ಶಿವಮೊಗ್ಗ ಜಿಲ್ಲೆಯಲ್ಲಿ 7 ತಾಲ್ಲೂಗಳಿಗೆ ಹೊಲಿಸಿದರೆ ಪೋಕ್ಸೋ ಪ್ರಕರಣದಲ್ಲಿ ಶಿವಮೊಗ್ಗ ನಗರದ ಪ್ರಕರಣಗಳು ಅತ್ಯಧಿಕವಾಗಿದೆ. ಆದರೆ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವು ನೆಲ ಕುಸಿದಿದ್ದು, ಬಹುತೇಕ ಎಫ್‌ಐಆರ್‌ನಲ್ಲಿ ದಾಖಲಾದ ಹೇಳಿಕೆಗಳು ನ್ಯಾಯಾಲಯದ ಮುಂದೆ ಬದಲಾಗುತ್ತಿರುವುದು ಇದಕ್ಕೆ ಬಹುಮುಖ್ಯ ಕಾರಣ ಎಂಬುದು ಬೆಳಕಿಗೆ ಬಂದಿದೆ.
ಪೊಲೀಸ್ ಇಲಾಖೆ ಮಾಹಿತಿ ಹಾಗೂ ಅಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣದ ಮೇರೆಗೆ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರ, ಭದ್ರಾವತಿ, ಸಾಗರ, ಶಿಕಾರಿಪುರದಲ್ಲಿ ಈ ಪ್ರಕರಣಗಳ ಪ್ರಮಾಣ ಹೆಚ್ಚಿನದಾಗಿದೆ. ಆದರೆ ಶಿಕ್ಷೆಯನ್ನು ನೀಡಿ ನೊಂದ ಮಕ್ಕಳಿಗೆ ನ್ಯಾಯನ ಕೊಡಿಸಲು ಮುಂದಾಗುತ್ತಿರುವ ನ್ಯಾಯಾಂಗ ಮತ್ತು ಕಾರ್ಯಾಂಗಕ್ಕೆ ಈ ಕಾರಣಗಳು ಬಹುದೊಡ್ಡ ಸವಾಲಾಗಿದೆ.

2024 ರಿಂದ 2026 ರವರೆಗೆ ಜಿಲ್ಲೆಯಲ್ಲಿ ಒಟ್ಟು 540 ಪೋಕ್ಸೋ ಪ್ರಕರಣ ದಾಖಲಾಗಿದೆ. 2024 ರಲ್ಲಿ 203, 2025 ರಲ್ಲಿ 243, 2026 ರಲ್ಲಿ 94 ವರದಿಗಳಾಗಿವೆ. ಅದರಲ್ಲಿ 2024 ರಲ್ಲಿ 80, 2025 ರಲ್ಲಿ 204, 2026 ರಲ್ಲಿ 32 ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿದರೆ, 2024 ರಲ್ಲಿ 4, 2025 ರಲ್ಲಿ 1 ಹಾಗೂ 2026 ರಲ್ಲಿ 4 ಪ್ರಕರಣಗಳಿಗೆ ಶಿಕ್ಷೆ ನೀಡಲಾಗಿದೆ.
ಶಿವಮೊಗ್ಗ ನಗರ, ಭದ್ರಾವತಿ, ಸಾಗರ, ಶಿಕಾರಿಪುರದ ಪ್ರಕರಣದ ವರದಿ ಮತ್ತು ವಿಚಾರಣೆಯಲ್ಲಿ 2024 ಮತ್ತು 2025 ರಲ್ಲಿ ಏರಿಕೆ ಕಂಡಿದೆ. ಇನ್ನೂ 2026 ರಲ್ಲಿ ಪ್ರಕರಣದ ವರದಿ ಮತ್ತು ವಿಚಾರಣೆ ಪ್ರಮಾಣ ಕಡಿಮೆ ಇದೆ. ಆದರೆ ಶಿಕ್ಷೆ ಮಾತ್ರ ಈ ಮೂರು ವರ್ಷಗಳಲ್ಲಿ ವರದಿ ಮತ್ತು ವಿಚಾರಣೆಗಳನ್ನು ಸಮಾನಾಂತರಿಸಿ ನೋಡಿದರೆ ಅಲ್ಪ ಪ್ರಮಾಣಕ್ಕೆ ಕುಸಿದಿದೆ.
ಶಿವಮೊಗ್ಗ ನಗರ: 2024ರ ವರದಿ-75, ವಿಚಾರಣೆ-29, ಶಿಕ್ಷೆ-0, 2025 ರ ವರದಿ-94, ವಿಚಾರಣೆ-77, ಶಿಕ್ಷೆ-0, 2026 ರ ವರದಿ-41, ವಿಚಾರಣೆ-17, ಶಿಕ್ಷೆ-0,
ಭದ್ರಾವತಿ: 2024ರ ವರದಿ-47, ವಿಚಾರಣೆ-21, ಶಿಕ್ಷೆ-2, 2025ರ ವರದಿ-45, ವಿಚಾರಣೆ-41, ಶಿಕ್ಷೆ-0, 2026 ರ ವರದಿ-27, ವಿಚಾರಣೆ-7, ಶಿಕ್ಷೆ-0
ಸಾಗರ: 2024ರ ವರದಿ-16, ವಿಚಾರಣೆ-7, ಶಿಕ್ಷೆ-0, 2025ರ ವರದಿ-27, ವಿಚಾರಣೆ-26, ಶಿಕ್ಷೆ-1, 2026ರ ವರದಿ-6, ವಿಚಾರಣೆ-0, ಶಿಕ್ಷೆ-4,
ಶಿಕಾರಿಪುರ: 2024ರ ವರದಿ-38, ವಿಚಾರಣೆ-13, ಶಿಕ್ಷೆ-2, 2025ರ ವರದಿ-53, ವಿಚಾರಣೆ-42, ಶಿಕ್ಷೆ-0, 2026ರ ವರದಿ-12, ವಿಚಾರಣೆ-7, ಶಿಕ್ಷೆ-0 ಪ್ರಮಾಣದಲ್ಲಿದೆ.
ನ್ಯಾಯಾಲಯದ ಮುಂದೆ ಹೇಳಿಕೆ ಬದಲು:
ಬಹುತೇಕ ಪ್ರಕರಣಗಳು ವಿಚಾರಣೆಯಲ್ಲಿರುತ್ತದೆ ಇದರಿಂದ ಪ್ರಕರಣದ ತೀರ್ಪು ಹೊರ ಬೀಳುವುದು ತಡವಾಗುತ್ತದೆ. ಹಾಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಆದರೆ ಆತಂಕಕಾರಿ ಸಂಗತಿ ಎಂದರೆ ನೊಂದ ಪಾಲನೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳು ಪ್ರಕರಣದ ಎಫ್‌ಐಆರ್ ದಾಖಲಾಗುವಾಗ ನೀಡಿರುವ ಹೇಳಿಕೆಯನ್ನು ನ್ಯಾಯಾಂಗದ ಮುಂದೆ ಹಾಜರು ಪಡಿಸಿದಾಗ ಬದಲಾಗುತ್ತದೆ. ಇದರಿಂದ ಪ್ರಕರಣದ ಆರೋಪಿಗೆ ಶಿಕ್ಷೆ ಆಗುವುದು ತಪ್ಪುತ್ತಿದೆ.

