ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಆಕ್ಷೇಪ: ಪ್ರತಾಪ್ ಸಿಂಹಗೆ ಮುಖಭಂಗ
“ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಲು ನಿಮಗೆ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕು ಏನಿದೆ ಹೇಳಿ? ಶಿಷ್ಟಾಚಾರ ಪಾಲಿಸುವುದು ಸರ್ಕಾರಕ್ಕೆ ಸೇರಿದ ವಿಚಾರ”: ನ್ಯಾಯಪೀಠ
ಹಿಂದೂ-ಮುಸ್ಲಿಮ್ ಎಂದು ಕಂದಕ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕು: ಅಡ್ವೋಕೇಟ್ ಜನರಲ್ ಪ್ರತಿಪಾದನೆ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ವನ್ನು ಸಾಹಿತಿ , ಬೂಕರ್ ಪ್ರಶಸ್ತಿ ಪುರಸ್ಕೃತ ಬಾನುಮುಷ್ತಾಕ್ ಅವರು ಉದ್ಘಾಟಿಸುವುದನ್ನು ಆಕ್ಷೇಪಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪಸಿಂಹ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಾಜ್ಯ ಹೈಕೋರ್ಟು ವಜಾಗೊಳಿಸಿದ್ದು, ಮೈಸೂರ ದಸರಾವನ್ನು ಬಾನು ಮುಸ್ತಾಕ್ ಅವರು ಉದ್ಘಾಟಿಸಲು ಇದ್ದ ಅನಿಶ್ಚಿತತೆ ದೂರಾಗಿದೆ.
ಮೈಸೂರು ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ನೇತೃತ್ವದ ವಿಭಾಗೀಯ ಪೀಠ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ.
“ಸರ್ಕಾರದ ಕಾರ್ಯಕ್ರಮದಲ್ಲಿ ಬೇರೆ ಧರ್ಮದ ವ್ಯಕ್ತಿ ಭಾಗವಹಿಸುವುದು ಸಾಂವಿಧಾನಿಕ ಹಕ್ಕು ಹೇಗೆ ಉಲ್ಲಂಘಿಸುತ್ತದೆ ಅಥವಾ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಹೇಗೆ ವಿರುದ್ಧ” ಎಂದು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.
ದಸರಾ ಮಹೋತ್ಸವದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಉದ್ಯಮಿ ಟಿ ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್ ಸೌಮ್ಯಾ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪೀಠ ವಿಚಾರಣೆ ನಡೆಸಿತು.
“ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮದಲ್ಲಿ ಭಿನ್ನ ಧರ್ಮದ ವ್ಯಕ್ತಿ ಭಾಗಿಯಾಗುವುದು ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕನ್ನು ಹೇಗೆ ಉಲ್ಲಂಘಿಸುತ್ತದೆ ಅಥವಾ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಹೇಗೆ ವಿರುದ್ಧ ಎಂದು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿರುವುದರಂದ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ವಿಸ್ತೃತ ಆದೇಶ ಆನಂತರ ಪ್ರಕಟಿಸಲಾಗುವುದು “ ಎಂದು ನ್ಯಾಯಾಪೀಠ ಇಂದು ಆದೇಶಿಸಿತು.
ಇಂದು ನ್ಯಾಯಪೀಠದ ಮುಂದೆ ನಡೆದ ಅರ್ಜಿಗಳ ವಿಚಾರಣೆ ವೇಳೆ ಪ್ರತಾಪ್ ಸಿಂಹ ಪರ ವಕೀಲ ಎಸ್ ಸುದರ್ಶನ್ ಅವರು “ಬಾನು ಮುಷ್ತಾಕ್ ಅವರು ಹಿಂದೂ ಸಂಪ್ರದಾಯ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ದಸರಾ ಉದ್ಘಾಟನೆಗೆ ಆಯ್ಕೆಯಾದವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದು ಶಿಷ್ಟಾಚಾರ. ಇದನ್ನು ಪಾಲಿಸಲಾಗಿಲ್ಲ. ಬಾನು ಮುಷ್ತಾಕ್ ಅವರಿಗೆ ಅರಿಶಿಣ-ಕುಂಕುಮದ ಮೇಲೆ ನಂಬಿಕೆ ಇಲ್ಲ. ದಸರಾ ಹಿಂದೂ ಹಬ್ಬವಾಗಿದ್ದು, ಜಾತ್ಯತೀತ ಹಬ್ಬವಲ್ಲ” ಎಂದರು.
