ಶಿವಮೊಗ್ಗ,ಏ.13: ಎರಡು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ದಾಹದಿಂದಾಗಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರ ಉಳಿಸಿಕೊಳ್ಳಲು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಹಾಗೂ ಹಲವಾರು ಶಾಸಕರು ಸಚಿವರಾಗಲು ಹಾತೊರೆಯುತ್ತಿದ್ದು, ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಛಿದ್ರ ಛಿದ್ರವಾಗಲಿದೆ ಎಂದರು.
ಗಮನಿಸಿ: KWJU ನ ರಾಜ್ಯ ಸಮಿತಿ ನಿರ್ದೇಶಕರಾಗಿ ರವಿಕುಮಾರ್ ನೇಮಕ
ದಾವಣಗೆರೆ ಉಪಚುನಾವಣೆಯಿಂದ ಮುಸ್ಲಿಂ ಸಮುದಾಯದವರಲ್ಲಿ ಗೊಂದಲ ಉಂಟಾಗುವುದರ ಜೊತೆಗೆ ಮುಸ್ಲಿಂ ನಾಯಕರಲ್ಲಿಯೇ ಕಚ್ಚಾಟವಾಗುತ್ತಿದೆ. ಮುಸ್ಲಿಂರ ಓಟಿಗಾಗಿ ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ನೆಚ್ಚಿಕೊಂಡಿದ್ದು, ಆದರೆ ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂರ ಓಟ್ ಬ್ಯಾಂಕ್ ಎಲ್ಲಿ ಕೈಬಿಡುತ್ತದೋ ಎಂದು ಎಂಬುದರ ಬಗ್ಗೆ ಚಿಂತೆಯಾಗಿದೆ. ಆದರೂ ಸಹ ಮುಸ್ಲಿಂರನ್ನು ನೆಚ್ಚಿಕೊಂಡು ಉಸಿರಾಡುತ್ತಿದೆ. ಅದು ನಿಂತರೆ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಇಲ್ಲದಂತಾಗುತ್ತದೆ ಎಂದು ಲೇವಡಿಮಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಹಾಗೂ ಸ್ವಾತಂತ್ರ ನಂತರದಲ್ಲೂ ಸಹ ಮಹಿಳೆಯರು ಉತ್ತಮ ಆಡಳಿತ ನೀಡುತ್ತಿದ್ದು, ಇದಕ್ಕೆ ಉದಾಹರಣೆ ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್ ಸೇರಿದಂತೆ ಹಲವರಿದ್ದಾರೆ. ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ಎಂದರು.
