ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.23
ರೋಟರಿ ಕ್ಲಬ್ ಶಿವಮೊಗ್ಗ ಮತ್ತು ಸಹ್ಯಾದ್ರಿ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಗುರುವಾರ ಪರಿಸರ ಸಂರಕ್ಷಣೆ ಮತ್ತು ಹಸಿರು ಕರ್ನಾಟಕದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎರಡೂ ಕಾಲೇಜುಗಳ ಆವರಣದ ವನದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದರು. “ನೆಡುವ ಗಿಡವೇ ನಾಳಿನ ಉಸಿರು” ಎಂಬ ಸಂದೇಶದೊAದಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರುಗಳಾದ ಪ್ರೊ.ಟಿ ಅವಿನಾಶ್ ಮತ್ತು ಡಾ.ಸಿರಾಜ್ ಅಹಮದ್ “ಇಂದಿನ ದಿನಗಳಲ್ಲಿ ಪರಿಸರ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ರೋಟರಿ ಕ್ಲಬ್ ವತಿಯಿಂದ ನೀಡಿ ನೆಟ್ಟಿರುವ ಈ ಗಿಡಗಳನ್ನು ನಾವು ನಮ್ಮ ಮಕ್ಕಳಂತೆ ಪ್ರೀತಿಯಿಂದ ಪೋಷಿಸುತ್ತೇವೆ. ಪ್ರತಿ ತರಗತಿಗೂ ಗಿಡದ ಜವಾಬ್ದಾರಿ ವಹಿಸಿ ಅದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷರಾದ ಎನ್. ಗೋಪಿನಾಥ್ ಮಾತನಾಡಿ, “ರೋಟರಿ ಕ್ಲಬ್ ತನ್ನ ಸಾಮಾಜಿಕ ಚಟುವಟಿಕೆಗಳ ಮುಂದುವರಿದ ಭಾಗವಾಗಿ ಇಂದು ಎರಡೂ ಕಾಲೇಜುಗಳಲ್ಲಿ ಗಿಡಗಳನ್ನು ನೆಟ್ಟಿದ್ದೇವೆ. ಗಿಡ ನೆಡುವುದರ ಜೊತೆಗೆ ಅದನ್ನು ಬೆಳೆಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಆದ್ದರಿಂದ ಈ ಸಸಿಗಳನ್ನು ಜೋಪಾನವಾಗಿ ಕಾಪಾಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತೇನೆ” ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೈ.ಎಚ್. ನಾಗರಾಜ್ ಮಾತನಾಡಿ, “ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಒಂದು ಗಿಡ ಬೆಳೆಸಿದರೆ ಹತ್ತು ಜನರಿಗೆ ನೆರಳು, ಹಣ್ಣು ಮತ್ತು ಶುದ್ಧ ಗಾಳಿ ಸಿಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ರಕ್ಷಣೆಯ ಸಂದೇಶ ಸಾರುವ ರಾಯಭಾರಿಯಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜುಗಳ ಎಸ್ಟೇಟ್ ಅಧಿಕಾರಿ ಹಾಗೂ ವಿದ್ಯಾರ್ಥಿ ಕ್ಷೇಮಾಧಿಕಾರಿ ಕೆ.ಎನ್. ಮಂಜುನಾಥ್ ಮಾತನಾಡಿ, ಸಹ್ಯಾದ್ರಿ ವನದ ಮಹತ್ವದ ಬಗ್ಗೆ ವಿವರಿಸಿದರು. “ಸಹ್ಯಾದ್ರಿ ವನವು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರಿಸರ ಶಿಕ್ಷಣದ ಕೇಂದ್ರವಾಗಿದೆ. ಇಲ್ಲಿ ನೆಡುವ ಪ್ರತಿ ಗಿಡವೂ ಮುಂದಿನ ಪೀಳಿಗೆಗೆ ಆಸ್ತಿಯಾಗಲಿದೆ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಕಾಲೇಜಿಗೆ 50ಕ್ಕೂ ಹೆಚ್ಚು ಸಸಿಗಳನ್ನು ಉಡುಗೊರೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ, ರೋಟರಿ ಕ್ಲಬ್‌ನ ಪದಾಧಿಕಾರಿಗಳಾದ,, ಶೈಲಿನ್ ಬಾಬು, ವಿಜಯಕುಮಾರ್, ಅಧ್ಯಾಪಕರುಗಳಾ ಪ್ರಹ್ಲಾದಪ್ಪ, ಡಾ.ಹಾಲಮ್ಮ, ಡಾ.ಲವ, ಬಿ.ಎಂ.ಚಂದ್ರಶೇಖರ್, ಪರಶುರಾಮ್ ಸದಸ್ಯರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
