ಶಿವಮೊಗ್ಗ.ಜ.6 : ಸಹಜ ಕುತೂಹಲದಿಂದ ನಿಧಾನವಾಗಿ ಆರಂಭಗೊಳ್ಳುವ ಮಾದಕ ವಸ್ತುಗಳ ಸೇವನೆ, ಕೊನೆಯಲ್ಲಿ ಚಟವಾಗಿ ಪರಿಣಮಿಸಲಿದ್ದು, ಇದರಿಂದಾಗಿ ಯುವ ಸಮೂಹಗಳು ತಮಗೆ ಅರಿವಿಲ್ಲದೆಯೆ ಅಮೂಲ್ಯವಾದ ಭವಿಷ್ಯವನ್ನು ಯಾತನಾಮಯವಾಗಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗಕವಳಿಕಟ್ಟಿ ಹೇಳಿದರು.
ಅವರು ಇಂದು ಪರಿವರ್ತನಾ ಟ್ರಸ್ಟ್, ಬೆಂಗಳೂರು, ಜಿಲ್ಲಾಡಳಿತ, ರೋಟರಿ ಸಂಸ್ಥೆ ಶಿವಮೊಗ್ಗದ ವಿವಿಧವಲಯಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕಜನಜಾಗೃತಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ದಿಯಾದಂತೆ ಪರಿಸರದ ಮೇಲೆ ಆಗಿರುವ ಪ್ರಭಾವ, ಅದರಪರಿಣಾಮಗಳು ಘೋರವಾಗಿದೆ. ಹಾಗಾಗಿ ಯುವ ಪೀಳಿಗೆಗಳು ಮಾದಕ ವಸ್ತುಗಳ ಮೋಹಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದ್ದು, ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳದೆ ಇರುವಂತೆ ಯುವಕರ ಗಮನ ಕೇಂದ್ರೀಕರಿಸಬೇಕಾದಬೇಕು. ಹಾಗೂ ನೈತಿಕ ಸ್ವಭಾವವೂ ಬದಲಾಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಸಮಾಜ ಹಾಗೂ ಪೋಷಕರಮೇಲಿದೆ ಎಂದರು.
ಮಾದಕ ವ್ಯಸನ ಎಂಬ ಮಾಯಾಜಾಲಕ್ಕೆ ಬೀಳುವ ಮೊದಲು ಅದನ್ನು ಬಲವಾಗಿ ಕಟ್ಟಿಹಾಕಬೇಕಾಗಿದೆ. ಅದಕ್ಕಾಗಿ ಇಡಿ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಜಾಗೃತ ಸಮಾಜ ನಿರ್ಮಿಸುವಲ್ಲಿ ಹಾಗೂ ಭಾರತದ ಭವಿಷ್ಯವನ್ನು ಸಂರಕ್ಷಿತಗೊಳಸುವ ರೂಪಿಸುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದರು.
ಮಾದಕ ವಸ್ತು ವ್ಯವನಿಗಳನ್ನು ಮಾತ್ರವಲ್ಲದೇ ಅವರ ಮೂಲಕ ಇಡೀ ಸಮಾಜವನ್ನು ಆವರಿಸಿಕೊಂಡು ವಿನಾಶದಂಚಿಗೆ ಕೊಂಡೊಯ್ಯುತ್ತದೆ. ಭವ್ಯ ಇತಿಹಾಸ, ಸಾಂಸ್ಕೃತಿಕ–ಆಧ್ಯಾತ್ಮಿಕ ಪರಂಪರೆ ಹೊಂದಿರುವಈ ನಾಡಿನಲ್ಲಿ ಹಿರಿಯರ ಆಶಯದಂತೆ ನಡೆದುಕೊಳ್ಳುವ, ಅನುಸರಿಸುವ ಅಗತ್ಯವಿದೆ ಎಂದರು.
“ಮದ್ಯ, ಮಾದಕ ವಸ್ತುಗಳ ನಿಯಂತ್ರಣ, ನಶೆ ಮುಕ್ತ ಸಮಾಜ ನಿರ್ಮಾಣ ಎಂಬ ಹೆಸರಿನಲ್ಲಿ ಅನೇಕಜನಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ, ಇನ್ನೊಂದು ಕಡೆಯಲ್ಲಿ ಮದ್ಯದಂಗಡಿಗಳಿಗೆ ಸರ್ಕಾರವೇ ಪರವಾನಿಗೆ ನೀಡುತ್ತಿದೆ. ಎಂತಹ ವಿಪರ್ಯಾಸ.”
– ಎಸ್.ಎನ್.ಚನ್ನಬಸಪ್ಪ, ಶಾಸಕರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ ಬಾನು , ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ.., ಚಂದ್ರಶೇಖರ್, ಹರ್ಷಕಾಮತ್, ಬಿ.ಜಿ.ಧನರಾಜ್, ಶ್ರೀಮತಿ ಭಾರತಿಚಂದ್ರಶೇಖರ್, ಸುದರ್ಶನ್, ಉದಯಕದಂಬ, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
