Homeಜಿಲ್ಲೆಮನುಷ್ಯನ ವಿಕೃತಿ ಹೆಚ್ಚಾಗುತ್ತಿದೆ. ಜಗತ್ತು ಯುದ್ಧಗಳ ಭಯದಲ್ಲಿದೆ: ಡಾ.ನಾಗೇಶ್ ಡೋಂಗ್ರೆ

ಮನುಷ್ಯನ ವಿಕೃತಿ ಹೆಚ್ಚಾಗುತ್ತಿದೆ. ಜಗತ್ತು ಯುದ್ಧಗಳ ಭಯದಲ್ಲಿದೆ: ಡಾ.ನಾಗೇಶ್ ಡೋಂಗ್ರೆ

Spread the love

ಶಿವಮೊಗ್ಗ,.8: ಸಮಾಜ ಸೇವಾ ಸಂಸ್ಥೆಗಳು ಸಮಾಜದ ಜೀವಕೋಶಗಳಿದ್ದಂತೆ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕ ಹಾಗೂ ಭೂ ಅಭಿವೃದ್ಧಿ ಅಧಿಕಾರಿ ಡಾ.ನಾಗೇಶ್ ಎಸ್. ಡೋಂಗ್ರೆ ಹೇಳಿದರು.

ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗದಿಂದ ಸಮಾಜ ಸೇವಾ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳ  ಮುಖಾಮುಖಿ ಕಾರ್ಯಕ್ರಮದಲ್ಲಿ ಸಾಕ್ಷಾಚಿತ್ರ ಬಿಡುಗಡೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

also read: ಶ್ರೇಷ್ಠ ಕಾವ್ಯಗಳು ಯುದ್ದ ವಿರೋಧಿಗಳೇ ಆಗಿವೆ: ಪ್ರೊ. ರಾಜೇಂದ್ರ ಚೆನ್ನಿ

ಸಮಾಜ ಇತ್ತೀಚಿಗೆ ಬೇರೆ ಬೇರೆ ದಿಕ್ಕಿನತ್ತ ಹೊರಳುತ್ತಿದೆ. ಮನುಷ್ಯನ ವಿಕೃತಿ ಹೆಚ್ಚಾಗುತ್ತಿದೆ. ಜಗತ್ತು ಯುದ್ಧಗಳ ಭಯದಲ್ಲಿದೆ. ಇಂತಹ ಸಂದರ್ಭಗಳಲ್ಲಿ ಸಮಾಜಸೇವಾ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ. ಅವು ಸಮಾಜದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯವನ್ನು ಕಾಪಾಡುವಲ್ಲಿ ಸೇವೆಗಳ ರೂಪದಲ್ಲಿ ಕೆಲಸ ಮಾಡುತ್ತಾ ಜೀವಕೋಶದಂತೆ ಉಸಿರಾಡುತ್ತವೆ. ವ್ಯಕ್ತಿ ಮತ್ತು ಸಮುದಾಯದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಇದು ಸಮಾಜದ ಸಮಗ್ರ ಅಭಿವೃದ್ಧಿಗೂ ಕಾರಣವಾಗುತ್ತದೆ. ವ್ಯಕ್ತಿಯ ವ್ಯಕ್ತಿತ್ವಕ್ಕೂ ಶಕ್ತಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸೇವೆ ಪುಸ್ತಕ ಓದುವುದರಿಂದ ಬರುವುದಿಲ್ಲ. ಅದನ್ನು ರೂಢಿಸಿಕೊಳ್ಳಬೇಕು ಹಾಗಾಗಿ ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯರೂಪ ದಲ್ಲಿ ಮಕ್ಕಳಿಗೆ ಸೇವಾಸಂಸ್ಥೆಗಳ ಪರಿಚಯ ಮಾಡಿಸದೆ ನೇರವಾಗಿ ಸೇವಾ ಸಂಸ್ಥೆಗಳ ಬಳಿ ತೆರಳಿ ಅವರು ಮಾಡುವ ಸಾಮಾಜಿಕ ಕಾರ್ಯ ಕ್ರಮಗಳನ್ನು ಗಮನಿಸಬೇಕು. ಇದಕ್ಕೂ ಅಂಕ ನೀಡಬೇಕು ಹಾಗಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಎನ್‌ಜಿಓ ಮಹತ್ವ ತಿಳಿಯುತ್ತದೆ. ಕೇವಲ ಶಿಕ್ಷಣ ಸಂಸ್ಥೆಗಳು ಮಾತ್ರ ಕಾರ್ಯ ಮಾಡಿದರೆ ಸಾಲದು. ಸಮಾಜ ಕೂಡ ಪ್ರತಿಸ್ಪಂದನೆ ಮಾಡಬೇಕು. ಸೇವೆಯಿಂದಲೇ ಸಮಾಜ ಎಂಬುದನ್ನು ತಿಳಿಯಬೇಕು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದೇ ಕಾಲೇಜಿನ ಶಕ್ತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿರಾಜ್ ಅಹ್ಮದ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಸಮುದಾಯದ ಕಾಳಜಿ ಅಗತ್ಯವಿದೆ. ಸೇವೆ ಮಾಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆ ನೀಡುತ್ತವೆ. ಶಿಕ್ಷಣ ವೇ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕು. ಇಲ್ಲಿ ಸುಮಾರು ೨೬ಕ್ಕೂ ಹೆಚ್ಚು ಸಂಘಸಂಸ್ಥೆಗಳ ಮುಖಂಡರು ಬಂದಿದ್ದಾರೆ ಅವರಿಂದ ಮಾಹಿತಿ ಪಡೆದು ಹೊಸ ದಿಕ್ಕನ್ನು ಪಡೆದುಕೊಳ್ಳಿ ಎಂದರು.

