ಶಿವಮೊಗ್ಗ,ಮೇ.14 : ಮೇ 3 ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರಿಂದ ದೇಶದ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಹಲವು ಭಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಬಿಜೆಪಿಯೇತರ ರಾಜ್ಯಗಳ ಜನಪ್ರತಿನಿಧಿಗಳ ಮೇಲೆ ಸಿಬಿಐ ಮತ್ತು ಇಡಿಗಳನ್ನು ದುರ್ಬಳಕೆ ಮಾಡಲಷ್ಟೇ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಹೊರತು ಇದೂವರೆಗೂ ಈ ಪ್ರಕರಣ ಸಂಬಂಧ ಸಿಬಿಐ ಯಾವ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ನೀಟ್ ಗಿಂತ ಮೊದಲು ವೈದ್ಯ ವೃತ್ತಿಯನ್ನು ಕಲಿಯುವ ಆಸೆಯಿರುವ ಬಡ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಸಿಇಟಿ ಪರೀಕ್ಷೆಯ ಮೂಲಕವೇ ಭರ್ತಿ ಮಾಡಿ, ಅವರ ಆಶಯವನ್ನು ಈಡೇರಿಸಲಾಗುತ್ತಿತ್ತು. ಆದರೆ ಈಗ ಕೇಂದ್ರದ ಬಿಜೆಪಿ ಸರ್ಕಾರ ನೀಟ್ ಪರೀಕ್ಷೆ ತನ್ನ ಹಿಡಿತಕ್ಕೆ ಪಡೆದುಕೊಂಡು ಹಲವು ವಿದ್ಯಾರ್ಥಿಗಳ ಭವಿಷ್ಯದ ಜೊತಗೆ ಚೆಲ್ಲಾಟವಾಡುತ್ತಿದ್ದಾರೆ. ಸೋರಿಕೆಯಾದ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಮರು ಪರೀಕ್ಷೆ ಮಾಡಲಿ ಎಂದು ಆಗ್ರಹಿಸಿದರು.
ನೀಟ್ ಪರೀಕ್ಷೆಯ ಆವಾಂತರವನ್ನು ಖಂಡಿಸಿ, ಈಗಾಗಲೇ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಪೋಷಕರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಇಂತಹ ಸರ್ಕಾರ ಬೇಡ ಎಂದು ಪೋಷಕರೇ ಒತ್ತಾಯಿಸುತ್ತಿದ್ದಾರೆ. ಹಿಂದೆ ಇದ್ದ ಹಾಗೆ ರಾಜ್ಯ ಸರ್ಕಾರಕ್ಕೆ ವೈದ್ಯಕೀಯ ಸೀಟುಗಳ ಭರ್ತಿ ಮಾಡುವ ಅವಕಾಶವನ್ನು ಕೇಂದ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ಮೋದಿ ದೇಶದ ಜನತೆಯ ಮುಂದೆ 7 ಅಂಶಗಳ ಕಾರ್ಯಕ್ರಮವನ್ನು ನೀಡಿದ್ದಾರೆ. ಇದು ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಮತ್ತು ಅದನ್ನು ಮುಚ್ಚಿಡಲು ಪ್ರಧಾನಿ ಹೊಸ ನಾಟಕ ಆಡುತ್ತಿದ್ದಾರೆ. ಕೂಡಲೇ ಪ್ರಧಾನಿ ಮೋದಿಯವರು ದೇಶದ ಆರ್ಥಿಕ ಸ್ಥಿತಿ-ಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಗಮನಿಸಿ: ಹಿಜಾಬ್‌ಗೆ ಅವಕಾಶ, ಕೇಸರಿ ಶಾಲಿಗೆ ನಿರ್ಬಂಧ: ಕೆ.ಎಸ್.ಈಶ್ವರಪ್ಪ ಆಕ್ರೋಶ
ಹಿಂದೂ ಪತ್ರಿಕೆಯಲ್ಲಿ ಇಂದಿರಾ ಗಾಂಧಿ ಹೇಳಿಕೆ ನೀಡಿದ್ದಾರೆಂದು ಎ.ಐ.ಮೂಲಕ ಸುಳ್ಳು ದಾಖಲೆ ಸೃಷ್ಟಿಸಿ ಅಪಪ್ರಚಾರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅದು ಸುಳ್ಳು ಎಂದು ಹಿಂದೂ ಪತ್ರಿಕೆಯವರೇ ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗದ ಶಾಸಕ ಎಸ್.ಎನ್.ಚನ್ನಬಸಪ್ಪನವರು ಕಾಂಗ್ರೆಸ್ ಪಕ್ಷ ಮತ್ತು ಇಂದಿರಾ ಗಾಂಧಿಯವರ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಮಾತ್ರ ರಾಷ್ಟ್ರಭಕ್ತರೆಂದುಕೊಂಡಿದ್ದಾರೆ. ಆದರೆ ರಾಷ್ಟ್ರ ದ್ರೋಹಿಗಳು ಯಾರು ಎಂದು ರಾಜ್ಯದ ಜನತೆಗೆ ಗೊತ್ತಿದೆ. ಶಾಸಕರು ಇಂದಿರಾ ಗಾಂಧಿಯವರ ಬಗ್ಗೆ ಇನ್ನಾದರೂ ಗೌರವ ಕೊಟ್ಟು ಮಾತನಾಡಲಿ ಎಂದರು.
ಬಿಜೆಪಿ ಕಾಲದಲ್ಲಿ ಮಾಡಿದ ಸಮವಸ್ತ್ರ ಸಂಹಿತೆಯನ್ನು ಕಾಂಗ್ರೆಸ್ ಸರ್ಕಾರ ತೆರವುಗೊಳಿಸಿದೆ. ಧಾರ್ಮಿಕ ಚಿಹ್ನೆಗಳನ್ನು ಸಮವಸ್ತ್ರ ದೊಂದಿಗೆ ಉಪಯೋಗಿಸಬಹುದು ಎಂದಿದೆ. ಕೇಂದ್ರ ಶಿಕ್ಷಣ ನೀತಿಯಲ್ಲೂ ಕೂಡ ಇದು ಜಾರಿಯಲ್ಲಿದೆ. ಅಂದು ಬಿಜೆಪಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ನಿಷೇಧಿಸಿ ವಿವಾದಕ್ಕೆ ಕಾರಣವಾಗಿತ್ತು. ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಇದನ್ನು ತೆರವುಗೊಳಿಸಿದ್ದು ಎಲ್ಲಾ ನಾಯಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್, ಶಿವಮೊಗ್ಗ ದಕ್ಷಿಣ ಬ್ಲಾಕ್ ಅಧ್ಯಕ್ಷ ಖಲೀಂ ಪಾಷಾ, ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಪ್ರಮುಖರಾದ ಸೈಯದ್ ವಾಹಿದ್ ಅಡ್ಡು, ಎಸ್.ಟಿ.ಹಾಲಪ್ಪ, ಯು.ಶಿವಾನಂದ, ಸ್ಟೆಲ್ಲಾ ಮಾರ್ಟಿನ್, ಅರ್ಚನಾ ಇನ್ನಿತರರು ಇದ್ದರು.
