ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡು ಭಾಗದ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿಲು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿರುವುದು ಈ ಭಾಗದ ಜನಜೀವನದ ಮೇಲೆ ತೂಗುಗತ್ತಿ ನೇತಾಡುವಂತಾಗಿದೆ. 20.668 ಚದುರ ಕಿ.ಮೀ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಕರುಡು ಅಧಿಸೂಚನೆ ಈ ಗ್ರಾಮಗಳ ಬದುಕನ್ನೆ ನಾಶಮಾಡುವ ಅಪಾಯವನ್ನು ಸೃಷ್ಟಿಸಬಲ್ಲದು.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಿಲ್ಲೆಯಲ್ಲಿ ಹೋರಾಟಗಳು ಆರಂಭವಾಗಿವೆ. ಪಕ್ಷಾತೀತವಾಗಿ ರೈತರ, ಆದಿವಾಸಿಗಳ, ಗ್ರಾಮಗಳ ಬದುಕನ್ನು ಉಳಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟಗಳು ಅಗತ್ಯ ವೆನಿಸದರೂ ರಾಜಕೀಯ ಪಕ್ಷಗಳ ಆತ್ಮವಂಚನೆಯನ್ನು ಇಲ್ಲಿ ಮರೆಯುವಂತಿಲ್ಲ. ಗಾಡ್ಗಿಲ್ ವರದಿ ನಂತರ ಬಂದ ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟಗಳ ಜನಜೀವನದ ಮೇಲೆ ಈವರೆಗೂ ಆತಂಕವನ್ನು ಸೃಷ್ಟಿಸುವಂತಿರುವಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳದ್ದು ಸಮಾನ ಪಾಲಿದೆ.
ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿರುವ ಹೊತ್ತಿನಲ್ಲೆ ಕಾಂಗ್ರೇಸ್ -ಬಿಜೆಪಿ ಪಕ್ಷಗಳು ‘ರಾಜಕೀಯ’ಯದಲ್ಲಿ ತೊಡಗಿವೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವಿರುವಾಗ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ಅಥವಾ ವರದಿಯಿಂದ ಕೇರಳ ಮಾದರಿ ಯಲ್ಲಿ ಕರ್ನಾಟಕವನ್ನು ಹೊರಗಿಡುವ ನಿರ್ಧಾರ ಕೈಗೊಳ್ಳಬೇಕು. ಈ ಎಲ್ಲಾ ಅಧಿಕಾರ ಬಿಜೆಪಿಯ ಕೈಯಲ್ಲಿದೆ. ಬಿಜೆಪಿಯ ಸಂಸದರು ಈ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ವಾದಿಸುತ್ತಿದ್ದರೆ. ಇದಕ್ಕೆ ಪ್ರತಿಯಾಗಿ 2013 ರಲ್ಲಿ ಕಾಂಗ್ರೇಸ್ ನೇತೃತ್ವದ ಯುಪಿಎ ಸರ್ಕಾರದ ಸಂದರ್ಭದಲ್ಲೂ ಈ ವರದಿ ಸರ್ಕಾರದ ಮುಂದೆ ಇತ್ತು, ಆಗ ಕಾಂಗ್ರೇಸ್ ಏಕೆ ಕರ್ನಾಟಕದ ಹಿತ ಕಾಯಲಿಲ್ಲ ಎನ್ನುವ ಪ್ರತಿವಾದದಲ್ಲಿ ತೊಡಗಿದೆ. ಇದು ಈ ಎರಡೂ ಪಕ್ಷಗಳು ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ಧೋರಣೆಯೇ ಆಗಿದೆ.

ಜಿಲ್ಲಾ ಸಚಿವ ಮಧುಬಂಗಾರಪ್ಪನವರು ಕಸ್ತೂರಿ ರಂಗನ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರ ವಿರುದ್ದ ವಾಗ್ಧಾಳಿ ನಡೆಸಿದ್ದು, ಕೆಪಿಸಿಸಿ ವಕ್ತಾರರು ಮಾಜಿ ಸಚಿವರೂ ಆಗಿರುವ ಕಿಮ್ಮನೆ ರತ್ನಾಕರ್ ಅವರು ಕಸ್ತೂರಿ ರಂಗನ್ ವರದಿ ವಿರುದ್ದ ನಡೆಯುತ್ತಿರುವ ಪಕ್ಷಾತೀತ ಹೋರಾಟವನ್ನು ಪ್ರಶ್ನಿಸಿದ್ದಾರೆ. ಬಿಜೆಪಿಯ ಸಿದ್ದಾಂತದ ವಿರುದ್ದ ಕಾಂಗ್ರೆಸ್ ದೇಶದಲ್ಲಿ ಹೋರಾಡುವಾಗ ಬಿಜೆಪಿ ಜೊತೆ ಹೆಜ್ಜೆ ಹಾಕುವುದು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ. ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ಹೊರಡಿಸಿರುವುದು ಎನ್ ಡಿ ಎ ಸರ್ಕಾರ, ಬಿಜೆಪಿಯವರದ್ದೆ ಸರ್ಕಾರವಿರುವಾಗ ಅವರ ಜೊತೆ ಸೇರಿ ಕೇಂದ್ರದ ವಿರುದ್ದ ಹೋರಾಟ ಮಾಡುವುದು ಎಷ್ಟರಮಟ್ಟಿಗೆ ಸರಿ? ಎಂದು ತಾತ್ವಿಕ ಪ್ರಶ್ನೆಯನ್ನು ಎಸೆದಿದ್ದಾರೆ.