ಇದಕ್ಕೆ ಪೀಠವು “ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಲು ನಿಮಗೆ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಹಕ್ಕು ಏನಿದೆ ಹೇಳಿ? ಶಿಷ್ಟಾಚಾರ ಪಾಲಿಸುವುದು ಅವರಿಗೆ ( ಸರ್ಕಾರಕ್ಕೆ ) ಸೇರಿದ ವಿಚಾರ” ಎಂದಿತು.
ಇನ್ನೊಬ್ಬರು ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ರಂಗನಾಥ್ ರೆಡ್ಡಿ ಅವರು “ಹಿಂದೂ ದೇವರ ಪೂಜೆಯನ್ನು ಆಗಮ ಶಾಸ್ತ್ರದಿಂದ ಪ್ರತ್ಯೇಕಿಸಲಾಗದು. ಹಿಂದೂಯೇತರ ವ್ಯಕ್ತಿಯು ದಸರಾ ಉದ್ಘಾಟಿಸಬಹುದೇ ಎಂಬ ಪ್ರಶ್ನೆ ಇಲ್ಲಿದೆ. ಹಿಂದೂ ದೇವರ ಮೇಲೆ ನಂಬಿಕೆ ಇದೆ ಎಂದು ಬಾನು ಮುಷ್ತಾಕ್ ಅವರು ಸ್ಪಷ್ಟಪಡಿಸಿದರೆ ನಮಗೆ ಯಾವುದೇ ಆಕ್ಷೇಪವಿಲ್ಲ” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಅರ್ಜಿದಾರ ಪ್ರತಾಪ್ ಸಿಂಹ ಅವರಿಗೆ ದಂಡ ವಿಧಿಸಬೇಕು. ಪ್ರತಾಪ್ ಸಂಸದರಾಗಿದ್ದಾಗ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದರು. ಈ ವಿಚಾರವನ್ನು ಅವರು ಬಹಿರಂಗಪಡಿಸಿಲ್ಲ. ಬಾನು ಮುಷ್ತಾಕ್ ಅವರು ಬುಕರ್ ಪ್ರಶಸ್ತಿ ಪುರಸ್ಕೃತರಾಗಿದ್ದು, ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಲೇಖಕರಾದ ನಿಸಾರ್ ಅಹ್ಮದ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಾಗ ಪ್ರತಾಪ್ ಸಿಂಹ ಈ ವಿಚಾರ ಎತ್ತಿಲ್ಲ. ಇದು ರಾಜ್ಯದ ಹಬ್ಬವಾಗಿದ್ದು, ಸರ್ಕಾರದ ನಿರ್ಧಾರವು ಸಂವಿಧಾನದ ೧೫ನೇ ವಿಧಿಗೆ ಪೂರಕವಾಗಿದೆ. ಎಲ್ಲಾ ಪಕ್ಷಗಳ ಮುಖಂಡರ ದಸರಾ ಸಮಿತಿಯು ಅತಿಥಿ ಆಯ್ಕೆಯನ್ನು ಮುಖ್ಯಮಂತ್ರಿಗೆ ನೀಡಿತ್ತು. ಮುಖ್ಯಮಂತ್ರಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ” ಎಂದರು.
“ಹಿಂದೂ-ಮುಸ್ಲಿಮ್ ಎಂದು ಕಂದಕ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ದಸರಾ ಜಾತ್ಯತೀತ ಹಬ್ಬವಾಗಿದ್ದು, ಇದನ್ನು ಧಾರ್ಮಿಕ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ” ಎಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಪ್ರತಿಪಾದಿಸಿದರು.
