ಶಿವಮೊಗ್ಗ ಏ.21: ಪಶ್ಚಿಮ ಘಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕಾಗಿ ಗ್ರೀನ್ ಚೆಕ್ ಪೋಸ್ಟ್ ಸ್ಥಾಪನೆ, ಪ್ಲಾಸ್ಟಿಕ್ ಬಳಕೆ ಮಿತಗೊಳಿಸುವ ನಿಯಮಗಳು ಮತ್ತು ಪಶ್ಚಿಮ ಘಟ್ಟ ಮ್ಯೂಸಿಯಂ ಇನ್ಸ್ಟಿಟ್ಯೂಟ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ತಬ್ರೇಝ್‌ಆಲಂ ಶರೀಫ್ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ ಪಶ್ಚಿಮ ಘಟ್ಟಗಳನ್ನು ಹೊಂದಿರುವ 6 ರಾಜ್ಯಗಳ ಪೈಕಿ ನಮ್ಮ ರಾಜ್ಯವೇ ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಹಾಗೂ ಸಂರಕ್ಷಣೆಗಾಗಿ ಸಮಿತಿ ರಚಿಸಿದ ಮೊದಲ ರಾಜ್ಯವಾಗಿದ್ದು, 2008 ರಲ್ಲಿ ಈ ಸಮಿತಿ ರಚನೆಯಾಗಿದೆ. ವನ್ಯಜೀವಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನಗಳನ್ನು ಘೋಷಿಸುವ ಮೂಲಕ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲಾಗುತ್ತಿದೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಮುಖ್ಯವಾಗಿ ಯುವಜನತೆಯಲ್ಲಿ ಅರಿವು ಮೂಡಿಸುವುದು, ನಿಯಮಗಳ ರಚನೆ ಹಾಗೂ ಕತ್ತಲೆ ಕಾಡು ಸಂರಕ್ಷಣೆ ಗೆ ಒತ್ತು ನೀಡಲಾಗುತ್ತಿದ್ದು, ಕತ್ತಲೆ ಕಾನನ್ನು ಹೆರಿಟೇಜ್ ಸೈಟ್ ಆಗಿ ಘೋಷಿಸುವಂತೆ ಜೀವ ವೈವಿಧ್ಯ ಮಂಡಳಿಗೆ ಪತ್ರ ಬರೆಯಲಾಗಿದೆ. ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಪೋಸ್ಟ್ ಕಾರ್ಡ್ ಬಿಡುಗಡೆಗೊಳಿಸಲಾಗಿದೆ. ಹಾಗೂ ಇತ್ತೀಚಿಗೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹೋಂ ಸ್ಟೇ, ರೆಸಾರ್ಟ್ ಸ್ಥಾಪನೆ ಕುರಿತು ಡೇಟಾ ಬೇಸ್ ಸಂಗ್ರಹಿಸಿ, ಅಲ್ಲಿ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಎಸ್ ಓ ಪಿ ಯನ್ನು ತರಲಾಗುವುದು ಎಂದರು.
ಗಮನಿಸಿ:ಬಿಜೆಪಿಗರಿಗೆ ಚಿಂತನಗಂಗಾದಲ್ಲೇ ಹೆಚ್ಚಿನ ಆಸಕ್ತಿ: ಕಿಮ್ಮನೆ ರತ್ನಾಕರ್
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶರಾವತಿ ಪಂಪ್ಡ್ ಸ್ಟೋರೇಜ್ ವಿಷಯಕ್ಕೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯ ಸ್ಟೇ ನೀಡಿದೆ. ಪಶ್ಚಿಮ ಘಟ್ಟಗಳಿಗೆ ಹಾನಿ ಉಂಟು ಮಾಡುವ ಯಾವುದೇ ಯೋಜನೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದ ಅವರು ಹುಲಿಕಲ್ ಘಾಟಿ ಸಮಸ್ಯೆ ಕುರಿತು ಅರಿಯಲು ತಾವು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.
ಜೀವವೈವಿಧ್ಯ ಉಳಿವಿಗೆ ಸೂಕ್ಷ್ಮ ಪ್ರದೇಶಗಳನ್ನು ಘೋಷಿಸುವ ಉದ್ದೇಶ ಹೊಂದಿದ್ದು ಸುಸ್ಥಿರ ಪ್ರವಾಸೋದ್ಯಮ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಪ್ರವಾಸೋದ್ಯಮ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