ಈಗಾಗಲೆ ಹೊಸನಗರ , ಸಾಗರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಮತ್ತು ಬಿಜೆಪಿ ಮುಖಂಡರುಗಳು ಕಾಂಗ್ರೆಸ್ ನ ಶಾಸಕರಾದ ಬೇಳೂರುಗೋಪಾಲಕೃಷ್ಣ, ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್. ಎಂ ಮಂಜುನಾಥಗೌಡ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡುಗಳು, ಕಾರ್ಯಕರ್ತರು ಭಾಗವಹಿಸಿದ್ದಾರೆ. ವೇದಿಕೆ ಹಂಚಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಿಜೆಪಿ ಜೊತೆಗಿನ ಹೋರಾಟ ಕಾಂಗ್ರೆಸ್ ನ ತಾತ್ವಿಕತೆಗೆ ಧಕ್ಕೆ ತಂದಂತಾಗಿದೆ ಎಂಬ ಅರ್ಥದಲ್ಲಿ ಪ್ರಶ್ನಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರು ಪ್ರತ್ಯೇಕವಾಗಿ ಹೋರಾಟ ಘೋಷಣೆ ಮಾಡಿದ್ದಾರೆ. ಇದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರಲ್ಲಿ ಮುಜುಗರ ಮತು ಗೊಂದಲವನ್ನು ಉಂಟು ಮಾಡಿದೆ.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಕ್ಷಾತೀತ ಹೋರಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಇದುವರೆಗೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಆದರೆ ಕಾಂಗ್ರೆಸ್ ನ ಶಾಸಕರು, ಮುಖಂಡುರಗಳನೇಕರು ಬಿಜೆಪಿ,ಜೆಡಿಎಸ್ ಜೊತೆ ಹೋರಾಟದ ವೇದಿಕೆ ಹಂಚಿಕೊಳ್ಳುತ್ತಿರುವುದು ಕಾಂಗ್ರೆಸ್ ನಲ್ಲಿನ ವೈರುಧ್ಯವನ್ನು ಬಯಲುಗೊಳಿಸಿದೆ. ಬಿಜೆಪಿ ಜೊತೆ ಕಾಂಗ್ರೆಸ್ ನಾಯಕರುಗಳು ವೇದಿಕೆ ಹಂಚಿಕೊಳ್ಳುತ್ತಿರುವ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರುವ ಬಗ್ಗೆ ಬಹಿರಂಗವಾಗಿ ನಾನು ಮಾತನಾಡುವುದಿಲ್ಲ ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ ಎನ್ನುವ ಕಿಮ್ಮನೆ ರತ್ನಾಕರ್ ಅವರು ಮಂಜುನಾಥ್ ಗೌಡರ ರಾಜಕೀಯ ನಡೆಯನ್ನು “ಹೊಂದಾಣಿಕೆ ರಾಜಕಾರಣ”ಕ್ಕೆ ಸಮೀಕರಿಸಿದ್ದಾರೆ. ಅಲ್ಲದೆ ಸದ್ಯ ತಮ್ಮ ಪಕ್ಷದಲ್ಲೆ ಇರುವ ಆರ್ ಎಂ ಮಂಜುನಾಥ್ ಗೌಡರಿಗೆ ಬಿಜೆಪಿ. ಜೆಡಿಎಸ್ ಪಕ್ಷಗಳ ನಾಡಿ ಮಿಡಿತ ಗೊತ್ತಿದೆ ಎನ್ನುವ ಮೂಲಕ ಅವರ ಕಾಂಗ್ರೇಸ್ ಪಕ್ಷ ನಿಷ್ಠೆಯನ್ನು ಪ್ರಶ್ನಿಸಿದ್ದಾರೆ.
ಕಸ್ತೂರಿರಂಗನ್ ವರದಿ ವಿರುದ್ದ ಹೋರಾಡುವಲ್ಲಿ , ಬಿಜೆಪಿಯನ್ನು ರಾಜಕೀಯವಾಗಿ ಕಟ್ಟಿಹಾಕಬಹುದಾದ ಈ ಸಂದರ್ಭದಲ್ಲಿ ಕಾಂಗ್ರೆಸ್ ಒಡೆದ ಮನೆಯಂತಾಗಿದೆ.
– ಎನ್. ರವಿಕುಮಾರ್
