Homeಜಿಲ್ಲೆಜಿಲ್ಲೆಯಲ್ಲಿ ಶೇ.44 ರಷ್ಟು ಮಳೆ ಕೊರತೆ: ಪ್ರಭುಲಿಂಗ ಕವಳಿಕಟ್ಟಿ

ಜಿಲ್ಲೆಯಲ್ಲಿ ಶೇ.44 ರಷ್ಟು ಮಳೆ ಕೊರತೆ: ಪ್ರಭುಲಿಂಗ ಕವಳಿಕಟ್ಟಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜು.28

ಜಿಲ್ಲೆಯಲ್ಲಿ ಈ ವರೆಗೆ ಶೇ.44ರಷ್ಟು ಮಳೆಯ ಕೊರತೆ ಎದುರಾಗಿದೆ. ಆದರೆ ವಿಶೇಷ ಪ್ಯಾಕೇಜ್ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತ ಪ್ರಮುಖ ಬೆಳೆಯಾಗಿದೆ. ಕೃಷಿ ಚಟುವಟಿಕೆಯಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ.28ರಷ್ಟು ಬಿತ್ತನೆಯಾಗಿದೆ. ಆಗಸ್ಟ್ ಅಂತ್ಯದವರೆಗೆ ಬಿತ್ತನೆಗೆ ಅವಕಾಶ ಇರುವುದರಿಂದ ಹಾಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ ರೈತರು ಆತಂಕಗೊಳ್ಳುವುದು ಬೇಡ. ನಿರಂತರವಾಗಿ ಮಳೆಯಾಗದಿದ್ದರೂ ಆಗಾಗ ಮಳೆಯಾಗುತ್ತಿರುವುದರಿಂದ ಇನ್ನು ಮುಂದೆ ಮಳೆ ಬಂದರೂ ಆಶಾವಾದ ಇದೆ. ಜುಲೈ 25ರಂದು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರು ವಿಭಾಗದ ಜಿಲ್ಲಾಧಿಕಾರಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆದು, ಮಳೆ, ಬರ ಕುರಿತು ಚರ್ಚಿಸಿದ್ದಾರೆ. ಅವರಿಗೆ ಜಿಲ್ಲೆಯ ವಿದ್ಯಾಮಾನವನ್ನು ತಿಳಿಸಲಾಗಿದೆ ಎಂದರು.

ಮಳೆ ಅಭಾವದ ಕಾರಣ ಮೆಕ್ಕೆಜೋಳ ಸರಿಯಾಗಿ ಮೊಳಕೆ ಬಂದಿಲ್ಲ. ಆದರೂ ಆ ಮಟ್ಟಿಗೆ ಬೆಳೆಹಾನಿಯಾಗಿಲ್ಲ. ಶಿಕಾರಿಪುರ, ಸೊರಬ ತಾಲ್ಲೂಕುಗಳಿಗೆ ಭೇಟಿನೀಡಿ, ಮಳೆ, ಬೆಳೆಯ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದೇನೆ. ಮಳೆಯ ಅಭಾವದಿಂದ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದ ಅವರು, ರಸಗೊಬ್ಬರದ ದಾಸ್ತಾನು ಸಾಕಷ್ಟಿದೆ. ರೈತರಿಗೆ ಮುಂಗಾರಿನ ಕೃಷಿಗೆ ರಸಗೊಬ್ಬರದ ಕೊರತೆ ಆಗುವುದಿಲ್ಲ ಎಂದರು.

ಜಿಲ್ಲೆಯಲ್ಲಿ 280 ಮಳೆಮಾಪನಗಳಿದ್ದು ಅವುಗಳಲ್ಲಿ 208 ಮಳೆಮಾಪನಗಳು ಕಾರ್ಯನಿರ್ವಹಿಸುತ್ತಿಲ್ಲ. ಕೇವಲ 72 ಮಾತ್ರ ಕೆಲಸ ನಿರ್ವಹಿಸುತ್ತಿವೆ. 185 ಮಳೆಮಾಪನಗಳನ್ನು ಸರಿಪಡಿಸಬೇಕಾಗಿದೆ. ಮಳೆಮಾಪನ ತಪ್ಪಾಗಿ ದಾಖಲಾಗಿದ್ದರಿಂದ ರೈತರಿಗೆ ತೊಂದರೆಯಾಗಿದೆ. ವಿಮಾ ಕಂಪನಿಗಳ ಜೊತೆ ಪರಿಹಾರ ಕಾರ್ಯಕ್ಕೆ ಮಾತುಕತೆ ನಡೆಸಲಾಗಿದೆ. ಶೇ.33ಕ್ಕೂ ಹೆಚ್ಚಿನ ಭೂಪ್ರದೇಶದ ಜನರಿಗೆ ಬೆಳೆಹಾನಿ ವಿಮೆ ನೀಡಬೇಕಾಗಿದೆ ಎಂದ ಅವರು, ಹೆಕ್ಟೇರ್‌ಗೆ 22,500 ರೂಪಾಯಿ ಪರಿಹಾರ ನೀಡಲು ನಿಯಮದಲ್ಲಿ ಅವಕಾಶವಿದೆ. ಬೆಳೆವಿಮೆ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಜಿಲ್ಲೆಯಲ್ಲಿ 37 ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಅಲ್ಲಿ ಕೊಳವೆಬಾವಿಗಳ ಮೂಲಕ ಬಾಡಿಗೆ ಆಧಾರದ ಮೇಲೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಭಿಷೇಕ್ ವಿ. ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments