ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.4
“ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವು ಅವಕಾಶಗಳಿದ್ದರೂ ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ನನ್ನ ನಿರ್ಧಾರ ಇಂದು ಸಾರ್ಥಕವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಇಂಜಿನಿಯರ್‌ಗಳಾಗಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಕಂಡಾಗ ಶಿಕ್ಷಕನಾಗಿ ಹೆಮ್ಮೆ ಎನಿಸುತ್ತದೆ” ಎಂದು ಭದ್ರಾವತಿ ಸರ್ಕಾರಿ ಪಾಲಿಟೆಕ್ನಿಕ್ ನಿವೃತ್ತ ಉಪನ್ಯಾಸಕ ಗುರುಮೂರ್ತಿ ಹೇಳಿದರು.
ಪಟ್ಟಣದ ಜುವೆಲ್ ರಾಕ್ ಹೋಟೆಲ್‌ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಸೊರಬ ಹಳೆ ವಿದ್ಯಾರ್ಥಿಗಳ ಸಂಘದ ಸಿವಿಲ್ ಇಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಮನಿಸಿ: ಹಾವು ಹಾಗೂ ನಾಯಿ ಕಡಿತ- ನಾಟಿ ವೈದ್ಯರ ಚಿಕಿತ್ಸೆಯಿಂದ ದೂರವಿರಿ : ಡಿಸಿ
ಬಾಲ್ಯದಲ್ಲಿ ರಾಜಕಾರಣಿಯೊಬ್ಬರು ಇಂಜಿನಿಯರ್‌ಗೆ ನೀಡಿದ ಗೌರವವನ್ನು ಕಂಡು ತಾವು ಇಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದೆ. ಅದರಂತೆ ಇಂಜಿನಿಯರಿಂಗ್ ಶಿಕ್ಷಣ ಪಡೆದರೂ, ಸಮಾಜಕ್ಕೆ ಗುಣಮಟ್ಟದ ಇಂಜಿನಿಯರ್‌ಗಳನ್ನು ರೂಪಿಸಬೇಕೆಂಬ ಆಶಯದಿಂದ ಉಪನ್ಯಾಸಕ ವೃತ್ತಿ ಆರಿಸಿಕೊಂಡೆ. ಇಂದು ತಮ್ಮ ಬಳಿ ಕಲಿತ ನೂರಾರು ವಿದ್ಯಾರ್ಥಿಗಳು ದೇಶದ ವಿವಿಧ ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದು ತಮ್ಮ ಜೀವನದ ಅತ್ಯಂತ ದೊಡ್ಡ ಸಾಧನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ವಾಸುದೇವ್ ಅಪ್ಪಾಜಿ ಗೋಳ್ ಮಾತನಾಡಿ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣವೇ ಅಡಿಪಾಯವಾಗಿದೆ. ಉತ್ತಮ ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ. ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಹುದ್ದೆಗಳು ಹಾಗೂ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶಿಕ್ಷಕರ ಪರಿಶ್ರಮಕ್ಕೆ ಸಂದ ಗೌರವವಾಗಿದೆ ಎಂದರು.
ದಾವಣಗೆರೆಯ ಡಿಆರ್‌ಆರ್ ಪಾಲಿಟೆಕ್ನಿಕ್ ಉಪನ್ಯಾಸಕ ಜಾವಿದ್ ಇಕ್ಬಾಲ್ ಮಾತನಾಡಿ, 20 ವರ್ಷಗಳ ಬಳಿಕ ವಿದ್ಯಾರ್ಥಿಗಳು ಒಂದಾಗಿ ತಮ್ಮ ಗುರುಗಳನ್ನು ಗೌರವಿಸಿರುವುದು ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯದ ಅಪರೂಪದ ಕ್ಷಣವಾಗಿದೆ. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಪ್ರಾಮಾಣಿಕತೆ, ನೈತಿಕತೆ ಹಾಗೂ ಭ್ರಷ್ಟಾಚಾರ ಮುಕ್ತ ಸೇವೆಗೆ ಬದ್ಧರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಪಾಲಿಟೆಕ್ನಿಕ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರುಗಳಾದ ಜಯಪ್ಪ, ವೀರಣ್ಣ, ಚಂದ್ರಶೇಖರ್, ರವಿಶಂಕರ್, ಜಯಣ್ಣ, ಮುರಳೀಧರ, ಅರುಣ್, ಲೋಕೇಶ್, ಶ್ರೀಕಾಂತ್, ಶೇಷಾಚಲ, ಅಭಿಲಾಷ್ ಹಾಗೂ ಕುಲಸಚಿವೆ ನಾಗರತ್ನಮ್ಮ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು. ಇದೇ ವೇಳೆ 20 ವರ್ಷಗಳ ಬಳಿಕ ಒಂದಾದ ಹಳೆಯ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಹಂಚಿಕೊಂಡು ಭಾವಪೂರ್ಣ ಕ್ಷಣಗಳಿಗೆ ಸಾಕ್ಷಿಯಾದರು.
ಹಳೆಯ ವಿದ್ಯಾರ್ಥಿ ಯಶೋಧರ ಸ್ವಾಗತಿಸಿದರು. ಸುಶ್ಮಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ನವೀನ್ ಕುಮಾರ್ ಎಂ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕುಮಾರ್ ಸಿ.ಪಿ., ಸಂತೋಷ್ ಕರಡಿಗೇರಿ, ಶುಭಕರ, ರವಿ, ಮಧು ನಾಯಕ್, ಸಂತೋಷ್ ಕುಮಾರ್ ಎಸ್.ಎನ್. ಸೇರಿದಂತೆ ಅನೇಕ ಹಳೆಯ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
