ಶಿವಮೊಗ್ಗ,ಏ.8: ಮಾನವನ ಜ್ಞಾನವನ್ನು ಕೃತಕ ಬುದ್ದಿಮತ್ತೆ ಬದಲಿಸಲಾರದು ಎಂದು ಕುವೆಂಪು ವಿವಿಕುಲಸಚಿವ (ಮೌಲ್ಯಮಾಪನ) ಡಾ.ತಿಮ್ಮರಾಯಪ್ಪ ಹೇಳಿದರು.
ಅವರು ಇಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜನ ಎಂ.ಕಾಂ ವಿಭಾಗ ಸಂಘಟಿಸಿದ ಕೃತಕಬುದ್ದಿ ಮತ್ತೆ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಎಐ ಹಲವು ತಾಂತ್ರಿಕ ಮತ್ತು ಕೌಶಲ್ಯಕ್ಕೆ ಹೊಸ ಸಾಧ್ಯತೆಯನ್ನು ತೆರೆದಿಟ್ಟರು ಸಹ ಅದು ಮನುಷ್ಯನ ಜ್ಞಾನವನ್ನು ಸಂಪೂರ್ಣ ಬದಲಿಸಲಾರದು ಎಂದರು.
ಎಐ ಮನುಷ್ಯನೇ ಸೃಷ್ಟಿಸಿದ ಮತ್ತೊಂದು ತಂತ್ರಜ್ಞಾನ ಅಷ್ಟೇ. ಅದೊಂದು ರೀತಿಯ ಪ್ಲಾಸ್ಟಿಕ್ ಹೂ. ನೋಡಲು ಸುಂದರವಾಗಿರುತ್ತದೆ. ಆದರೆ ಅಲ್ಲಿ ಸುವಾಸನೆಯಾಗಲಿ, ಮಕರಂದವಾಗಲಿ ಇರುವುದಿಲ್ಲ. ಇಷ್ಟಾದರೂ ಕೂಡ ಜಗತ್ತು ಮುಂದೊಂದು ದಿನ ಈ ಕೃತಕ ಬುದ್ಧಿಮತ್ತೆಗೆ ಶರಣಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಎಐ ನಿಯಂತ್ರಿಸುವ ಬಗ್ಗೆ ಅನೇಕ ಕಡೆ ಚರ್ಚೆ ನಡೆಯುತ್ತಿದೆ. ಯಾವುದೇ ಹೊಸದು ಬಂದಾಗ ಈ ರೀತಿಯ ವಿಮರ್ಶೆಗಳು ಅನಿವಾರ‍್ಯ. ಹಾಗಾಗಿ ಎಐ ವಿದ್ಯುತ್ ಇದ್ದಂತೆ. ಅದು ಬೆಳಕು ಹೌದು. ನಾಶವೂಹೌದು ಎಂದರು.
Also Read : ಪಾಲಿಕೆ ವ್ಯಾಪ್ತಿಯ ಬಡಾವಣೆಗೆ ‘ಎಸ್. ಬಂಗಾರಪ್ಪ’ ಅವರ ಹೆಸರಿಡಲು ಸರ್ಕಾರದ ಅನುಮೋದನೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಅವಿನಾಶ್ ಟಿ. ಅವರು, ನಮ್ಮ ಸಾವಯವ ಸಮಾಜವನ್ನು ವಿಘಟಿಸುವ ಸಾಧ್ಯತೆಯನ್ನು ಎಐ ಹೊಂದಿರುವುದರಿಂದ ಅದನ್ನು ವಿವೇಚನೆಯಿಂದ ಬಳಸಬೇಕು, ಆದರೆ ಎಐ ದುರ್ಬಳಕೆ ಇಂದು ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯ ವ್ಯಕ್ತಿಗಳನ್ನು ಕೀಳಾಗಿ ಕಾಣುವಂತೆ ಮಾಡುವ ಅಪಾಯಕಾರಿ ಬೆಳವಣಿಗೆ ಕೂಡ ಆಗುತ್ತಿದೆ. ಅನೇಕ ಬಾರಿ ತಪ್ಪು ಸಂದೇಶಗಳು ಈ ಮೂಲಕ ಹೊರ ಬರುತ್ತವೆ. ಅದರ ಉಪಯೋಗ ಇರುವುದರ ಜೊತೆಗೆ ದುರುಪಯೋಗಕೂಡ ಆಗುತ್ತಿದೆ. ಮನುಷ್ಯನೇ ನಿರ್ಮಿಸಿದ ಈ ಕೃತಕ ಬುದ್ಧಿಮತ್ತೆ ಮುಂದೊಂದು ದಿನ ಮನುಷ್ಯನನ್ನೇ ನಿಯಂತ್ರಿಸುತ್ತದೆ. ಹಾಗಾಗಿ ಅತ್ಯಂತ ಎಚ್ಚರಿಕೆಯಿಂದ ಇದನ್ನು ಬಳಸಬೇಕಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಯತೀಶ್‌ಚಂದ್ರ ಅವರು ಮಾತನಾಡಿ, ತಂತ್ರಜ್ಞಾನವು ಎರೆಡಲುಗಿನ ಕತ್ತಿ ಇದ್ದಂತೆ, ಅದನ್ನುನಾವು ಸರಿಯಾಗಿ ನಿಭಾಯಿಸಬೇಕಿದೆ ಎಂದು ವಾದಿಸಿದರು.
ದಿಕ್ಸೂಚಿ ಭಾಷಣ ಮಾಡಿದ ಪ್ರೊ.ಆಕಾಶ್ ಅವರು ಎಐನಲ್ಲಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಹೊಸ ಸಾಧ್ಯತೆ ಆಗಲಿವೆ ಎಂದು ತಿಳಿಸಿದರು.
ಕುಂದನ್ ಬಸವರಾಜ್ ಪ್ರಸ್ತಾವಿಕವಾಗಿ, ಡಾ.ಸರಳ ಅವರು ಸ್ವಾಗತಿಸಿ, ಡಾ.ಮಮತಾ ವಂದಿಸಿದರು.
