ಶಿವಮೊಗ್ಗ , ಏ.13: ಶುದ್ಧಕುಡಿಯುವ ನೀರನ್ನು ಸಮಪರ್ಕವಾಗಿ ಪೂರೈಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದಿಂದ ಇಂದು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಮನವಿ ಸಲ್ಲಿಸಲಾಯಿತು.
ಅಲ್ಪಸಂಖ್ಯಾತರು ವಾಸಿಸುವ ಹಲವು ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ತೀವ್ರ ಕೊರತೆ ಉಂಟಾಗಿ, ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ವಿಶೇಷವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ಸ್ವಚ್ಛತೆ, ದೀಪ ದೀಪಗಳು, ರಸ್ತೆ, ಯುಜಿಡಿ ವ್ಯವಸ್ಥೆಗಳು ಸಮರ್ಪಕವಾಗಿ ಇಲ್ಲದಿರುವುದರಿಂದ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಗಮನಿಸಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಛಿದ್ರ ಛಿದ್ರವಾಗಲಿದೆ :ಕೆಎಸ್ ಈ
ಪಾಲಿಕೆಯ ನೀರು ಸರಬರಾಜು ಇಲಾಖೆಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕಲುಷಿತವಾಗಿ ಸರಬರಾಜಾಗುತಿದ್ದು ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರೂ ಶುದ್ಧ ಕುಡಿಯುವ ನೀರು ಸರಬರಾಜಾಗದೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆಯ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದರು.
ವಾರ್ಡ್ ಗಳಲ್ಲಿ ಚರಂಡಿಗಳ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆ, ನೊಣ ಹಾಗೂ ಕ್ರಿಮಿಕೀಟಗಳು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ರೋಗಗಳು ಉಂಟಾಗುವ ಆತಂಕವಿದೆ. ಮಳೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚರಂಡಿ ನಿರ್ವಹಣೆ ಸರಿಯಾಗಿ ಮಾಡದಿದ್ದರೆ ಮಳೆಯ ನೀರು ಮನೆಯೊಳಗೆ ನುಗ್ಗುವ ಸಾಧ್ಯತೆಯಿದೆ.
ವಾರ್ಡ್‌ಗಳಲ್ಲಿ ನೀರು ಸರಬರಾಜು ಇಲಾಖೆಯಿಂದ ಎರಡು ದಿನ ನೀರು ಪೂರೈಕೆಯಾದರೆ ನಾಲ್ಕು ದಿನ ನೀರು ಬರುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ವಾರ್ಡ್‌ಗಳಿಗೆ ಭೇಟಿ ನೀಡಿ, ಮೂಲ ಸೌಲಭ್ಯಗಳನ್ನು ಕೂಡಲೇ ಕಲ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ವಾಹಿದ್ (ಅಡ್ಡು) ವಹಿಸಿದ್ದು, ಪ್ರಮುಖರಾದ ರಿಯಾಜ್ ಅಹ್ಮದ್, ಮಹಮ್ಮದ್ ಶಫಿ, ಮುನಾಫ್, ಸ್ಟೆಲ್ಲಾ ಮಾರ್ಟಿನ್, ಸಿಂಧ್ಯಾರಾಣಿ, ಜಾನ್ ಡಿಸೋಜಾ, ಸೈಯದ್ ಜಮೀನ್, ಜಕಾವುಲ್ಲಾ, ಸೈಯದ್ ಜುಬೇರ್, ಸೈಯದ್ ಮುಜೀಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
