Homeಜಿಲ್ಲೆನಾನು ದೇಹವಾದರೆ, ಬಸವಣ್ಣನೇ ಪ್ರಾಣವಾದನು ಎಂದಿದ್ದ ಅಪ್ಪಣ್ಣ : ಕೆ.ವೀರೇಶ್

ನಾನು ದೇಹವಾದರೆ, ಬಸವಣ್ಣನೇ ಪ್ರಾಣವಾದನು ಎಂದಿದ್ದ ಅಪ್ಪಣ್ಣ : ಕೆ.ವೀರೇಶ್

Spread the love

ಶಿವಮೊಗ್ಗ,ಜು.10: 12 ನೇ ಶತಮಾನದಲ್ಲಿ ಸಮಾಜದಲ್ಲಿನ ಅಂಕುಡೊಂಕುಗಳು, ಕಠೋರ ಜಾತಿ ಪದ್ದತಿ ಮತ್ತು ಮೌಢ್ಯತೆಯನ್ನು ತೊಡೆದುಹಾಕಲು ಹಾಗೂ ಕಾಯಕ ಸಂಸ್ಕೃತಿಯನ್ನು ಬಿತ್ತಲು ಹಡಪದ ಅಪ್ಪಣ್ಣ ಸೇರಿದಂತೆ ಬಸವಾದಿ ಶರಣರು ತಮ್ಮ ಜೀವನ ಮುಡಿಪಾಗಿಟ್ಟರು ಎಂದು ಪ್ರಿಯದರ್ಶಿನಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ವೀರೇಶ್ ಸ್ಮರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಮಾತನಾಡಿದರು.

ಮಾಡುವ ಕಾಯಕದಲ್ಲಿ ಮೇಲೂ ಅಲ್ಲ. ಕೀಳೂ ಅಲ್ಲ. ತನು, ಮನ, ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕವೆಂದು ಶಿವಶರಣ ಶ್ರೀ ಹಡದಪ್ಪ ಅಪ್ಪಣ್ಣ 12 ನೇ ಶತಮಾನದಲ್ಲಿ ಇಡೀ ಸಮಾಜಕ್ಕೆ ತಿಳಿಸಿದರು.
ಅಪ್ಪಣ್ಣನವರು ಅಪಾರ ಭಕ್ತಿ, ಜ್ಞಾನವುಳ್ಳವರಾಗಿದ್ದರು. ಕಾಯಕ ಜೀವಿಗಳಾಗಿ ಕ್ಷೌರ ವೃತಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಕಾಯಕ ನಿಷ್ಠರಾದ ಶರಣ ಹಡಪದ ಅಪ್ಪಣ್ಣನವರು ಲಿಂಗಮ್ಮನವರನ್ನು ವಿವಾಹವಾದರು. ಶರಣೆ ಲಿಂಗಮ್ಮನವರು ಕೂಡ ಅಪಾರವಾದ ಜ್ಞಾನವನ್ನು ಹೊಂದಿದವರಾಗಿದ್ದರು. ಇವರಿಬ್ಬರೂ ಆಗಿನ ಕಾಲದ ಜಾತಿ ವ್ಯವಸ್ಥೆಯಲ್ಲಿ ಭೌತಿಕವಾಗಿ ಹಿಂದುಳಿದವರಾಗಿದ್ದು ಮಾನಸಿಕವಾಗಿ ಅತ್ಯಂತ ಸದೃಢ ಮನಸ್ಸಿನವರಾಗಿ ಮೇರು ಜ್ಞಾನವನ್ನು ಹೊಂದಿದ್ದ ಶರಣ ದಂಪತಿಗಳಾಗಿದ್ದರು.
12 ನೇ ಶತಮಾನದಲ್ಲಿ ಬಸವಣ್ಣನವರ ಬಗ್ಗೆ ತಿಳಿದುಕೊಂಡ ಈ ದಂಪತಿಗಳಿಬ್ಬರು ಸಂಗಮಕ್ಕೆ ಬಂದು ಬಸವಣ್ಣನವರನ್ನು ಕಂಡರು. ನಂತರ ಬಸವಣ್ಣನವರೊಡನೆ ಕಲ್ಯಾಣದಲ್ಲೇ ನೆಲೆಸಿದ ಅವರು ಶರಣರು ಕಲ್ಯಾಣಕ್ಕೆ ಬಂದರೆ ಜೀವ ಬಂದಂತೆ ಎಂದು ನಂಬಿದ್ದರು.

