ದಿವಂಗತ ಬಂಗಾರಪ್ಪ ಅಭಿವೃಧ್ದಿ ಕೆಲಸ ಮಾಡಿದ್ದಾರೆ, ಅವರ ಮಗನಾಗಿ ನೀನೇನು ಮಾಡಿದ್ದೀಯಪ್ಪ?ಸೊರಬದಲ್ಲಿ 5 ಇಸ್ಪೀಟ್ ಕ್ಲಬ್ ತೆರೆದಿರೋದನ್ನ ಮೊದಲು ಬಂದ್ ಮಾಡ್ಸು
*ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಮತ್ತು ಬಿಜೆಪಿ ಮುಖಂಡರ ನಡುವಿನ ರಾಜಕೀಯ ಜಟಾಪಟಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.
ಜುಲೈ 21 ರಂದು ಸಂಸದ ಬಿ.ವೈ ರಾಘವೇಂದ್ರ ವಿರುದ್ದ ಹರಿಹಾಯ್ದಿದ್ದ ಜಿಲ್ಲಾಸಚಿವ ಮಧುಬಂಗಾರಪ್ಪ ಅವರ ವಿರುದ್ದ ಇಂದು ಬಿಜೆಪಿ ಮಾಜಿ ಮಂತ್ರಿ ಹರತಾಳು ಹಾಲಪ್ಪ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಪತ್ರಿಕಾಗೋಷ್ಟಿ ನಡೆಸಿದ ಹರತಾಳು ಹಾಲಪ್ಪ ’ಸಂಸದ ಬಿ.ವೈ ರಾಘವೇಂದ್ರ ಅವರು ಸಿಗಂದೂರು ಸೇತುವೆ , ವಿಮಾನ ನಿಲ್ದಾಣ , ಅಲ್ಲದೆ ಇನ್ನೂ ನಾಲ್ಕು ಸೇತುವೆಗಳನ್ನು ಮಾಡಿಸುತ್ತಿದ್ದಾರೆ. ಜಿಲ್ಲಾ ಮಂತ್ರಿಯಾಗಿ ನಿನ್ನ ಕೊಡುಗೆ ಏನು?, ದಿವಂಗತ ಬಂಗಾರಪ್ಪನವರು ಅಭಿವೃದ್ದಿ ಕೆಲಸ ಮಾಡಿದ್ದು ನಿಜ, ನೀನೇನು ಅಭಿವೃದ್ದಿ ಮಾಡಿದ್ದೀಯಪ್ಪ, ಅದನ್ನು ಮೊದಲು ಬಹಿರಂಗ ಪಡಿಸು’ ಎಂದು ಸವಾಲು ಹಾಕಿದರು.
ಮಧು ಬಂಗಾರಪ್ಪ ತಮ್ಮ ಅಸಂಬದ್ಧ ಪ್ರಲಾಪಗಳನ್ನು ಬದಿಗೆ ಇರಿಸಿ ಜಿಲ್ಲೆಯ ಅಭಿವೃದ್ಧಿ ಮತ್ತು ರೈತರ ರಕ್ಷಣೆ ಕಡೆಗೆ ಗಮನ ಕೊಡಲಿ. ಒಬ್ಬ ಪ್ರಬುದ್ಧ ರಾಜಕಾರಣಿಯ ಮಗನಾಗಿ ಅವರ ಮಾತು ಅಸಹ್ಯ ಹುಟ್ಟಿಸುತ್ತಿದೆ. ತಮಗೆ ಪ್ರಬುದ್ಧತೆ ಇಲ್ಲ ಎಂದು ಅವರೇ ತೋರಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗ ವಿದ್ಯಾವಂತರ ಜಿಲ್ಲೆ. ಜಿಲ್ಲೆಯ ಆಡಳಿತ ಮತ್ತು ಅಧಿಕಾರಿಗಳ ಮೇಲೆ ಉಸ್ತುವಾರಿ ಸಚಿವರಿಗೆ ಹಿಡಿತ ಇರಬೇಕಿತ್ತು. ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಡೆಗೆ ಗಮನ ಕೊಡಬೇಕಾಗಿತ್ತು. ರೈತ ಹೋರಾಟ, ಸಮಾಜವಾದಿ ಚಳವಳಿ, ಕಾಗೋಡು ಚಳವಳಿ, ದಲಿತ ಸಂಘರ್ಷ ಸಮಿತಿ ಹುಟ್ಟು ಜೊತೆಗೆ ಬಿಜೆಪಿ ಕೂಡ ಪ್ರಬಲವಾಗಿರುವ ಜಿಲ್ಲೆಯಾಗಿದೆ. ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿರುವ ಜಿಲ್ಲೆ ಇದು. eನಪೀಠ ಪುರಸ್ಕೃತರ ಜಿಲ್ಲೆಯೂ ಆಗಿದೆ. ಅಂತಹ ಜಿಲ್ಲೆಯಲ್ಲಿ ಇಂತಹ ಉಸ್ತುವಾರಿ ಸಚಿವರೇ ಎಂದು ಹರತಾಳು ಹಾಲಪ್ಪ ಲೇವಡಿ ಮಾಡಿದರು.
ಚುನಾವಣೆಯಲ್ಲಿ ಸೋತಿದ್ದಾಗ ಎರಡು ಬಾರಿ ರೈತರ ಪರ ಪಾದಯಾತ್ರೆ ಮಾಡಿದ್ದ ಮಧುಬಂಗಾರಪ್ಪ ಈಗ ರೈತರ ರಕ್ಷಣೆಗೆ ಬರುತ್ತಿಲ್ಲ. ಅರಣ್ಯ ಇಲಾಖೆಯವರು ಇತ್ತೀಚೆಗೆ ಶಿವಮೊಗ್ಗ ತಾಲೂಕಿನ ಚಿತ್ರಶೆಟ್ಟಿಹಳ್ಳಿ ಗ್ರಾಮದ ರಾಮಪ್ಪ ಅವರ 350 ಅಡಿಕೆ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಮುಳುಗಡೆ ರೈತರಿಗೆ ರಕ್ಷಣೆ ಇಲ್ಲವಾಗಿದೆ. ಸಾಗರ ತಾಲೂಕು ಪಡವಗೋಡು ಗ್ರಾಪಂ ವ್ಯಾಪ್ತಿಯ ಕೆರೋಡಿ ಗ್ರಾಮದಲ್ಲಿ ಶುಂಠಿ ಬೆಳೆಯನ್ನು ಕಿತ್ತು ಹಾಕಿದ್ದಾರೆ. ಹೊಸನಗರ ತಾಲೂಕಿನ ವಸವೆ ಗ್ರಾಮದಲ್ಲಿ ಬರುವ ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ಇತ್ತೀಚೆಗಷ್ಟೆ ಏಳುಜನ ರೈತರನ್ನು 15 ದಿನಗಳ ಕಾಲ ಜೈಲಿನಲ್ಲಿ ಇರಿಸಿದ್ದರು. ಮೊದಲು ರೈತರ ರಕ್ಷಣೆಗೆ ಮಧು ಬಂಗಾರಪ್ಪ ಮುಂದಾಗಲಿ ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗನಾಗಿ ಸೊರಬದಲ್ಲಿ ಐದು ಇಸ್ಪೀಟ್ ಕ್ಲಬ್‌ಗಳಿಗೆ ಅವಕಾಶ ಕೊಟ್ಟಿದ್ದಾರೆ. ಬಂಗಾರಪ್ಪ ಅವರು ಏಳು ಬಾರಿ ಶಾಸಕರಾಗಿದ್ದರೂ ಇಂತಹ ಕೆಲಸ ಮಾಡಿರಲಿಲ್ಲ. ೪೫ ಸಾವಿರ ಮತಗಳಿಂದ ಗೆಲ್ಲಿಸಿರುವುದಕ್ಕಾದರೂ ಅವುಗಳನ್ನು ಬಂದ್ ಮಾಡಿಸಿ ಎಂದು ಮಧುಬಂಗಾರಪ್ಪ ರಿಗೆ ತಾಕೀತು ಮಾಡಿದ ಹರತಾಳು ಹಾಲಪ್ಪ ನನ್ನ ಇತಿಹಾಸ ಬಿಚ್ಚಿಡುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ. ಅವರದ್ದೂ ಸ್ವಲ್ಪ ಇತಿಹಾಸ ನಮಗೆಲ್ಲಾ ಗೊತ್ತಿದೆ. ಅದನ್ನು ಬಿಚ್ಚಿಡಲೂ ಗೊತ್ತಿದೆ. ದೊಡ್ಡವರ ಇತಿಹಾಸವನ್ನು ಅವರು ಅಧ್ಯಯನ ಮಾಡಲಿ. ಅಸಂಬದ್ಧ ಮಾತುಗಳನ್ನು ಬಿಡಲಿ ಎಂದರು.
