Homeಜಿಲ್ಲೆಕನ್ನಡ ರಾಜ್ಯೋತ್ಸವವು ಹಿರಿಯರಿಗೆ ಸಲ್ಲಿಸುವ ಋಣ ಸಂದಾಯ: ಪ್ರೊ. ಚೆನ್ನಿ

ಕನ್ನಡ ರಾಜ್ಯೋತ್ಸವವು ಹಿರಿಯರಿಗೆ ಸಲ್ಲಿಸುವ ಋಣ ಸಂದಾಯ: ಪ್ರೊ. ಚೆನ್ನಿ

Spread the love

ಕನ್ನಡ ರಾಜ್ಯೋತ್ಸವವು ಹಿರಿಯರಿಗೆ ಸಲ್ಲಿಸುವ ಋಣ ಸಂದಾಯ: ಪ್ರೊ. ಚೆನ್ನಿ 

ಶಿವಮೊಗ್ಗ: ಕನ್ನಡ ಸಾಹಿತ್ಯಕ್ಕೆ ದೊರೆಗಳ ಬೆಂಬಲ ಕಳೆದ ಮೇಲೆ ಜನಸಾಮಾನ್ಯರು ಅದನ್ನು ಕಟ್ಟಿ ಬೆಳೆಸಿದರು. ಹಿರಿಯರು ಕಟ್ಟಿದ ಕನ್ನಡ ನಾಡು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯೋತ್ಸವವು ಹಿರಿಯರಿಗೆ ಸಲ್ಲಿಸುವ ಋಣ ಸಂದಾಯವಾಗಿದೆ ಎಂದು ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರು, ಚಿಂತಕರು, ಸಾಹಿತಿಗಳು ಆದ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ಅವರು ಇಂದುಇಲ್ಲಿನ ಬಾಪೂಜಿನಗರ ಕಾಲೇಜಿನ ಕನ್ನಡ ವಿಭಾಗ ಮತ್ತು ಕುವೆಂಪು ವಿಶ್ವವಿದ್ಯಾಲಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ಸಾಹಿತ್ಯ: ಸಂಸ್ಕೃತಿ ಮತ್ತು ಸಂವೇದನೆ ವಿಚಾರದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅದರೊಳಗೆ ಬೌದ್ಧ, ಜೈನ, ವೈಷ್ಣವ ಪರಂಪರೆಗಳ ಪ್ರಭಾವ ಇದೆ. ಈ ದೇಶಕ್ಕೆ ಸಮಾನತೆಯ ನೆಲೆಗಳನ್ನು ಕಲ್ಪಿಸಿಕೊಟ್ಟಿದ್ದು ಕನ್ನಡ ನಾಡು. 1956 ಕ್ಕಿಂತ ಮುಂಚೆ ಸುಮಾರು 29 ಭಾಗಗಳಲ್ಲಿ ಹಂಚಿಹೋಗಿದ್ದ ಈ ನಾಡನ್ನು ಭಾಷಿಕ ನೆಲೆಯಲ್ಲಿ ಒಗ್ಗೂಡಿಸಿದರು. ಧಾರವಾಡದಂತಹ ಪ್ರದೇಶದಲ್ಲಿ ರಸೆಲ್ ನಂತಹ ಅಧಿಕಾರಿಗಳ ಕನ್ನಡ ಸೇವೆ ಗಮನಾರ್ಹವಾದುದು. ಕನ್ನಡ ಅನ್ನ ಭಾಷೆಯಲ್ಲ, ಇಂಗ್ಲಿಷ್ ಮಾತ್ರ ಮೋಕ್ಷ ಎನ್ನುವ ಭ್ರಮೆಯಿಂದ ಹೊರಬರಬೇಕು. ಕನ್ನಡಕ್ಕೆ ಉದ್ಯೋಗ ಸೃಷ್ಟಿಸುವ ಪ್ರಾಧಾನ್ಯತೆ ಕೊಡಬೇಕು ಎಂದರು.