ಅಪ್ಪಣ್ಣನವರಿಗೆ ಬಸವಣ್ಣನೇ ಗುರುವಾದನು, ಲಿಂಗವಾದನು, ಜಂಗಮವಾದನು, ಪ್ರಸಾದವಾದನು. ನಾನು ದೇಹವಾದರೆ, ಬಸವಣ್ಣನೇ ಪ್ರಾಣವಾದನು ಎಂದು ಬಸವಪ್ರಿಯರಾದರು. ಕ್ಷೌರಿಕರಾದ ಹಡಪದ ಅಪ್ಪಣ್ಣನವರ ಮುಖ ನೋಡಿದರೆ ಅಪಶಕುನ ಎಂದು ಕಲ್ಯಾಣದ ಮೇಲ್ಜಾತಿಗಳು ಬೊಬ್ಬಿಡುತ್ತಿದ್ದರು. ಹೀಗಿರುವಾಗ ಬಸವಣ್ಣನವರು ಅಪ್ಪಣ್ಣನವರು ಆಪ್ತಕಾರ್ಯದರ್ಶಿ ಹಾಗೂ ತಮ್ಮ ಜೀವದ ಒಡನಾಡಿಯಾಗಿ ಮಾಡಿಕೊಂಡರು. ಆ ಮೂಲಕ ಮೇಲ್ಜಾತಿಯವರ ಮೌಢ್ಯತೆಯನ್ನು ಬಸವಣ್ಣ ಧಿಕ್ಕರಿಸಿ ತಮ್ಮನ್ನು ಭೇಟಿಯಾಗಲು ಬರುವ ಯಾರೇ ಆಗಲಿ, ಅವರು ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಿಯೇ ಬರಬೇಕೇಂಬ ನಿಯಮ ಮಾಡಿದರು. ಅದರಂತೆ ಎಲ್ಲರೂ ಅಪ್ಪಣ್ಣನವರನ್ನು ಭೇಟಿಯಾಗಿ ಬರುತ್ತಿದ್ದರು. ಜಾತೀಯತೆ ಮೂಢನಂಬಿಕೆ ರಹಿತ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಹಡಪದ ಅಪ್ಪಣ್ಣನವರು ಸದಾ ಬಸವಣ್ಣನವರ ಬಲಗೈ ಬಂಟರಾಗಿದ್ದರು ಎಂದರು.

ಪ್ರತಿ ಕ್ಷಣದಲ್ಲೂ ಬಸವಣ್ಣನವರಿಗೆ ಪ್ರತಿಯೊಂದು ಮಾಹಿತಿಯನ್ನೂ ಮೊದಲು ತಿಳಿಸುತ್ತಿದ್ದರು. ಕಲ್ಯಾಣಕ್ಕೆ ಬರುವ ಶರಣರ ಸಮೂಹಕ್ಕೆ ತಾಂಬೂಲ ಕೊಟ್ಟು ಸ್ವಾಗತಿಸುತ್ತಿದ್ದರು. ಕ್ಷಣವಾದರೂ ಬಸವಣ್ಣನವರನ್ನು ಬಿಟ್ಟಿರಲಾರದ ಜೀವ ಅಪ್ಪಣ್ಣನವರದ್ದು.
ಸದಾ ಬಸವಣ್ಣನವರ ಆಪ್ತ ಒಡನಾಡಿಗಳಾಗಿ ಅನುದಿನ ಅನುಕ್ಷಣವೂ ಅಣ್ಣನವರ ದಿವ್ಯ ಸಾನಿಧ್ಯದಲ್ಲಿ ಇರುತ್ತಿದ್ದ ಅಪ್ಪಣ್ಣನವರು ಎಲ್ಲಾ ಶರಣರ ಮೆಚ್ಚುಗೆಗೆ ಪಾತ್ರರಾಗಿ ನಿಜಸುಖಿ ಅಪ್ಪಣ್ಣ ಎಂಬ ಬಿರುದನ್ನು ಪಡೆದರು. ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರೂ ಕೂಡ ಮಹಾಜ್ಞಾನಿಗಳಾಗಿದ್ದರು. ಇವರು ನಿಜಮುಕ್ತ ಲಿಂಗಮ್ಮನವರು ಎಂದೇ ಪ್ರಖ್ಯಾತಿ ಪಡೆದರು ಎಂದು ತಿಳಿಸಿದರು.

ಸೂಡಾ ಅಧ್ಯಕ್ಷರಾದ ಹೆಚ್.ಎಸ್. ಸುಂದರೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್ .ಚಂದ್ರಭೂಪಾಲ, ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಎಂ.ಮಲ್ಲೇಶಪ್ಪ, ತಾಲ್ಲೂಕು ಅಧ್ಯಕ್ಷರಾದ ಎಂ.ಷಣ್ಮುಖಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಉಮೇಶ್ ಹೆಚ್, ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments