ಮಾರ್ಚ್ ನಲ್ಲಿ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಅನುಮೋದನೆಗೊಂಡಿದ್ದ ಮರ್ಯಾದಾಗೇಡು ಹತ್ಯೆಗಳನ್ನು ನಿಷೇಧಿಸಿ “ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ( ಇವ ನಮ್ಮವ, ಇವ ನಮ್ಮವ) ವಿಧೇಯಕ, 2026″ ಇದೀಗ ಕಾನೂನು ಆಗಿ ರಾಜ್ಯದಲ್ಲಿ ಜಾರಿಗೊಂಡಿದೆ.
ಮೇ,5 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಕಾಯ್ದೆಯ ಅಧಿಸೂಚನೆ ಹೊರಡಿಸಲಾಗಿದ್ದು, ನೆನ್ನೆಯಿಂದಲೇ ಈ ಕಾನೂನಿನ ಎಲ್ಲ ಅಧಿನಿಯಮಗಳು ಜಾರಿಗೊಂಡಿವೆ ಎಂದು ಆದೇಶಿಸಲಾಗಿದೆ.
ಇಡೀ ದೇಶದಲ್ಲೇ ಜಾತಿ ಆಧಾರಿತ ದ್ವೇಷದಿಂದ ನಡೆಯುವ ಮರ್ಯಾದಾಗೇಡು ಹತ್ಯೆಗಳನ್ನು ನಿಷೇಧಿಸಿ ಕಾಯ್ದೆ ತಂದ ಮೊಟ್ಟ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಸಂದಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಆಧಾರಿತ ತಾರತಮ್ಯ, ಹಿಂಸೆ, ಕೊಲೆಯಂತಹ ಪಾಶವಿ ಕೃತ್ಯಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಜಾತಿ ಕಟ್ಟಳೆಗಳನ್ನು ಮೀರಿ ನಡೆಯುವ ಅಂತರ್‌ಜಾತಿ ವಿವಾಹವಾದವರನ್ನು ಪೋಷಕರೆ ಜಾತಿ ಶ್ರೇಷ್ಠತೆಯ ಮರ್ಯಾದೆ ಎಂಬ ಸಾಮಾಜಿಕ ವಿಕೃತ ಭ್ರಮೆಯನ್ನು ಉಳಿಸಿಕೊಳ್ಳಲು ಹಲ್ಲೆ- ಹತ್ಯೆಗಳು ನಡೆಸುತ್ತಿರುವುದು ಕಳವಳಕಾರಿ ಸಂಗತಿ. ಇದನ್ನು ತಡೆಯಲು ಸೂಕ್ತ ಕಾನೂನು ಜಾರಿಗೆ ತರಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು.
ಗಮನಿಸಿ:ಸ್ವರ್ಣ ಪದಕ ಬುದ್ದ, ಬಸವ, ಅಂಬೇಡ್ಕರ್ ಗೆ ಅರ್ಪಣೆ
ಪತ್ರಕರ್ತ ಎನ್. ರವಿಕುಮಾರ್ ಈ ಬಗ್ಗೆ ಸಾರ್ವಜನಿಕ ಅಭಿಯಾನವನ್ನು ನಡೆಸಿದ್ದು ,ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ನಡೆದ ಮರ್ಯಾಡಗೇಡು ಹತ್ಯೆಗಳ ವಿವರಗಳೊಂದಿಗೆ ಜನವರಿ 1 ರಂದು ಮನವಿ ಸಲ್ಲಿಸಿದ್ದರು. ನಾಡಿನ ಪ್ರಜ್ಞಾವಂತರು, ಸಾಹಿತಿಗಳು,ಲೇಖಕರು, ಪತ್ರಕರ್ತರು,ಮಹಿಳಾ ಪರ ಹೋರಾಟದ ಸಂಘಟನೆಗಳು ಕಾಯ್ದೆ ಜಾರಿಗೆ ಆಗ್ರಹಿಸಿದ್ದವು.

ರಾಜ್ಯ ಸರ್ಕಾರದ ಉಭಯ ಸದನಗಳಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿಮರ್ಯಾದಾಗೇಡು ಹತ್ಯೆ ನಿಷೇಧಿಸಿ ವಿಧೇಯಕ “ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ( ಇವ ನಮ್ಮವ, ಇವ ನಮ್ಮವ) ವಿಧೇಯಕ, 2026″ ಕಾಯ್ದೆಯನ್ನು ಅನುಮೋದಿಸಿದ್ದು. ಇದೀಗ ಸರ್ಕಾರ ಮೇ 5 ರಿಂದ ಜಾರಿಗೊಳಿಸಿ ಗೆಜೆಟ್ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.
