ಆಗಿರುತ್ತದೆ. ನಮ್ಮೂರಿನಲ್ಲಿ ಮಳೆ ಇಲ್ಲದೆ ಕಂಗಲಾಗಿರುವಾದ ನಮ್ಮ ಹಿರಿಯರೆಲ್ಲಾ ಸೇರಿ ಈ ಪೂಜೆ ಮಾಡಿದ್ದೇವೆ. ಮಳೆ ಬಂದೆ ಬರುತ್ತದೆ ಎಂದು ನಂಬಿಕೆ ನಮ್ಮದು.
ಸರ್ಕಾರಗಳು ಕೋಟ್ಯಾಂತರು ರೂ ಖರ್ಚು ಮಾಡಿ ಮೋಡಭಿತ್ತನೆಯಂತಹ ಕೆಲಸ ಮಾಡಿದರು ವಿಫಲವಾಗತ್ತದೆ ಅಲ್ಲದೆ. ಈ ಮೋಡ ಭಿತ್ತನೆಯಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಸತ್ಯವಾಗಿದೆ.

*ರಾಘವೇಂದ್ರ, ಗ್ರಾಮಸ್ಥ*

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments