Homeರಾಜಕೀಯರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಿಂದ ದಿವಾಳಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಿಂದ ದಿವಾಳಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

Spread the love

ಶಿವಮೊಗ್ಗ,ಅ.29: ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶೇ 82ರಷ್ಟು ಬೆಳೆ ನಾಶವಾಗಿದೆ ಎಂದು ಕಂದಾಯ ಸಚಿವರೇ ತಿಳಿಸಿದ್ದಾರೆ. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಅಡಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ 2,500 ರೂ. ಮಾತ್ರ ಘೋಷಿಸಿದ್ದು, ಆ ಹಣವೂ ರೈತರ ಖಾತೆಗೆ ಜಮೆಯಾಗಿಲ್ಲ ಎಂದು ಆರೋಪಿಸಿದರು.

ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು. ಸರ್ಕಾರ ಆರ್ಥಿಕ ಸಂಕಷ್ಟದ ನೆಪದಲ್ಲಿ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂಬುದು ಹಲವು ವರ್ಷಗಳ ಹೋರಾಟವಾಗಿತ್ತು. ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3 ರಿಂದ 7ಕ್ಕೆ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಪ್ರಸ್ತುತ ಸರ್ಕಾರ ನ್ಯಾಯಾಲಯದಲ್ಲಿ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ದಲಿತರಿಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರ ಎಡವಿದೆ. ಇಲ್ಲಿ ದಲಿತರು, ಅಂಗವಿಕಲರು, ವೃದ್ಧರು ಹಾಗೂ ವಿಧವೆಯರಿಗೆ ನೀಡುವ ಪಿಂಚಣಿ ಮತ್ತು ಮಾಸಿಕ ನೆರವು ಕಳೆದ ಆರು-ಏಳು ತಿಂಗಳಿಂದ ಸ್ಥಗಿತಗೊಂಡಿದೆ ಎಂದು ಆರೋಪಿಸಿದ ಅವರು, ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಸಕಾಲದಲ್ಲಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನಡೆದ ನಾಲ್ಕು ವಿಧಾನ ಪರಿಷತ್ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಇದು ಸರ್ಕಾರದ ಆಡಳಿತದ ಬಗ್ಗೆ ಜನರ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಎಸ್‌ಐಆರ್, ಇವಿಎಂ ಬಳಕೆ ಹಾಗೂ ನ್ಯಾಯಾಲಯಗಳ ತೀರ್ಪುಗಳಿಗೆ ಸಂಬಂಧಿಸಿದ ವಿಚಾರಗಳನ್ನೂ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ರಾಜಕೀಯ ವಿವಾದಗಳಲ್ಲಿ ತೊಡಗಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕೆ. ಎನ್. ಜಗದೀಶ್, ಬಿಜೆಪಿ ಜಿಲ್ಲಾ ವಕ್ತಾರ ಎಸ್ .ಎಸ್. ಜ್ಯೋತಿಪ್ರಕಾಶ, ಹರಿಕೃಷ್ಣ, ಬಳ್ಳೇಕೆರೆ ಸಂತೋಷ್,ಮಾಲತೇಶ್, ರಾಮುಕೋಹಳ್ಳಿ, ಹರೀಶ್, ಸಿದ್ದಲಿಂಗಪ್ಪ, ಪೆರಿಮಾಳ್, ಲಿಂಗರಾಜ್, ಚಂದ್ರಶೇಖರ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments