ಡೆವಿಲ್ ಗೆ ಜೈಲೇ ಗತಿ; ದರ್ಶನ್ ಗ್ಯಾಂಗ್ ಜಾಮೀನು ರದ್ದುಪಡಿಸಿದ ಸುಪ್ರಿಂಕೋರ್ಟು
ಜಸ್ಟೀಸ್ ಮಹದೇವನ್, ಪರ್ದಿವಾಲಾ ಮಾಡಿದ ಕಾನೂನು ಪಾಠ ಏನು ಗೊತ್ತಾ?
ನವದೆಹಲಿ: ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ಅವರಿಗೆ ದೊಡ್ಡ ಹಿನ್ನಡೆಯಾಗಿದ್ದು, ಚಿತ್ರದುರ್ಗ ಮೂಲದ ಅಭಿಮಾನಿ ರೇಣುಕಸ್ವಾಮಿಯನ್ನು ಅಪಹರಿಸಿ, ಭೀಕರ ಕೊಲೆ ಮಾಡಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದರ್ಶನ್ ಮತ್ತು ಆತನ ಆರು ಜನ ಸಹಚರರ ಜಾಮೀನನ್ನು ರದ್ದುಗೊಳಿಸಿದೆ.
ಹೈಕೋರ್ಟಿನಲ್ಲಿ ಜಾಮೀನು ಪಡೆದು 287 ದಿನಗಳ ಕಾಲ ಹೊರಗಿದ್ದ ದರ್ಶನ್ . ಪವಿತ್ರಗೌಡ ಮತ್ತು ಇತರೆ ಐದು ಜನ ಆರೋಪಿಗಳು ಮತ್ತೆ ಜೈಲು ಸೇರಬೇಕಾಗಿದೆ. ಈ ತಕ್ಷಣವೇ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಸುಪ್ರಿಂ ಕೋರ್ಟು ಕಟ್ಟಪ್ಪಣೆ ಹೊರಡಿಸಿದೆ.
ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಹಾಡು ಬಿಡುಗಡೆಯ ಸಂಭ್ರಮದಲ್ಲಿದ್ದ ದರ್ಶನ್ ಮತ್ತು ಆತನ ಅಭಿಮಾನಿಗಳಿಗೆ ಸುಪ್ರೀಮ್ ಕೋರ್ಟು ತೀರ್ಪು ಆಘಾತ ನೀಡಿದಂತಾಗಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಇಂದು ಬೆಳಿಗ್ಗೆ ಕರ್ನಾಟಕ ಹೈಕೋರ್ಟ್‌ನ ಹಿಂದಿನ ಜಾಮೀನು ತೀರ್ಪನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು.
“ನಾವು ಜಾಮೀನು ನೀಡುವುದರ ಜೊತೆಗೆ ರದ್ದತಿಯನ್ನೂ ಪರಿಗಣಿಸಿದ್ದೇವೆ ಮತ್ತು ಹೈಕೋರ್ಟ್ ಆದೇಶವು ಯಾಂತ್ರಿಕ ಅಧಿಕಾರ ಚಲಾಯಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಜಾಮೀನು ನೀಡುವುದು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು” ಎಂದು ನ್ಯಾಯಮೂರ್ತಿ ಮಹಾದೇವನ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಆದೇಶವನ್ನು ಬರೆದಿದ್ದಕ್ಕಾಗಿ ನ್ಯಾಯಾಧೀಶರನ್ನು ಶ್ಲಾಘಿಸಿದ ನ್ಯಾಯಮೂರ್ತಿ ಪಾರ್ದಿವಾಲ, “ನ್ಯಾಯಮೂರ್ತಿ ಮಹಾದೇವನ್ ಬಹಳ ವಿದ್ವತ್ಪೂರ್ಣ ತೀರ್ಪು ನೀಡಿದ್ದಾರೆ. ಇದು ವರ್ಣನಾತೀತ. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ” ಎಂದು ಹೇಳಿದರು.
ದರ್ಶನ್ ಮತ್ತು ಆತನ ಸಹಚರರಿಗೆ ಹೈಕೋರ್ಟ್‌ನ ಜಾಮೀನು ತೀರ್ಪು ನ್ಯಾಯಾಂಗ ಅಧಿಕಾರದ “ವಿಕೃತ” ಪ್ರಯೋಗವಾಗಿದೆ ಎಂದು ನ್ಯಾಯಮೂರ್ತಿ ಮಹಾದೇವನ್ ಪುನರುಚ್ಚರಿಸುವ ಮೂಲಕ ಹೈಕೋರ್ಟು ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನ ಜೈಲಿನಲ್ಲಿದ್ದಾಗ ದರ್ಶನ್‌ಗೆ ವಿಐಪಿ ಉಪಚಾರ ನೀಡುವುದರ ವಿರುದ್ಧ ವೂ ನ್ಯಾಯಪೀಠ ದಿಂದ ಎಚ್ಚರಿಕೆಯೂ ಬಂದಿತು. ಈ ಹಿಂದೆ ಬೆಂಗಳೂರಿನ ಜೈಲಿನಲ್ಲಿ ನಟನಿಗೆ ವಿಶೇಷ ಉಪಚಾರ ಪಡೆಯುತ್ತಿರುವುದನ್ನು ಚಿತ್ರೀಕರಿಸಲಾಗಿತ್ತು. ಒಂದು ಫೋಟೋದಲ್ಲಿ ಅವರು ಕುರ್ಚಿಯ ಮೇಲೆ ಕಾಫಿ ಕುಡಿಯುತ್ತಾ, ಸಿಗರೇಟ್ ಹಿಡಿದು ವಿಶ್ರಾಂತಿ ಪಡೆಯುತ್ತಿರುವುದನ್ನು ತೋರಿಸಲಾಗಿತ್ತು. “ಆರೋಪಿಗಳಿಗೆ five star ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಮಗೆ ತಿಳಿದ ದಿನ, ಮೊದಲ ಹೆಜ್ಜೆ ಸೂಪರಿಂಟೆಂಡೆಂಟ್ ಅವರನ್ನು ಇತರ ಎಲ್ಲ ಅಧಿಕಾರಿಗಳ ಜೊತೆಗೆ ಅಮಾನತುಗೊಳಿಸುವುದು” ಎಂದು ನ್ಯಾಯಮೂರ್ತಿ ಪಾರ್ದಿವಾಲ ಹೇಳಿದರು.
ರೇಣುಕಸ್ವಾಮಿ ಅವರ ತಂದೆ ಕಾಶಿನಾಥ ಶಿವನಗೌಡರು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ. ಇದು ನ್ಯಾಯಾಂಗದ ಮೇಲಿನ ಅವರ ನಂಬಿಕೆಯನ್ನು ಬಲಪಡಿಸಿದೆ ಎಂದು ಹೇಳಿದರು. “ಅವರು ಹೈಕೋರ್ಟ್‌ನಿಂದ ಜಾಮೀನು ಪಡೆದಾಗ, ನಾವು ಒತ್ತಡಕ್ಕೊಳಗಾಗಿದ್ದೆವು, ಆದರೆ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು ಮತ್ತು ಇಂದು ಆ ಜಾಮೀನು ರದ್ದಾಗಿದೆ. ಯಾವುದೇ ಅಪರಾಧಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಬಲವಾದ ಸಂದೇಶವನ್ನು ಸುಪ್ರೀಂ ಕೋರ್ಟ್ ರವಾನಿಸಿದೆ” ಎಂದು ಅವರು ಹೇಳಿದರು.
