ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜು.11
ಖಾಯಂ ವೈದ್ಯರನ್ನು ನೇಮಕ ಮಾಡಲು ಸರ್ಕಾರ ಅವಕಾಶ ನೀಡಿದ್ದು, ನೇಮಕ ಪ್ರಕ್ರಿಯೆ ಶೀಘ್ರದಲ್ಲೆ ಪ್ರಾರಂಭವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.
ಅವರು ಶನಿವಾರ ಮಾಧ್ಯಮಗಾರರೊಂದಿಗೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ 19 ಪಿಎಸ್ಸಿ ಎಂಬಿಬಿಎಸ್ ವೈದ್ಯರು ಬೇಕಾಗಿದ್ದು, ಗುತ್ತಿಗೆ ಆಧಾರ ಮೇಲೆ ನೇಮಕ ಮಾಡಲು ಆದೇಶ ಮಾಡಲಾಗಿದೆ. ಹಾಗಾಗಿ ಆದಷ್ಟು ಬೇಗ ಅರ್ಜಿ ಕರೆದು ಅದನ್ನು ಸ್ವೀಕರಿಸಲಾಗುತ್ತದೆ. ಗುಡ್ಡ ಮತ್ತು ಕಾಡು ಪ್ರದೇಶಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಹೆಚ್ಚಿನ ವೇತನವನ್ನು ನೀಡಲಾಗುತ್ತದೆ ಎಂದರು.
ಗಮನಿಸಿ: ಪಶ್ಚಿಮ ಬಂಗಾಳಕ್ಕೆ ಬಂದ ಸ್ಥಿತಿ ಕರ್ನಾಟಕಕ್ಕೆ ಬರಲು ಕಾಂಗ್ರೆಸ್ ಬಿಡುವುದಿಲ್ಲ: ಯು.ಟಿ ಖಾದರ್
ಇಲಾಖೆ ಮೊದಲ ಆದ್ಯತೆ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ನರ್ಸ್, ಫಾರ್ಮ ಸಿಸ್ಟರ್ ಹಾಗೂ ಡಿ ವೃಂದ ನೌಕರರನ್ನು ಭರ್ತಿ ಮಾಡುವುದು. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಅವರು ಒಪ್ಪಿಗೆ ನೀಡಿದ್ದು, ಕೂಡಲೇ ಭರ್ತಿ ಮಾಡಲಾಗುತ್ತದೆ ಎಂದರು.
ಕೆಎಫ್ಡಿ ಗೆ ವಿಶೇಷ ಗಮನ ಹರಿಸುತ್ತಿದ್ದೇವೆ. ವಾಕ್ಸಿನ್ ಸಂಶೋಧನೆ ನಡೆಸಲು ಪ್ರಾರಂಭಿಸಿ 5 ವರ್ಷವಾಯಿತು. ಇದರ ಗಂಭೀರತೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ ಎಂದರು.
ಸಂಪಟು ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ಸಂಪುಟ ವಿಸ್ತರಣೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಬಿಟ್ಟಿದ್ದು, ನಮಗೆ ಸಚಿವ ಸ್ಥಾನ ನೀಡಿ ಜಿಲ್ಲೆಗಳ ಜವಾಬ್ದಾರಿ ನೀಡಿದ್ದಾರೆ. ಅದನ್ನು ನಿಭಾಯಿಸುತ್ತಿದ್ದೇವೆ. ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಂಡರು ಅದಕ್ಕೆ ಬದ್ದರಾಗಿದ್ದೇವೆ ಎಂದರು.