ಭಾಷೆಯ ಕಲಿಕೆಗೂ ಮಾಧ್ಯಮಕ್ಕೂ ಸಂಬಂಧ ಇಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರೆಲ್ಲಾ ಬದುಕಿದ್ದು, ಬರೆದದ್ದು ಹೆಚ್ಚು ಮಾತೃಭಾಷೆಯಲ್ಲಿಯೇ. ಎರಡು ಭಾಷೆಗಳು ಈ ಹೊತ್ತಿಗೆ ಬೇಕಾದರೆ ಅದು ಕನ್ನಡ ತ್ಯಜಿಸಿ ಎಂದರ್ಥವಲ್ಲ. ಮಗುವಿನ ಜ್ಞಾನ ವಿಸ್ತಾರವಾಗುವುದು ಮಾತೃಭಾಷೆಯ ಮೂಲಕ. ಕನ್ನಡ ಸಾಹಿತ್ಯವನ್ನು ಅದರ ಸೌಂದರ್ಯದ ಕಾರಣಕ್ಕಾಗಿ ಓದಬೇಕಾಗಿಲ್ಲ. ಸಮಾಜದ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅಣ್ಣಪ್ಪ ಎನ್. ಮಳೀಮಠ್ ಮಾತನಾಡಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ನಡುವೆ ಅವಿನಾಭಾವ ಸಂಬಂಧ ಇದೆ. ಸಾಹಿತ್ಯವು ಜನ ಸಂವೇದನೆಗಳನ್ನು ಪ್ರಧಾನಧಾರೆಯಲ್ಲಿ ತಂದಿದೆ. ಸಮಾಜದ ಆಶೋತ್ತರಗಳ ಜೊತೆಗೆ ಹೊಣೆಗಾರಿಕೆಯನ್ನು, ಸಮಸಮಾಜದ ಆಶಯಗಳನ್ನು ಇಟ್ಟುಕೊಂಡು ನಡೆದಿದ್ದು ಅನೇಕ ತಲ್ಲಣಗಳಿಗೆ ಸ್ಪಂದಿಸುವ ಗುಣ ಸಾಹಿತ್ಯಕ್ಕೆ ಮಾತ್ರ ಇದೆ ಎಂದರು.

ಪ್ರಾಂಶುಪಾಲರಾದ ಪ್ರೊ. ಎಸ್ ಶಶಿಧರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿನಿಮಾದಲ್ಲಿನ ಪ್ರಚಾರ ಜನಪದ ಕ್ಷೇತ್ರದಲ್ಲಿ ಇಲ್ಲ. ಈಗಿನ ಯುವಜನತೆ ಇಂತಹ ಅಪರೂಪದ ಕಲಾ ಪ್ರಕಾರಗಳೊಂದಿಗೆ ಮುಖಾಮುಖಿಯಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಖ್ಯಾತ ಜನಪದ ಕಲಾವಿದರಾದ ಗುಡ್ಡಪ್ಪ ಜೋಗಿ ಮತ್ತು ತಂಡ ಜೋಗಿ ಜನಪದ ವೈಭವ ನಡೆಸಿಕೊಟ್ಟರು.

ಐ.ಕ್ಯು.ಎ.ಸಿ ಸಂಚಾಲಕರಾದ ಡಾ. ವಿದ್ಯಾ ಮರಿಯ ಜೋಸೆಫ್, ಕನ್ನಡ ವಿಭಾಗದ ಮುಖ್ಯಸ್ಥರಾದ ರವಿ. ಎನ್, ಡಾ. ಮಂಜುನಾಥ ಎಂ.ಎಂ., ಡಾ. ಚಿಕ್ಕ ಹೆಗಡೆ, ಕೆ.ಪಿ ಪವಿತ್ರ, ಡಾ. ಸತೀಶ್, ಶ್ವೇತ ಉಪಸ್ಥಿತರಿದ್ದರು.

ಕು. ಗೀತ ನಿರೂಪಿಸಿ, ಸಿಂಧು ಪ್ರಾರ್ಥಿಸಿ, ಪುಣ್ಯ ಮತ್ತು ತಂಡ ನಾಡಗೀತೆ ಹಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments