HomeUncategorized🌸ವಿಶೇಷ ಲೇಖನ🌸 ನಿಜವಾಗಿ ಮಹಿಳೆಯರ ಶಾಪ ತಟ್ಟಬೇಕಾಗಿರುವುದು ಯಾರಿಗೆ?!

🌸ವಿಶೇಷ ಲೇಖನ🌸 ನಿಜವಾಗಿ ಮಹಿಳೆಯರ ಶಾಪ ತಟ್ಟಬೇಕಾಗಿರುವುದು ಯಾರಿಗೆ?!

Spread the love

ಮಹಿಳಾ ಮೀಸಲಾತಿಯ ಸೋಗಿನಲ್ಲಿ ಕ್ಷೇತ್ರ ಪುನರ್‌ವಿಂಗಡನೆ ಮಸೂದೆಗೆ ಸರ್ವಾನುಮತ ಪಡೆದು ಜಾರಿಗೆ ತರಲು ಮುಂದಾಗಿದ್ದ ಬಿಜೆಪಿ ಸರ್ಕಾರಕ್ಕೆ ಸಂಸತ್ ನಲ್ಲಿ ಮುಖಭಂಗವಾಗಿದೆ. ಈಗ ಬಿಜೆಪಿ ಅದನ್ನೇ ರಾಜಕೀಯ ಅಸ್ತ್ರವಾಗಿ ಮಾಡಿಕೊಂಡು ವಿರೋಧ ಪಕ್ಷಗಳ ಮೇಲೆ ಹರಿಹಾಯುತ್ತಿದ್ದು, ಈ ಮೂಲಕ ನಾವು ಮಹಿಳಾ ಪರವಾಗಿದ್ದೇವೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದೆ.

ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ತನಗೆ ಹೇಗೇ ಬೇಕೋ ಹಾಗೇ ಪಗಡೆ ಆಟುವನ್ನು ಆಡುತ್ತಾ ಬಂದಿದೆ. ಈಗ ಪ್ರಜಾಪ್ರಭುತ್ವಕ್ಕೆ, ಈ ದೇಶದ ಜನರಿಗೆ ನಯವಂಚನೆ ಮಾಡಲು ಮುಂದಾಗಿದ್ದ ಬಿಜೆಪಿಯ ಬಣ್ಣ ಬಯಲಾಗಿದ್ದು, ಉಳಿದಿರುವ ಒಂದಿಷ್ಟನ್ನು ಮಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಅದರಂತೆ ತಾನು ಬೆಣ್ಣೆ ತಿಂದು ವಿರೋಧ ಪಕ್ಷಗಳ ಮೂತಿಗೆ ಸವರಲು ಹೊರಟಿದ್ದು, ಮಹಿಳಾ ಮೀಸಲಾತಿ ಸೋಗಿನಲ್ಲಿ ಕ್ಷೇತ್ರ ಪುನರ್ ವಿಂಗಡನೆಯ ಮಾಡಲು ಹೊರಟಿದ್ದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹಾಗಾಗಿ ಯಾವಾಗ ಸಂಸತ್ ನಲ್ಲಿ ಮಸೂದೆಗೆ ಬಹುಮತ ಬರಲಿಲ್ಲ. ಅದಾಗಲೇ ಸಂಸದೀಯ ಸಚಿವ ಉಳಿದ ಮಸೂದೆಯನ್ನು ಮತಕ್ಕೆ ಹಾಕದೆ ನಿಲ್ಲಿಸಿಬಿಟ್ಟರು. ಆಗಲೇ ನೋಡಿ ಬಿಜೆಪಿ ಒಳಗಿನ ಮೋಸದಾಟ ಬಯಲಾಗಿದ್ದು, ಹಾಗಾದರೆ ನಿಜವಾಗಿ ಬಿಜೆಪಿ ಸೋತಿದ್ದು ಮಹಿಳಾ ಮೀಸಲಾತಿಯಲ್ಲಾ ಎಂದು ಕೇಳಿದರೆ ಇಲ್ಲವೇ ಇಲ್ಲ, ಅದು ಸೋತಿದ್ದು ಕ್ಷೇತ್ರ ಪುನರ್ ವಿಂಗಡನೆಯಲ್ಲಿ. ಮೋದಿ ಸರ್ಕಾರ ತನ್ನ ಅಜೆಂಡಾವನ್ನು ಪ್ರಚುರಪಡಿಸುವಲ್ಲಿ. ಈ ಅರಿವಿನಿಂದಲ್ಲೇ ಈಗ ವಿರೋಧ ಪಕ್ಷದ ಮೇಲೆ ಮುಗಿಬಿದ್ದು ಮಹಿಳಾ ಓಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡಲು ಶುರುವಾಗಿದೆ. ಹಾಗಾದರೆ ನಿಜವಾಗಿ ಬಿಜೆಪಿ ಮಹಿಳೆಯರ ಪರವಾಗಿ ಇದ್ದಾರೆಯೇ ಎಂದು ಚಿಂತನೆಗೆ ಇಳಿದರೆ. ಇತಿಹಾಸ ಪುಟವೇ ಬೆಚ್ಚಿಬೀಳುತ್ತದೆ.

ಮಹಿಳೆಯರು ಮತ್ತು ಬಿಜೆಪಿ:

ಮಾಧ್ಯಮಗಳ ಮುಂದೆ ಪುಕಾನುಪುಂಕವಾಗಿ ಬಡಬಡಿಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ತಮ್ಮ ಪಕ್ಷ ಅಧಿಕಾರಿದಲ್ಲಿರುವ ರಾಜ್ಯಗಳ ಹಣೆಬರವನ್ನು ಅವಲೋಕಿಸಬೇಕಿದೆ. ಇದರಿಂದ ಮೋದಿ ಎಂದು ಬೊಬ್ಬೆ ಹೊಡೆದುಕೊಳ್ಳುವ ಬದಲು ಒಂದಿಷ್ಟು ಆತ್ಮಾವಲೋಕ ಮಾಡಿಕೊಳ್ಳಲು ಸಿದ್ದರಾಗಬೇಕಿದೆ. ಮಹಿಳಾ ಮೀಸಲಾತಿ ಸರ್ವಾನುಮತ ಬರದೆ ಇದ್ದ ನೆಪವೊಡ್ಡಿ ಬೀದಿಗಿಳಿಯುತ್ತಾ, ದಿನಕ್ಕೊಂದು ಪತ್ರಿಕಾಗೋಷ್ಠಿ ಮಾಡುತ್ತಾ ಕೇಂದ್ರವನ್ನು ಮೆಚ್ಚಿಸುವ ಭರದಲ್ಲಿ ಇಡೀ ತಮ್ಮ ಅಸ್ಥಿತ್ವಕ್ಕೆ ಕಪ್ಪು ಮಸಿ ಬಳಿದುಕೊಳ್ಳುವ ಧಾವಂತದಲ್ಲಿವವರು ಇಲ್ಲಿ ಗಮನ ಹರಿಸಬೇಕಿದೆ.

ಕಳೆದು 10 ವರ್ಷಗಳಿಂದ ಈ ದೇಶದಲ್ಲಿ ಮಹಿಳೆಯ ಸ್ಥಿತಿ ಶೋಷನೀಯವಾಗಿದೆ ಎಂದರೆ ತಪ್ಪಿಲ್ಲ. ನಾರಿಶಕ್ತಿ, ಬೇಟಿ ಬಜಾವೋ-ಬೇಡಿ ಪಡಾವೋ ಎಂದು ರಾಜಕೀಯ ಭಾಷಣ ಮಾಡುವ ವಿಶ್ವಗುರುವಿಗೆ ಹಾಗೂ ಆ ಪಟಾಲಂಗೆ ಈ ದೇಶದ ಸ್ಥಿತಿ ಮತ್ತು ಅಲ್ಲಿರುವ ಮಹಿಳೆಯರ ಸ್ಥಾನ ಮಾನ ಅರಿತಿದ್ದರೆ ಇಂದು ಈ ದುರ್ಗತಿ ಬರುತ್ತಿರಲಿಲ್ಲ. ಬಿಜೆಪಿ ಸರ್ಕಾರದ ಆಡಳಿತದಲ್ಲಿರುವ ಮಣಿಪುರದಲ್ಲಿ 2023 ರಲ್ಲಿ ಮಹಿಳೆಯನ್ನು ಬಯಲಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬೆತ್ತಲೆ ಮೆರವಣಿಗೆ ಮಾಡಲಾಯಿತು. ಮೋದಿಯೇ ಮುಖ್ಯಮಂತ್ರಿಯಾಗಿದ್ದ ಗುಜುರಾತ್ ನ ಗೋಧ್ರಾದಲ್ಲಿ ನಡೆದ ಹತ್ಯೆಕಾಂಡದಲ್ಲಿ ತುಂಬು ಗರ್ಭಿಣಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದು, ನಂತರ ಆ ಕೈದಿಗಳು ಬಿಡುಗಡೆಯಾದಾಗ ಸಂಭ್ರಮಿಸಲಾಯಿತು. ಕಥುವಾದಲ್ಲಿ ಅತ್ಯಾಚಾರ ಘಟನೆ ಇನ್ನು ಮಾಸಿಲ್ಲ. ಇನ್ನೊಂದೆಡೆ ಯೋಗಿ ನೇತೃತ್ವದ ಸರ್ಕಾರದಲ್ಲಿ ಕುಲದೀಪ್ ಸೇಂಗರ್ ನಡೆಸಿದ ಅತ್ಯಾಚಾರದ ಉನ್ನಾವೋ ಪ್ರಕರಣ, ಹತ್ರಾಸ್ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ಕಣ್ಣೀಗೆ ಕಟ್ಟಿದಾಗೆ ಇದೆ. ಇನ್ನೂ ಮಹಿಳಾ ಕುಸ್ತಿ ಕ್ರೀಡಾ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಬ್ರಿಜ್ ಭೂಷಣನ್ನು ಹಾಗೂ ಎಫ್ಟಿನ್ ಫೈಲ್‌ನಲ್ಲಿ ಭಾಗಿಯಾಗಿದ್ದ ತನ್ನ ಸಂಪುಟದ ಸಚಿವನನ್ನು ವಿಶ್ವಗುರು ಜೊತೆಯಲ್ಲಿಟ್ಟುಕೊಂಡೆ ತಿರುಗುತ್ತಿರುವುದು ಕಾಕತಾಳೀಯವೆನಲ್ಲಾ.

ಇದಿಷ್ಟು ಮೇಲ್ನೋಟಕ್ಕೆ ಕಂಡರೆ ಇನ್ನೂ ಬಿಜೆಪಿ ಹಾಗೂ ಅದರ ಸಿದ್ದಾಂತದ ಒಳಹೂರಣ ಇನ್ನಷ್ಟು ಕಹಿಯಾಗಿದೆ. ಸಂಘಪರಿವಾರ, ಮನುಸ್ಮೃತಿ ಆಧಾರದ ಮೇಲೆ ಸ್ಥಾಪಿತವಾಗಿರುವ ಪಕ್ಷದಿಂದ ಇದನ್ನು ಬಿಟ್ಟರೆ ಇನ್ಯಾವುದು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗೇ ನೋಡಿದರೆ ಇಂದು ಮಹಿಳಾ ಮೀಸಲಾತಿ ವಸೂದೆ ಅಂಗೀಕಾರ ಆಗದೆ ಇರಲು ವಿರೋಧ ಪಕ್ಷಗಳು ಎಂದು ದೂರತ್ತಿದ್ದಾರೆ. ಆದರೆ ಬಿಜೆಪಿಯ ಇಂತಹ ವಿರೋಧವನ್ನು ಇತಿಹಾಸವೇ ದಾಖಲಿಸಿದೆ.

ಹಿಂದೂ ಕೋಡ್ ಬಿಲ್ ಮತ್ತು ಸಂಘಪರಿವಾರ:

1950 ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶದ ಎಲ್ಲಾ ಜಾತಿ, ಧರ್ಮ ಒಳಗೊಂಡಂತೆ ಅಲ್ಲಿನ ಮಹಿಳೆಯರು ಈ ಸಮಾಜದಲ್ಲಿ ಗಂಡಿನ ಸರಿಸಮಾನವಾಗಿ ಹಕ್ಕನ್ನು ಪಡೆಯಲು ಹಿಂದೂ ಕೋಡ್ ಬಿಲ್ ಕಾನೂನು ರಚಿಸಿದ್ದರು. ಆದರೆ ಸದನದಲ್ಲಿ ಇದನ್ನ ಬಲವಾಗಿ ವಿರೋಧಿಸುವಲ್ಲಿ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾದ ಎನ್‌ಸಿ ಚಟರ್ಜಿ, ಶ್ಯಾಮ್ ಪ್ರಸಾದ್ ಮುಖರ್ಜಿ ಮುಂಚೂಣಿಯಾಣಿಯಲ್ಲಿದ್ದರು. ಅದರಂತೆ 1949 ರಲ್ಲಿ ಅಖಿಲ ಭಾರತ ಹಿಂದೂ ವಿರೋಧಿ ಸಂಹಿತೆ ಮಸೂದೆ ಸಮಿತಿಯನ್ನು ರಚಿಸಿ 1950 ರಿಂದ 1951 ರಲ್ಲಿ ಹಿಂದೂ ಕೋಡ್ ಬಿಲ್ ವಿರುದ್ದ ಪ್ರತಿಭಟನೆ ನಡೆಸಿದರು. ಹಿಂದೂ ಕೋಡ್ ಬಿಲ್ ಅನ್ನು “ಹಿಂದೂ ಸಮಾಜದ ಮೇಲೆ ಪರಮಾಣ ಬಾಂಬ್” ಎಂದು ಕರೆದರು. ಇದಲ್ಲದೆ ಮಸೂದೆ ವಿರೋಧಿಸಿ ದೆಹಲಿಯಲ್ಲಿ ಜವಹಾರಲಾಲ್ ನೆಹರು ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಕೃತಿಯನ್ನು ಸುಟ್ಟರು. ಇನ್ನೂ 2023 ರಲ್ಲಿ ಸಂಸತ್ ನಲ್ಲಿ ಇದೇ ಮಹಿಳಾ ಮೀಸಲಾತಿಯು ಸಾರ್ವನುಮತ ಪಡೆದಿದ್ದರು, ಅದನ್ನು ಆಗಲೆ ಜಾರಿ ಮಾಡದೆ. ಕ್ಷೇತ್ರ ಪುನರ್ ವಿಂಗಡಣೆಯ ಜೊತೆಗೆ ತರಲು ಆಲೋಚನೆ ಮಾಡಿದ್ದರು. ಅದರ ಉದ್ದೇಶ ಸಂಪೂರ್ಣ ಕ್ಷೇತ್ರ ಪುನರ್ ವಿಂಗಡನೆ ಹೊರತು ಮಹಿಳಾ ಮೀಸಲಾತಿಯೆಲ್ಲಾ ಎಂಬುದು ಸ್ಪಷ್ಟವಾಗಿದೆ. ಅದರ ಫಲಿತಾಂಶ ಈಗ ದೇಶದ ಜನರು ಎದುರಿಗಿದೆ.

ಬಿಜೆಪಿಯ ಮೂಲ ಮಂತ್ರ ಮಹಿಳೆ ವಿರೋಧಿಯೇ ಆಗಿದೆಯೇ!:

ಆರ್‌ಎಸ್‌ಎಸ್, ಜನಸಂಘದಿಂದ ರೂಪಗೊಂಡಿರುವ ಬಿಜೆಪಿಗೆ ಗೋಲ್ವಾಲ್ಕರ್, ಹೆಗ್ಡೆವಾರ್ ಅವರೇ ಮೂಲ ಆದರ್ಶ ಪುರುಷರು ಎನ್ನುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಅದನ್ನು ಬಿಜೆಪಿಯ ಮಹಾನಾಯಕರೇ ಪ್ರತಿಬಾರಿ ಸಾಕ್ಷೀಕರಿಸುತ್ತಿದ್ದಾರೆ. ಸಂವಿಧಾನ, ಅಂಬೇಡ್ಕರ್, ದಲಿತರು, ಮಹಿಳೆಯರ ಮೇಲೆ ನಡೆಸುತ್ತಿರುವ ಸಂಪ್ರಾದಾಯಿಕ ದಾಳಿ ಇವರ ಸಿದ್ದಾಂತದ ಮೂಲವೇನೆಂದು ತಿಳಿಸುತ್ತಿದ್ದು, ಈಗಾಗಲೇ ಅದು ಎಲ್ಲಿಂದ ಎರವಲು ಪಡೆಯಲಾಗಿದೆ ಎಂಬುದು ದೇಶಕ್ಕೆ ಗೊತ್ತಿರುವ ಸಂಗತಿಯಾಗಿದೆ. ಅದರಂತೆ ಗಂಡು-ಹೆಣ್ಣು, ಮುಟ್ಟು, ಪಾವಿತ್ರ್ಯತೆ, ಅಸಮಾನತೆ, ಶೋಷಣೆ, ಶುದ್ದ-ಆಶುದ್ದ ಪರಿಕಲ್ಪನೆಯನ್ನು ಸಾರಿರುವ ಮಹಾಪುರುಷರ ಹಾದಿಯಲ್ಲೆ ಬಿಜೆಪಿ ಪಕ್ಷವೂ ಶತ ಶತಮಾನಗಳಿಂದ ಸಾಗುತ್ತಾ ಬಂದಿದೆ. (ಹೆಚ್ಚಿನ ಮಾಹಿತಿಗೆ ಅಂಬೇಡ್ಕರ್ ಅವರ ಕ್ರಾಂತಿ ಪ್ರತಿಕ್ರಾಂತಿ, ಸುಜ್ಞಾನಮೂರ್ತಿಯ ಮನುಸ್ಮೃತಿ ಅಪರಾಧ-ಸಂಹಿತೆ ಪುಸ್ತಕ) ಕಾಲನುಕ್ರಮವಾಗಿ ಅದಕ್ಕೆ ಹೊಸತನವನ್ನು ಸ್ಪರ್ಶ ಕೊಟ್ಟು ಧಾರ್ಮಿಕ ಮತ್ತು ಸಂಪ್ರಾದಾಯ ಕಟ್ಟೆಳೆಯೊಳಗೆ ಕಟ್ಟಿ ಹಾಕುತ್ತಿದ್ದರು. ಅವೆಲ್ಲವನ್ನೂ ಮರೆತು ಮಹಿಳೆಯರ ಪರವಾಗಿ ಇದ್ದೇವೆ ಎನ್ನುವ ಆತ್ಮವಂಚಕರು ಮುಂದೆ ಬರುತ್ತಿದ್ದಾರೆ.

ಯಾವ ದೇಶದಲ್ಲಿ ಮಹಿಳೆಯರು ಅಭಿವೃದ್ದಿ ಹೊಂದುತ್ತಾರೊ ಆ ದೇಶದ ಮಾತ್ರ ಮುಂದುವರೆಯಲು ಸಾಧ್ಯ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಆದರೆ ಕಳೆದ 10 ವರ್ಷಗಳಿಂದ ಈ ದೇಶವೂ ಪುಟ್ಟ ಹೆಣ್ಣು ಮಕ್ಕಳು, ಮಹಿಳೆಯರ ನೋವು, ಸಂಕಟದ ನಿಟ್ಟುಸಿರಲ್ಲೆ ಮುಂದೆ ಸಾಗಿದೆ. ಸರ್ಕಾರವು ಬದುಕ್ಕಿದ್ದು ಸತ್ತಂತೆ ನಡೆಯುತ್ತಿದೆ. ಪ್ರಚಾರಕ್ಕೆ ಬೀಸುವ ಕೈಗಳು ಕಣ್ಣಿರು ಹೊರೆಸಲು ಮುಂದಾಗಿದ್ದರೆ ಎಷ್ಟು ಸೋಗಸಾಗಿರುತ್ತಿತ್ತು, ವ್ಯವಹಾರಕ್ಕೆ ಕಿವಿ ಕೊಡುವ ಬದಲು ಸಂಕಟವನ್ನು ಕೇಳಿದ್ದರೆ ಆತ್ಮವಾದರೂ ತೃಪ್ತಿಯಾಗುತ್ತಿತ್ತು, ಆದರೆ ಇದ್ಯಾವುದನ್ನು ಮಾಡದೆ ಇರುವ ಆತ್ಮವಂಚನೆ ಎಷ್ಟು ನಿಷ್ಕೃರ. ಹಾಗಾದರೆ ಇಡೀ ಸಮಸ್ತ ಮಹಿಳೆಯರ ಶಾಪ ತಟ್ಟಬೇಕಾಗಿರುವುದು ಯಾರಿಗೆ?, ಕಾಲದಿಂದ ಕಾಲಕ್ಕೆ ಮಹಿಳೆಯರ ಅಪಮಾನ ಮಾಡುತ್ತಿರುವವರು ಯಾರು?, ಈಗಲಾದರೂ ಆತ್ಮಸಾಕ್ಷಿಯಿಂದ ಪ್ರಶ್ನಿಸಿಕೊಳ್ಳಬೇಕಿದೆ.

ಆಕಾಶ್.ಆರ್.ಎಸ್, ಪತ್ರಕರ್ತ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments