ಅನ್ವೇಷಣೆಯ ನಡುವೆ ಧರ್ಮಸ್ಥಳ ಪ್ರಕರಣ: ಮಾಧ್ಯಮ ಮತ್ತು ಜವಾಬ್ದಾರಿ
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಚರ್ಚೆ, ಸಾರ್ವಜನಿಕ ತೀವ್ರತೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳ ಮಧ್ಯೆ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಾಮಾನ್ಯ ಪೊಲೀಸ್ ತನಿಖೆಯಿಂದ ಹೊರ ತೆಗೆದು ವಿಶೇಷ ತನಿಖಾ ತಂಡ ರಚಿಸಿದೆ. ಈ ತನಿಖೆ ಪ್ರಗತಿಯಲ್ಲಿರುವಾಗಲೇ ಕೆಲ ಮಾಧ್ಯಮ ಮತ್ತು ಯೂಟ್ಯೂಬ್ ಚಾನಲ್‌ಗಳು ಪ್ರಕರಣದ ಮೂಲವಿಷಯದ ಬಗ್ಗೆ ತೀರ್ಪು ಹಾಕುವ ಪ್ರವೃತ್ತಿ ಹಾಗೂ ಗೊಂದಲಗಳ ಸೃಷ್ಟಿ ತೀವ್ರ ಆತಂಕಕ್ಕೀಡು ಮಾಡುತ್ತಿದೆ.
ಹಾಗಿದ್ದರೂ, ಪ್ರಕರಣದ ಬಗ್ಗೆ ಅನಾಮಿಕ ದೂರುದಾರ ನೀಡುತ್ತಿರುವ ಮಾಹಿತಿ ತನಿಖೆಗೆ ದಿಕ್ಕು ನೀಡುತ್ತಿರುವುದು, ಮತ್ತೊಂದು ಕಡೆ ಮಾಧ್ಯಮ, ಸಾರ್ವಜನಿಕ ಮತ್ತು ಸಾಮಾಜಿಕ ಜವಾಬ್ದಾರಿ ಎಲ್ಲಿ ನಿಲ್ಲಬೇಕು ಎಂಬ ಪ್ರಶ್ನೆ ಮತ್ತೆ ಎತ್ತುತ್ತಿದೆ ಈ ಮಧ್ಯ ಪ್ರಿಡಂ ಆಫ್ ಸ್ಪೀಚ್ ಸಂವಿಧಾನದಲ್ಲಿ ನಮಗೆ ಪ್ರದತ್ತವಾಗಿರುವ ಅತ್ಯಂತ ಅಮೂಲ್ಯ ಅಧಿಕಾರ. ಆದರೆ ಈ ಹಕ್ಕು ಯಾವುದೇ ಹೊಣೆಗಾರಿಕೆಯಿಂದ ಮುಕ್ತವಲ್ಲ. ಮಾತು ಹಕ್ಕಾಗಿದೆ, ಆದರೆ ಮೌಲ್ಯಯುತ ಮಾತು, ಸಮರ್ಥನೀಯ ಚರ್ಚೆ, ಮತ್ತು ಸತ್ಯದ ಅಧ್ಯಯನ ಮಾತ್ರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲದು.
ಇತ್ತೀಚೆಗೆ ಕೆಲವು ಯೂಟ್ಯೂಬರ್‌ಗಳ ಮೇಲೆ ನಡೆದ ದೌರ್ಜನ್ಯಗಳು, ಅವರು ಮಾತನಾಡಿದ ವಿಷಯಕ್ಕೆ ಪ್ರತಿಕ್ರಿಯೆಯಾಗಿದೆ ಎಂಬ ಅಂಶಗಳು ಮಾಧ್ಯಮ ಸ್ವಾತಂತ್ರ್ಯದ ಆತಂಕಕಾರಿ ಹಿನ್ನೋಟವನ್ನು ತೋರಿಸುತ್ತವೆ. ಪ್ರಜ್ಞಾವಂತರಾದವರು ಕೇಳಬೇಕಾದ ಪ್ರಶ್ನೆ ವ್ಯಕ್ತಿಯ ಅಭಿಪ್ರಾಯಕ್ಕೆ ಹಿಂಸೆಯೇ ಉತ್ತರವೇ? ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಆತಂಕಕಾರಿ ಬೆಳವಣಿಗೆ.
ಸತ್ಯ ಹೇಳುವಲ್ಲಿ ಮಾಧ್ಯಮಗಳು ನಿರ್ಭಯರಾಗಬೇಕು. ಆದರೆ ಸತ್ಯದ ಹೆಸರಿನಲ್ಲಿ ಶಂಕೆಗಳನ್ನು ಬಿತ್ತುವುದು, ನಿರ್ಧಾರವಿಲ್ಲದ ತೀರ್ಪುಗಳನ್ನು ನೀಡುವುದು ಅಥವಾ ತಮ್ಮ ಸ್ವಂತ ಅಭಿಪ್ರಾಯವನ್ನು ಜನರ ಮೇಲೆ ಬಿತ್ತುವುದು ಪತ್ರಿಕೋದ್ಯಮದ ವಿರುದ್ಧವಲ್ಲವೇ? ಎಸ್ ಐ ಟಿ ತನಿಖೆಯಲ್ಲಿ ನಂಬಿಕೆ ಇರಲಿ, ಪ್ರಕ್ರಿಯೆಯ ಮೇಲೆ ವಿಶ್ವಾಸವಿರಲಿ ಸಾಮಾಜಿಕ ಮಾಧ್ಯಮದ ತೀವ್ರ ವಾದಗಳು ನ್ಯಾಯದ ಹಾದಿಗೆ ಅಡ್ಡಿಯಾಗಬಾರದು. ನ್ಯಾಯದ ಪ್ರಕ್ರಿಯೆಗಳ ಮೇಲೆ ನಂಬಿಕೆ ಇಡುವುದು ಪ್ರಜ್ಞಾವಂತ ನಾಗರಿಕನ ಕರ್ತವ್ಯ ಎಂದು ಭಾವಿಸಿ ಈ ಎಲ್ಲ ಬೆಳವಣಿಗೆಯಲ್ಲಿ ನಮ್ಮ ಮಾತುಗಳು, ಅಭಿಪ್ರಾಯಗಳು ಮತ್ತು ತೀರ್ಪುಗಳು ನ್ಯಾಯದ ಹಾದಿಗೆ ದಿಕ್ಕು ತೋರಿಸುವಂತಿರಬೇಕು, ದಿಕ್ಕು ತಪ್ಪಿಸುವಂತಲ್ಲ.
–ಶಿವಾನಂದ ಎನ್ ದೊಡ್ಡಮನಿ
ಸಹಾಯಕ ಪ್ರಾಧ್ಯಾಪಕ
