ಶಿವಮೊಗ್ಗ, ಆ.7: ಇತ್ತೀಚೆಗೆ ಎಡಪಂಥೀಯರೆಂದು ಹೇಳಿಕೊಳ್ಳುವವರು ಧರ್ಮಸ್ಥಳದ ಮೇಲಿನ ನಂಬಿಕೆಯನ್ನು ಭಂಗಗೊಳಿಸುವ ನಿಟ್ಟಿನಲ್ಲಿ ಕಮೆಂಟ್ ಮಾಡುತ್ತಿದ್ದಾರೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಗುರುವಾರ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳದಲ್ಲಿ ಶವ ಹೂತಿಟ್ಟ ವಿಚಾರದಲ್ಲಿ
ಈಗಾಗಲೇ ಸರ್ಕಾರ ಎಸ್ಐಟಿಯನ್ನು ರಚಿಸಿದೆ. ಅದನ್ನು ನಾವು ಸ್ವಾಗತಿಸುತ್ತಿದ್ದು, ಎಸ್ಐಟಿ ಕಾನೂನು ಬದ್ಧವಾದ ಎಲ್ಲಾ ತನಿಖೆಯನ್ನು ನಡೆಸಲಿ.
ಆದರೆ ಇತ್ತೀಚೆಗೆ ಎಡಪಂಥೀಯರೆಂದು ಹೇಳಿಕೊಳ್ಳುವವರು ಧರ್ಮಸ್ಥಳದ ಮೇಲಿನ ನಂಬಿಕೆಯನ್ನು ಭಂಗಗೊಳಿಸುವ ನಿಟ್ಟಿನಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಬೇರೆ ಯಾವುದೇ ಶ್ರದ್ಧಾ ಕೇಂದ್ರಗಳ ಮೇಲೆ ಈ ರೀತಿಯಾಗಿದ್ದರೆ ದೇಶದಲ್ಲಿ ಬೆಂಕಿ ಹತ್ತಿಕೊಳ್ಳುತ್ತಿತ್ತು. ಹಿಂದುಗಳ ಶ್ರದ್ಧಾ ಕೇಂದ್ರದ ವಿರುದ್ಧ ಏನು ಬೇಕಾದರೂ ಮಾಡಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಈ ಘಟನೆ ಬಹಳ ದೊಡ್ಡ ಅಶಾಂತಿಗೆ ಕಾರಣವಾಗುತ್ತಿದೆ.ಹಿಂದೂ ಒಬ್ಬ ಸಹನಾಶೀಲ ಎಲ್ಲವನ್ನು ವಿಶಾಲವಾಗಿ ಸ್ವೀಕರಿಸುತ್ತಾನೆ. ಆದರೆ ಅವನ ಮನಸ್ಸಿಗೆ ನೋವಾದಾಗ ಅದನ್ನು ತಡೆಯಲು ಹೋದರೆ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಜಾಗೃತವಾಗಬೇಕು.
ಈ ರೀತಿಯಲ್ಲಿ ಕಮೆಂಟ್ ಮಾಡುವವರನ್ನು ಸದೆ ಬಡಿಯಬೇಕು. ನಿನ್ನೆ ಧರ್ಮಸ್ಥಳದಲ್ಲಿ ನಡೆದ ಘಟನೆಯನ್ನು ನಾನು ಗಮನಿಸಿದ್ದೇನೆ.ಅದು ನಡೆಯಬಾರದಿತ್ತು. ಅಂತವರ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.
