ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.30
ಲೇಖಕರು ಮತ್ತು ಪತ್ರಿಕೆಗಳು ಕೇವಲ ಸುದ್ದಿಗಳನ್ನು ನೀಡುವುದಕ್ಕಷ್ಟೇ ಸೀಮಿತವಾಗದೆ, ಅನ್ಯಾಯದ ವಿರುದ್ಧ ಕಂಟಕವಾಗಿ ನಿಂತು ಸರ್ಕಾರದ ನೀತಿಗಳನ್ನು ಜನಸಾಮಾನ್ಯರ ಹಾಗೂ ರೈತರ ಪರವಾಗಿ ಬದಲಾಯಿಸುವ ಮಹತ್ತರ ಶಕ್ತಿಯಾಗಿ ಕೆಲಸ ಮಾಡಿವೆ ಎಂದು ತಹಶೀಲ್ದಾರ್ ಭರತ್ ರಾಜ್ ಅಭಿಪ್ರಾಯಿಸಿದರು.
ಅವರು ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೊಸನಗರ ತಾಲ್ಲೂಕು ಶಾಖೆ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಮನಿಸಿ: 37 ವರ್ಷ ತಲೆ ಮರೆಸಿಕೊಂಡಿದ್ದ ಆರೋಪಿ ನ್ಯಾಯಾಂಗ ಬಂಧನಕ್ಕೆ
ಪತ್ರಿಕೋದ್ಯಮವು ಸಮಾಜಕ್ಕೆ ದಾರಿದೀಪವಾಗಿದ್ದು, ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ಸ್ವಾತಂತ್ರ‍್ಯ ಸಂಗ್ರಾಮದ ಸಂದರ್ಭದಲ್ಲಿ ಲೋಕಮಾನ್ಯ ತಿಲಕರ ‘ಮರಾಠ’ ಮತ್ತು ‘ಕೇಸರಿ’ ಪತ್ರಿಕೆಗಳು ದೇಶಭಕ್ತಿಯ ಕಿಚ್ಚು ಹೆಚ್ಚಿಸಿದವು. ಆ ಕಾಲಘಟ್ಟದಲ್ಲಿ ಭಗತ್ ಸಿಂಗ್ ಅವರ ಲೇಖನಗಳು ಜನರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಿಸಿದ್ದವು ಎಂದರು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ‘ದಿ ಹಿಂದೂ’, ‘ಟೈಮ್ಸ್ ಆಫ್ ಇಂಡಿಯಾ’ದಂತಹ ಪತ್ರಿಕೆಗಳು ರಾಷ್ಟ್ರ ನಿರ್ಮಾಣ, ಕೃಷಿ, ತಂತ್ರಜ್ಞಾನ ಸಂಬಂಧಿಸಿದಂತೆ ಬರಹಗಳ ಪ್ರಕಟ ಮಾಡುತ್ತಿದ್ದವು ಹಾಗೂ ರಾಜಕೀಯದಲ್ಲಿನ ಭ್ರಷ್ಟಾಚಾರ ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾವೆ. ವಿಶೇಷವಾಗಿ 2005 ರಿಂದ 2008 ರ ಅವಧಿಯಲ್ಲಿ ರೈತರ ಆತ್ಮಹತ್ಯೆ ಕುರಿತು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅವರು ‘ದಿ ಹಿಂದೂ’ ನಲ್ಲಿ ಬರೆದ ಸರಣಿ ಲೇಖನಗಳ ಪ್ರಭಾವದಿಂದಾಗಿ ಸರ್ಕಾರ ರೈತರ ಸಾಲ ಮನ್ನಾ, ಸುಲಭ ಕಂತಿನ ಕೃಷಿ ಸಾಲ, ಸಬ್ಸಿಡಿ, ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತಂದಿತ್ತು ಎಂದು ನೆನಪಿಸಿಕೊಂಡರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾದ ಬಳಕೆ ಹೆಚ್ಚಾದ ಕಾರಣ ಪತ್ರಿಕೆ ಓದುಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಹಿಂದೆ 100 ಜನರಲ್ಲಿ 80 ಜನರು ದಿನಪತ್ರಿಕೆ ಓದುತ್ತಿದ್ದರು. ಆದರೆ ಈಗ ವ್ಯಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ ನಿಂದಾಗಿ ಆ ಸಂಖ್ಯೆ 30 ರಿಂದ 40ಕ್ಕೆ ಇಳಿದಿದೆ. ಆದರೆ ಸೋಶಿಯಲ್ ಮೀಡಿಯಾದ ಲಾಭವೆಂದರೆ ಯಾವುದೇ ಘಟನೆ ನಡೆದ ಅರ್ಧ ಗಂಟೆಯಲ್ಲೇ ತಕ್ಷಣದ ಅಪ್‌ಡೇಟ್‌ಗಳು ಜನರಿಗೆ ತಲುಪುತ್ತವೆ ಎಂದರು.
ಕಾಲ ಬದಲಾದಂತೆ ಪತ್ರಿಕಾರಂಗ ಮತ್ತು ಮಾಧ್ಯಮಗಳು ಕೂಡ ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿವೆ. ಆದರೆ ಎಷ್ಟೇ ಬದಲಾವಣೆಗಳಾದರೂ ಪತ್ರಿಕೋದ್ಯಮದ ಮೂಲ ಉದ್ದೇಶ ಮತ್ತು ಪ್ರಾಮುಖ್ಯತೆ ಮಾತ್ರ ಬದಲಾಗುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಉತ್ತಮ ಕಾರ್ಯಕ್ರಮ ಆಯೋಜಿಸಿದ ಸಂಘದ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿ ಸನ್ಮಾನಗೊಳ್ಳುತ್ತಿರುವ ಸಾಧಕರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ನಾ ರವಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸಂಘ ರಾಜ್ಯ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಹುಚ್ರಾಯಪ್ಪ, ಟಿ.ಸತ್ಯನಾರಾಯಣಪ್ಪ, ಜಿಲ್ಲಾ ಸಮಿತಿ ನಿರ್ದೇಶಕ ರವಿ ಬಿದನೂರು, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಚಿದಾನಂದ, ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಶ್ವಿನಿ ಪಂಡಿತ್ ಹಾಗೂ ಸಂಘದ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು
