ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.25
ದೇಶದ ವಿದ್ಯಾರ್ಥಿ ಮತ್ತು ಯುವಜನರ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಸಂದ ವಿಜಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಶನಿವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ‘ಎಕ್ಸ್’ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗಮನಿಸಿ: ಪೋಕ್ಸೋ- ಎಫ್‌ಐಆರ್‌ನಲ್ಲಿನ ಹೇಳಿಕೆ ನ್ಯಾಯಾಲಯದಲ್ಲಿ ಬದಲಾವಣೆ : ಶಿಕ್ಷೆ ಅತ್ಯಲ್ಪಕ್ಕೆ
ಇದು ದೇಶದ ಎಚ್ಚೆತ್ತ ವಿದ್ಯಾರ್ಥಿ-ಯುವಜನರ ಗೆಲುವಾಗಿದೆ. ಅವರೆಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿಜಯವಾಗಿದೆ. ಬಿಸಿಲು-ಮಳೆ-ಹಸಿವು-ಆರೋಗ್ಯವನ್ನು ಲೆಕ್ಕಿಸದೆ ದೆಹಲಿಯಲ್ಲಿ ಬೀಡುಬಿಟ್ಟು ಪೊಲೀಸರ ದೌರ್ಜನ್ಯದಿಂದಲೂ ಪ್ರಚೋದನೆಗೆ ಒಳಗಾಗದೆ ಶಾಂತಿಯುತ ಹೋರಾಟವನ್ನು ನಡೆಸಿದ ಲಕ್ಷಾಂತರ ವಿದ್ಯಾರ್ಥಿ-ಯುವಜನರು ದೇಶದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕಾಲದ ಕರೆಗೆ ಓಗೊಟ್ಟು ಒಂದು ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದೆ. ಸಕಾಲದಲ್ಲಿ ದೃಢಚಿತ್ತದ ನಾಯಕತ್ವ ನೀಡಿ ಹೋರಾಟವನ್ನು ಮುನ್ನಡೆಸಿದ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