ಕೆಲವೊಮ್ಮೆ ಪೋಕ್ಸೋ ಪ್ರಕರಣದಲ್ಲಿ ಆರೋಪಿಯ ಪರವಾದ ಮುಖಂಡರು, ಪೋಷಕರು ನೊಂದ ಮಕ್ಕಳ ಕುಟುಂಬದ ಮೇಲೆ ಒತ್ತಡ ಹಾಕುವುದು, ಆಮಿಷ ನೀಡುವುದು ಅಥವಾ ರಾಜಿಯಾಗುವ ಸಾಧ್ಯತೆ ಇದೆ. ಇದರಿಂದಲೂ ಶಿಕ್ಷೆ ತಪ್ಪುತ್ತಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜ್‌ವುದ್ದೀನ್ ಖಾನ್ ತಿಳಿಸಿದರು.
ಜಿಲ್ಲೆಯಲ್ಲಿ ಬಾಲ ಗರ್ಭಿಣಿ ಹಾಗೂ ಬಾಲ್ಯ ವಿವಾಹವೂ ಇಂತಹ ಸ್ಥಿತಿಯಲ್ಲೆ ಇದೆ. ಏ 2025 ರಿಂದ ಮಾ.2026 ರವರೆಗೆ ಜಿಲ್ಲೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದಲ್ಲಿ ಅತೀ ಹೆಚ್ಚು ಹೆಣ್ಣು ಮಕ್ಕಳ ಒಳಗಾಗಿರುವುದು ಜಿಲ್ಲಾ ವರದಿಯ ಮೂಲಕ ತಿಳಿದು ಬಂದಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಾಹಿತಿ ಪ್ರಕಾರ ಪೋಕ್ಸೋ ಪ್ರಕರಣದಲ್ಲಿ 2 ಗಂಡು ಮಕ್ಕಳು ಹಾಗೂ 267 ಹೆಣ್ಣು ಒಳಗಾಗಿದ್ದಾರೆ. ಬಾಲ್ಯ ವಿವಾಹ ಪ್ರಕರಣ ಸಂಬಂಧಪಟ್ಟಂತೆ ಏ.2025 ರಿಂದ ಮಾ.2026 ಅಂಕಿ ಅಂಶಗಳ ಪ್ರಕಾರ 69 ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ನಡೆದಿದ್ದು, ಅದೇ ಸಮಾನಾಂತರ ವರ್ಷದಲ್ಲಿ 59 ಹೆಣ್ಣು ಮಕ್ಕಳು ಹಾಗೂ 7 ಗಂಡು ಮಕ್ಕಳ ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಇನ್ನು ಬಾಲ ಗರ್ಭಿಣಿಯ ಪ್ರಕರಣದಲ್ಲಿ ಏ. 2025 ರಿಂದ ಮಾ.2026 ರವರೆಗೆ 55 ಪ್ರಕರಣಗಳು ದಾಖಲಾಗಿದೆ.
ತಡೆಗಟ್ಟಲು ವಿಷನ್ ಸುರಕ್ಷಾ:
ಶಿವಮೊಗ್ಗ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣ ತಡೆಗಟ್ಟಲು ಮಿಷನ್ ಸುರಕ್ಷಾ ಅಭಿಯಾನ ಆರಂಭ ಮಾಡಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯತ್‌ನಲ್ಲಿ 18 ವರ್ಷದ ಗಂಡು ಮತ್ತು ಹೆಣ್ಣು ಮಕ್ಕಳ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದ್ದು, ಶಾಲೆ ಬಿಟ್ಟಿರುವ ಮಕ್ಕಳನ್ನು ಈ ಅಭಿಯಾನದ ಮೂಲಕ ಶಾಲೆಗೆ ಮರಳಿ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ.

ಈ ಅಭಿಯಾನದಡಿ ಗ್ರಾ. ಪಂ ಪಿಡಿಓಗಳಿಂದ ಪ್ರತಿ ತಿಂಗಳು ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಅಂಗನವಾಡಿ ಕೇಂದ್ರ ದತ್ತು ಪಡೆದುಕೊಂಡು ಅವರನ್ನು ನೋಡಿಕೊಳ್ಳಲಾಗುತ್ತದೆ. ಬಿಇಓಗಳು ಶಾಲೆ ಬಿಟ್ಟ ಮಕ್ಕಳ ಮನೆಗೆ ಹೋಗಿ ಮತ್ತೆ ಶಾಲೆಗೆ ಬರುವಂತೆ ಮನವೊಲಿಸಿ ಕರೆ ತರಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಶಿವಮೊಗ್ಗ ಟೆಲೆಕ್ಸ್ ಗೆ ಮಾಹಿತಿ ನೀಡಿದರು.
ಪೋಕ್ಸೋ ಶಿಕ್ಷೆ ಪ್ರಮಾಣ ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಕ್ಕೂ ಇಂತಹ ಪರಿಸ್ಥಿತಿ ಒದಗಿರಬಹುದು. ಯಾಕೆಂದರೆ ರಾಜ್ಯ ಗೃಹ ಇಲಾಖೆ ಅಧಿಕೃತ ಅಂಕಿ ಅಂಶಗಳು ಒಳಗೊಂಡಂತೆ 2025 ರ ಜನವರಿ ಮತ್ತು ಜುಲೈ ನಡುವಿನ ದತ್ತಾಂಶವನ್ನು ಅಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಿಡುಗಡೆ ಮಾಡಿದ್ದರು. ರಾಜ್ಯದಲ್ಲಿ 2025ರ 2,544 ಪ್ರಕರಣದಲ್ಲಿ 1,927 ಪ್ರಕರಣಗಳು ತೀರ್ಪು ನೀಡಲಾಗಿದ್ದು, 1,556 ಪ್ರಕರಣಗಳು ಬಾಕಿ ಉಳಿದಿವೆ ಎಂದು ವರದಿಯಲ್ಲಿ ತಿಳಿಸಿದ್ದರು.
- ನೊಂದ ಮಕ್ಕಳ ಪೋಷಕರಿಗೆ ಪೋಕ್ಸೋ ಪ್ರಕರಣ ಸಂಬಂಧಿಸಿದಂತೆ ಕಾನೂನಿನ ಅರಿವು ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಉಚಿತ ಕಾನೂನು ಸೇವೆಗಳ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ದೇಶದಲ್ಲಿ ಶಿವಮೊಗ್ಗದಲ್ಲೆ ಮೊದಲು ಆರಂಭವಾಗಿರುವುದು. ಇದರಿಂದ ಪೋಕ್ಸೋ ಪ್ರಕರಣ ಕುರಿತು ವಕೀಲರಿಂದ ಉಚಿತ ಸೇವೆಯನ್ನು ಅಥವಾ ಪ್ರಕರಣ ಕುರಿತು ಅರಿವನ್ನು ಮೂಡಿಸಲಾಗುತ್ತದೆ
– ತಾಜ್‌ವುದ್ದಿನ್ ಖಾನ್, ಅಧ್ಯಕ್ಷ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ
- ಶೇ.80 ರಷ್ಟು ಪೋಕ್ಸೋ ಪ್ರಕರಣ ಸಂಭವಿಸುತ್ತಿರುವುದು ಸಾಮಾಜಿಕ ಜಾಲತಾಣಗಳಿಂದ. ಇನ್ಟಾಗ್ರಾಂ, ಫೇಸ್‌ಬುಕ್ ನಲ್ಲಿ ಮೇಸೆಜ್ ಮಾಡುವ ಮೂಲಕ ಅನ್ಯ ವ್ಯಕ್ತಿಯೊಂದಿಗೆ ಪರಿಚಯವಾಗಿ ತಂದೆ-ತಾಯಿ ತಿಳಿಯದಂತೆ ಈ ಪ್ರಕರಣಕ್ಕೆ ಒಳಾಗುತ್ತಿದ್ದಾರೆ.
-ಮಂಜುನಾಥ್. ಡಿಸಿಪಿಓ
