ಬೀದರ್,ಏ.11 : ಗಾಂಧೀ ಮತ್ತು ಅಂಬೇಡ್ಕರ್ ಪತ್ರಕರ್ತರಾಗಿದ್ದರು. ಗಾಂಧೀಜಿಯವರ ಪತ್ರಿಕೆ ಸ್ವಾತಂತ್ರಕ್ಕೆ ಸಹಕಾರಿಯಾದರೆ, ಅಂಬೇಡ್ಕರ್ ಅವರು ಪತ್ರಿಕೆ ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಬೀದರ್ ನಲ್ಲಿ ಆಯೋಜಿಸಿದ್ದ 40 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಮನಿಸಿ:ಪತ್ರಕರ್ತರ ಬಸ್ ಪಾಸ್ ನಿಯಮದಲ್ಲಿ ತೊಂದರೆ ಇದ್ದರೆ ಕೂಡಲೇ ಬಗೆಹರಿಸುತ್ತೇನೆ: ಸಿಎಂ
ನಮ್ಮ ಸಮಾಜದಲ್ಲಿ ಅನೇಕ ಜಾತಿ , ಧರ್ಮ ಭಾಷೆಗಳಿವೆ. ಇಂತಹ ವೈರುದ್ದ ಸಮಾಜದಲ್ಲಿ ನಾವೆಲ್ಲ ಸಮಾನವಾಗಿ ಬದುಕಲು ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಬಸವಣ್ಣನವರು ಕೂಡ ಈ ಉದ್ದೇಶದಿಂದ ಅನೇಕ ಕಾರ್ಯವನ್ನು ಮಾಡಿದ್ದರು. ಅದರೂ ಅಸಮಾನತೆ ನಿಂತಿಲ್ಲ. ಸಮಾಜದ ಕೆಲವು the ಪಟ್ಟಭದ್ರಹಿತಾಸಕ್ತಿಗಳು ಇದನ್ನು ಮುಂದುವರೆಸಲು ಕಾಯುತ್ತಿದ್ದಾರೆ . ಅದನ್ನು ನಾವೆಲ್ಲ ಹೊಗಲಾಡಿಸಬೇಕು.
ಬಸವಣ್ಣ ಕರ್ಮ ಸಿದ್ದಾಂತವನ್ನು ತಿರಸ್ಕರಿಸಿದ್ದರು. ಆದರೆ ಈಗ ಅದನ್ನು ಹೆಚ್ಚಾಗಿ ಶಿಕ್ಷಣವಂತರೆ ಪಾಲಿಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಶಿಕ್ಷಣದಲ್ಲಿ ಸಿದ್ದಾಂತ ಮತ್ತು ವೈಚಾರಿಕತೆ ಇಲ್ಲದಂತಾಗಿರುವುದು. ಈಗಲು ಕೂಡ ಕೆಲವು ಮನುವಾದಿಗಳು ಕರ್ಮ ಸಿದ್ದಾಂತವನ್ನು ಹುಟ್ಟು ಹಾಕುತ್ತಿದ್ದಾರೆ. ಅದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಯವರು ಬಲಗೊಳಿಸುತ್ತಿದ್ದಾರೆ. ಸಮ ಸಮಾಜ ನಿರ್ಮಾಣವಾದರೆ ಶೋಷಣೆ ನಿಂತು ಹೋಗುತ್ತದೆ ಹಾಗಾಗಿ ಶೋಷಣೆ ಮಾಡುವವರು ಸಮ ಸಮಾಜ ನಿರ್ಮಾಣ ಮಾಡಲು ಬಿಡದೆ ಅದನ್ನು ಇನ್ನಷ್ಟು ಗಟ್ಟಿ ಮಾಡುತ್ತಿದ್ದಾರೆ ಎಂದರು.
ಅಸಮಾನತೆಯ ಸಮಾಜದಲ್ಲಿ ಎಚ್ಚರಿಕೆಯಿಂದ ಇರಬೇಕು. ಇದನ್ನು ಹೊಗಲಾಡಿಸಲು ಪ್ರಯತ್ನ ಮಾಡಬೇಕು. “ವೈರುದ್ದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ನಮಗೆ ರಾಜಕೀಯ ಸ್ವಾತಂತ್ರ ಪಡೆದು ಯಶಸ್ವಿಯಾಗಬೇಕಾದರೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ ಎಲ್ಲರಿಗೂ ಸಿಗಬೇಕು” ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ವಾಸ್ತವದಲ್ಲಿ ಜಾತಿ ವ್ಯವಸ್ಥೆಗೆ ಚಲನೆ ಇಲ್ಲದೆ ಜಡತ್ವದಿಂದ ಕೂಡಿದೆ. ಚಲನೆ ಸಿಗಬೇಕೆಂದರೆ ಆರ್ಥಿಕವಾಗಿ, ಸಾಮಾಜಿವಾಗಿ ಸ್ವಾತಂತ್ರ ಸಿಗಬೇಕು. ಈ ನಿಟ್ಟಿನಲ್ಲಿ ಸುದ್ದಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು. ಹಾಗಾಗಿ ಪತ್ರಕರ್ತರು ಸಾರ್ವಜನಿಕರಿಗೆ ಕೇವಲ ವಿಷಯ ತಿಳಿಸಿದರೆ ಸಾಕಾಗದು, ವೃತ್ತಿಯಲ್ಲಿ ಸಮಾಜ ಸುಧಾರಣೆಯನ್ನು ಮಾಡುವ ಉದ್ದೇಶವನ್ನು ಹೊಂದಿರಬೇಕು ಎಂದರು.