ಡಿವೈಎಸ್‌ಪಿ ಬಾಬು ಆಂಜನಪ್ಪ ಮತ್ತು ಕೋಟೆ ಪೊಲೀಸ್ ಠಾಣೆಯ ಪಿಐ ಹರೀಶ್ ಪಾಟೀಲ್ ಇಬ್ಬರೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ವ್ಯಸನಗಳಿಗೆ ಬಲಿಯಾಗಬೇಡಿ. ಗಾಂಜಾ ದಂತಹ ಅಪಾಯಕಾರಿ ಸೇವನೆ ಮತ್ತೊಂದಿಲ್ಲ ಯಾವುದೇ ಕಾರಣಕ್ಕೂ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಕಷ್ಟಪಟ್ಟು ಓದಿ ಸಂಚಾರಿ ನಿಯಮಗಳನ್ನು ಪಾಲಿಸಿ ನಿಮ್ಮ ವಿದ್ಯಾರ್ಥಿ ಜೀವನದ ಜೊತೆಗೆ ಸೇವೆಯ ಕಡೆ ಗಮನ ಕೊಡಿ. ಬದುಕನ್ನು ನಾಶಮಾಡಿಕೊಳ್ಳದೆ ಹಾಳು ಮಾಡಿಕೊಳ್ಳಬಾರದು. ಪೊಲೀಸ್ ಇಲಾಖೆ ಕೂಡ ಸಮಾಜಸೇವೆಯ ಮಹತ್ವವನ್ನು ತಿಳಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಆಯೋಜಕಿ ಡಾ. ಕೃಪಾಲಿನಿ ಹೆಚ್.ಎಸ್. ಮಾತನಾಡಿ, ನಮ್ಮ ಸುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲ ಬಯಸದೆ ಮಾಡುವ ಕೆಲಸಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ಇಲ್ಲಿ ಸುಮಾರು 26 ಕ್ಕೂ ಹೆಚ್ಚು ಸೇವಾ ಸಂಸ್ಥೆಗಳು ಭಾಗವಹಿಸಿವೆ. ಇವೆಲ್ಲವೂ ಆರೋಗ್ಯ, ರಕ್ತದಾನ ಶಿಬಿರಗಳು, ಕೌಶಲ್ಯಾಭಿವೃದ್ಧಿ, ಪರಿಸರ ಮುಂತಾದಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿವೆ. ಯಾವ ಪ್ರತಿಫಲವನ್ನು ಇವು ಬಯಸುವುದಿಲ್ಲ, ಜನಸೇವೆ ಜನಾರ್ಧನ ಸೇವೆ ಎಂಬ ತತ್ವದ ಅಡಿಯಲ್ಲಿ ನಾವು ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಇಂತಹ ಮುಖಾಮುಖಿ ಕಾರ್ಯಕ್ರಮಗಳು ಬದುಕನ್ನು ತಿದ್ದಿಕೊಳ್ಳಲು ಸಹಾಯಕವಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಡಾ.ಪ್ರಸನ್ನಕುಮಾರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಮಂಜುನಾಥ್ ಕೆ.ಎನ್., ಐಕ್ಯೂಎಸಿ ಸಂಚಾ ಲಕ ಡಾ.ಮಂಜುನಾಥ್ ಹೆಚ್.ಪಿ., ಪ್ರಾಧ್ಯಾಪಕರುಗಳಾದ ಶ್ರೀಂಚನ, ಮಹಾದೇವ ಸ್ವಾಮಿ ಕೆ.ಎನ್., ಸಂಗೀತ, ಕುಮಾರಸ್ವಾಮಿ, ಶಶಿಕುಮಾರ್, ರವಿ, ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ಭಾರತೀ ಚಂದ್ರಶೇಖರ್, ರೇಖಾ, ಧರಣೇಂದ್ರ ದಿನಕರ್ ಸೇರಿದಂತೆ ಹಲವರಿದ್ದರು.

ವಿದ್ಯಾರ್ಥಿಗಳ ಮುಖಾಮುಖಿಯಲ್ಲಿ ಸಮಾಜ ಸೇವಾ ಸಂಸ್ಥೆಗಳಾದ ಜೀವನ ಸಂಜೆ ವೃದ್ಧಾಶ್ರಮ, ರೆಡ್‌ಕ್ರಾಸ್, ರಕ್ಷಾ ಸಮುದಾಯ, ತಾಯಿಮನೆ, ಗುಡ್‌ಲಕ್ ಆರೈಕೆ ಕೇಂದ್ರ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್, ಅಭ ಯಧಾಮ, ಆಶಾಕಿರಣ, ಮಾನಸ ನರ್ಸಿಂಗ್ ಹೋಂ, ಮಾಧವ ನೆಲೆ, ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಪರಿಸರ ಅಧ್ಯಯನ ಕೇಂದ್ರ, ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments