ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.26
ಕೋಮುವಾದಿ ಸಂಘ ಪರಿವಾರದ ಗೂಂಡಾಗಳ ಮೇಲಿನ ಕೇಸನ್ನು ಸರ್ಕಾರವು ವಾಪಾಸ್ಸು ಪಡೆದಿದ್ದು, ಇದನ್ನು ಖಂಡಿಸಿ ಸರ್ಕಾರ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮಂಗಳವಾರ ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸರ್ಕಾರ ಇತ್ತೀಚೆಗೆ ಸಂಘ ಪರಿವಾರದವರನ್ನು ಸಮಾಧಾನಪಡಿಸುವ ಉದ್ದೇಶದಿಂದ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮುದ್ವೇಷ ಹರಡಿ ಗಲಭೆ ಸೃಷ್ಟಿಸಿದವರ ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯಲು ನಿರ್ಧಾರ ತೆಗೆದುಕೊಂಡಿದೆ. ಇದು ಕಾನೂನಿನ ವ್ಯವಸ್ಥೆಗೆ ವಿರುದ್ಧವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಬದಲಿಸಿ ದ್ವೇಷ ಹರಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಗಮನಿಸಿ: ಶಾಲೆಗಳಲ್ಲಿ ಲಿಂಗ ಸಮಾನತೆಯ ಪಾಠ ಪರಿಚಯಿಸಿ: ಜಿಲ್ಲಾಧಿಕಾರಿಗೆ ಮನವಿ
ದ್ವೇಷ ಭಾಷಣದ ಮೂಲಕ ಅಶಾಂತಿ ಸೃಷ್ಟಿಸಿದವರು ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿದವರು. ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ನಿರಂತರ ವಿಷಕಾರಿ ಭಾಷಣ ಮಾಡುವವರು ಸಮಾಜದ ಸ್ವಾಸ್ಥö್ಯವನ್ನು ಹಾಳುಮಾಡುವವರೇ ಆಗಿದ್ದಾರೆ. ಇಂತಹವರನ್ನು ಕ್ಷಮಿಸುವುದು ಅವರ ವಿರುದ್ಧವಿರುವ ಕೇಸುಗಳನ್ನು ವಾಪಾಸ್ಸು ತೆಗೆದುಕೊಳ್ಳುವುದು ಸರಿಯಲ್ಲ ಎಂದರು.
ಕನ್ನಡಪರ ಸಂಘಟಣೆಗಳು, ರೈತ ಹೋರಾಟಗಾರರ ಕೇಸುಗಳನ್ನು ವಾಪಾಸ್ಸು ಪಡೆದಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕೋಮು ಪ್ರಚೋದನೆ ಮಾಡುವ ಇಂತಹವರ ಕೇಸನ್ನು ವಾಪಾಸ್ ತೆಗೆದುಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಆದ್ದರಿಂದ ಸರ್ಕಾರ ತನ್ನ ಜನವಿರೋಧಿ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್‌ಡಿಪಿಐನ ಜಿಲ್ಲಾಧ್ಯಕ್ಷ ಜಿಲಾನ್‌ಖಾನ್, ಇಮ್ರಾನ್ ಅಹ್ಮದ್, ಮನ್ಸೂರ್ ಆಲಿಖಾನ್, ರಹೀಂಖಾನ್, ಜಮೀರ್, ಸಾದಿಕ್, ಇಸಾಕ್ ಅಹ್ಮದ್ ಸೇರಿದಂತೆ ಹಲವರಿದ್ದರು.
