ಸಂಪಾದಕೀಯ…
ಆಡಳಿತರೂಢರ ಬೆಂಗಾವಲಲ್ಲೆ ಇಸ್ಪೀಟ್ ಗ್ಯಾಂಬ್ಲಿಂಗ್!!
ಅವಳಿ ನಗರಗಳೀಗ ಜೂಜು ಅಡ್ಡೆಗಳು
ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳಲ್ಲಿ ಇಸ್ಪೀಟ್ ಜೂಜಾಟದ ಅಡ್ಡೆಗಳು ರಾಜಾರೋಷವಾಗಿ ತಲೆಎತ್ತಿದ್ದು, ಈ ದಂಧೆಯನ್ನು ಹತ್ತಿಕ್ಕುವಂತೆ ಆಡಳಿತರೂಢ ಕಾಂಗ್ರೇಸ್ಸಿಗರೇ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಎದುರಾಗಿರುವುದು ಸೋಜಿಗದ ಸಂಗತಿ.
ಜಿಲ್ಲೆಯಲ್ಲಿ ಗಾಂಜಾ ಹಾವಳಿ ನಿಗ್ರಹಕ್ಕೆ ’ಶೂನ್ಯ ಸಹನೆ’ ಧೋರಣೆ ಹೊಂದಲಾಗಿದೆ ಎಂದು ಪೊಲೀಸ್ ಇಲಾಖೆ ಘೋಷಿಸಿದ್ದರೂ. ಗಾಂಜಾ ವ್ಯಸನಿಗಳ ಮತ್ತು ಗಾಂಜಾ ಪೆಡ್ಲರ್ ಗಳ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ. ಪೊಲೀಸರು ಅಲ್ಲಲ್ಲಿ ಗಾಂಜಾ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದರೂ ಅದಿನ್ನೂ ತಹಬಂದಿಗೆ ಬಂದಿಲ್ಲ ಎನ್ನುವುದು ಸ್ಪಷ್ಟ.
ಇದೀಗ ಗಾಂಜಾ ದಂಧೆಗೂ ಮಿಗಿಲಾಗಿ ಶಿವಮೊಗ್ಗ -ಭದ್ರಾವತಿ ಅವಳಿ ನಗರಗಳಲ್ಲಿ ಇಸ್ಪೀಟ್ ಗ್ಯಾಂಬ್ಲಿಂಗ್ ನಗರಗಳ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿದ್ದು, ಗ್ಯಾಂಬ್ಲಿಂಗ್ ದಂಧೆಗೆ ಇಳಿದಿರುವ ಮಾಫಿಯಾ ಅಪರಾಧ ಕೃತ್ಯಗಳಿಗೂ ಕಾರಣವಾಗಿದೆ. ಭದ್ರಾವತಿಯ ಎಲ್ಲೆಂದರಲ್ಲಿ ತಲೆ ಎತ್ತಿರುವ ಇಸ್ಪೀಟ್ ಗ್ಯಾಂಬ್ಲಿಂಗ್ ಅಡ್ಡೆಗಳು ಶಿವಮೊಗ್ಗ ಕ್ಕೂ ವಿಸ್ತರಿಸಿದ್ದು, ಈ ಮಾಫಿಯಾಗೆ ಆಡಳಿತ ರೂಢ ಪಕ್ಷದ ರಾಜಕೀಯ ನಾಯಕರು, ಅವರ ಕುಟುಂಬಸ್ಥರೆ ಬೆಂಗಾವಲಾಗಿ ನಿಂತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದು ಅತ್ಯಂತ ಕಳವಳಕಾರಿ ಸಂಗತಿ.
ಈ ಅವಳಿ ನಗರಗಳಲ್ಲಿ ಎಲ್ಲೆಂದರಲ್ಲಿ ಇಸ್ಪೀಟ್ ಜೂಜಾಟ ನಿರ್ಭಯವಾಗಿ ನಡೆಯುತ್ತಿರುವುದನ್ನು ನೋಡಿದಾಗ ಈ ಮಾಫಿಯಾಗೆ ರಾಜಕೀಯಾಧಿಕಾರದ ಪ್ರಭಾವಿ ಪೋಷಕರು ಇದ್ದಾರೆ ಎಂಬುದನ್ನು ನಿರಾಕರಿಸಲಾಗದು. ಇಸ್ಪೀಟ್ ಗ್ಯಾಂಬ್ಲಿಂಗ್ ಅಡ್ಡೆಗಳಿಗೆ ಕಾಂಗ್ರೇಸ್ ಮುಖಂಡರುಗಳೇ ಪಾಲುದಾರರಾಗಿ ಕಾವಲಿಗೆ ನಿಂತಿದ್ದಾರೆ. ಗ್ರಾಮಾಂತರ ಮತ್ತು ತುಂಗಾನಗರ ಠಾಣಾ ವ್ಯಾಪ್ತಿಯ ಕಾಡುಗಳಲ್ಲಿ ಇಸ್ಪೀಟ್ ಜೂಜಾಟ ಭರ್ಜರಿ ನಡೆದಿದೆ. ಚಿಕ್ಕಮಗಳೂರು, ದಾವಣಗರೆ, ಚಿತ್ರದುರ್ಗ ಜಿಲ್ಲೆಗಳಿಂದಲೂ ಜೂಜುಕೋರರು ಶಿವಮೊಗ್ಗಕ್ಕೆ ಗುಳೆ ಬರುತ್ತಿದ್ದು, ಗ್ಯಾಂಬ್ಲರ್ ಗಳನ್ನು ಕರೆತರಲು ನಿರುದ್ಯೋಗಿ ಹುಡುಗರ ತಂಡವೇ ಕೆಲಸ ಮಾಡುತ್ತಿದೆ. ಈ ದಂಧೆಗೆ ಕಾಂಗ್ರೇಸ್ ಪಕ್ಷದ ಕೆಲವು ಮುಖಂಡರುಗಳೇ ಪಾಲುದಾರರಾಗಿದ್ದಾರೆ. ಕಾಂಗ್ರೇಸ್ ಮುಖಂಡರೇ ರಕ್ಷಣೆ ಕೊಡುತ್ತಿರುವುದು ಸಮಾಜದ್ರೋಹದ ಕೆಲಸ.
ಪೊಲೀಸ್ ಇಲಾಖೆ ಕೂಡ ರಾಜಕೀಯ ಪ್ರಭಾವದ ಮುಂದೆ ಮಂಡಿಯೂರಿ ಇಂತಹ ದಂಧೆಗಳಿಗೆ ಕಾವಲು ನಿಂತಿವೆ ಎಂಬ ಅನುಮಾನ ಸ್ಪಷ್ಟವಾಗಿದೆ. ಪೊಲೀಸ್ ಅಧಿಕಾರಿಗಳು ರಾಜಕೀಯ ಮರ್ಜಿಯೇ ಮೇಲೆ ವರ್ಗಾವಣೆ ಆಗಿ ಬಂದಿರುವುದರಿಂದ ಎಲ್ಲಾ ಅಕ್ರಮಗಳನ್ನೂ ಕಂಡು ಕಾಣದಂತೆಯೂ, ಅದಕ್ಕೆ ಪ್ರತಿಫಲವಾಗಿ ತಮ್ಮ ಪಾಲನ್ನೂ ಪಡೆಯುತ್ತಾ ಕರ್ತವ್ಯ ಮರೆತಿದ್ದಾರೆ ಎನ್ನುವುದು ನಾಗರೀಕರ ಆರೋಪ. ಜಿಲ್ಲೆಯಲ್ಲಿ ಮರಳು , ಗಾಂಜಾ, ಇಸ್ಪೀಟ್ ಗ್ಯಾಂಬ್ಲಿಂಗ್ ಮಾಫಿಯಾ ಗಳು ನಿರಂಕುಶವಾಗಿ ನಡೆಯತ್ತಿದ್ದರೂ ವಿಪಕ್ಷಗಳಾದರೂ ಸರ್ಕಾರದ ಗಮನ ಸೆಳೆಯುವಲ್ಲಿ ಹೊಣೆಗಾರಿಕೆ ಮರೆತಿವೆ. ಈಗಾಗಲೆ ಜಿಲ್ಲಾಯುವ ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಂದಾಗುವ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಆದರೆ ಅವರದ್ದೇ ಸರ್ಕಾರದಲ್ಲಿ ಇದೆಲ್ಲಾ ನಡೆಯುತ್ತಿರುವುದರ ಹೊಣೆಗಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರೆ ಹೊರಬೇಕು. ಆ ಮೂಲಕ ಜಿಲ್ಲೆಯನ್ನು ಅಕ್ರಮ, ಅಪರಾಧಗಳಿಂದ ಮುಕ್ತಗೊಳಿಸಬೇಕು.
