Homeಜಿಲ್ಲೆದೆಹಲಿಯಲ್ಲಿ ಕಾಲ ಕಳೆದ ಸರ್ಕಾರ-ಇಲ್ಲಿ ರೈತರ ಬದುಕು ಅಯೋಮಯ

ದೆಹಲಿಯಲ್ಲಿ ಕಾಲ ಕಳೆದ ಸರ್ಕಾರ-ಇಲ್ಲಿ ರೈತರ ಬದುಕು ಅಯೋಮಯ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.30

ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ. ಇಲ್ಲಿ ರೈತರ ಬದುಕು ಅಯೋ ಮಯವಾಗಿದೆ. ಆದರೆ ಸರ್ಕಾರ ಮಂತ್ರಿಮಂಡಲ ವಿಸ್ತರಣೆಯ ನೆಪದಲ್ಲಿ ಅಧಿಕಾರಕ್ಕಾಗಿ ಹೋರಾಟ ಮಾಡುತ್ತಾ ದೆಹಲಿಗೆ ಹೋಗಿ ಕಾಲ ಕಳೆಯುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.

ಗುರುವಾರ ಇವರ ನೇತೃತ್ವದ ಆರು ಜನದ ತಂಡ ಭದ್ರಾವತಿಯ ಮತ್ತು ಶಿವಮೊಗ್ಗ ಗ್ರಾಮಾಂತರದ ಹಲವು ಭಾಗಗಳಿಗೆ ಭೇಟಿ ನೀಡಿ, ಸ್ವತಃ ವೀಕ್ಷಣೆ ಮಾಡಿ ರೈತರ ಸಂಕಷ್ಟಗಳನ್ನು ಆಲಿಸಿ ನಂತರ ಮಾಧ್ಯಮಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಶೇ.50ಕ್ಕಿಂತ ಹೆಚ್ಚು ಭಾಗಗಳು ಬರ ಪೀಡಿತ ಜಿಲ್ಲೆಗಳಾಗಿವೆ. ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ನಾಶವಾಗಿದೆ. ಜಾನುವಾರುಗಳಿಗೆ ಮೇವಿಲ್ಲದೆ, ಕುಡಿಯುವ ನೀರಿಲ್ಲದೆ ರೈತರು ಮಾರಾಟ ಮಾಡಲು ಹೊರಟಿದ್ದು, ಜಾನುವಾರುಗಳು ಕಟುಕರ ಪಾಲಾಗುತ್ತಿವೆ.

ಗಮನಿಸಿ: ಸರ್ಕಾರದ ನೀತಿಗಳನ್ನು ಬದಲಿಸುವ ಕೆಲಸ ಪತ್ರಿಕೆಗಳು ಮಾಡಿವೆ: ಭರತ್ ರಾಜ್

ಹಾಸನ ಜಿಲ್ಲೆಗೆ ಭೇಟಿ ನೀಡಿದಾಗ ಅಲ್ಲಿನ ರೈತರು ಆಲುಗಡ್ಡೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಮುಸುಕಿನ ಜೋಳ ಬೆಳೆಯುತ್ತಿದ್ದರು. ಅದಕ್ಕೆ ಮಳೆ ಕೊರತೆಯಿಂದ ಬಿಳಿಸುಳಿ ರೋಗ ಬಂದು ಸಂಪೂರ್ಣ ನಷ್ಟವಾಗಿದೆ. ಇಂದು ಶಿವಮೊಗ್ಗದಲ್ಲಿ ಸಮೀಕ್ಷೆ ಮಾಡಿದಾಗ ಇಲ್ಲಿ ಮೆಕ್ಕೆಜೋಳ ಆರಂಭದಲ್ಲೇ ಸಂಪೂರ್ಣ ನಾಶವಾಗಿದ್ದು, ರೈತರು ಅದನ್ನು ನೆಲಸಮ ಮಾಡಿ ಮುಂದಿನ ಪರ್ಯಾಯ ಬೆಳೆಗೆ ಕಾಯುತ್ತಿದ್ದಾರೆ. ರೈತರ ಶ್ರಮ, ಬೀಜ, ಗೊಬ್ಬರ ಎಲ್ಲವೂ ವ್ಯರ್ಥವಾಗಿದೆ. ಹತಾಶ ಸ್ಥಿತಿಯಲ್ಲಿದ್ದಾರೆ. ಕೇವಲ 37% ಮಾತ್ರ ಬೆಳೆ ಹಾಕಿದ್ದು ಅದು ಶೇ.60ರಷ್ಟು ನಾಶವಾಗಿದೆ. ನೀರಿನ ಅಭಾವದಿಂದ ನಾಟಿ ಇನ್ನೂ ಪ್ರಾರಂಭವಾಗಿಲ್ಲ.

ಪ್ರತಿ ಭಾರೀ 50 ಕೋಟಿ ಮೀನುಮರಿಯನ್ನು ಸಾಕುತ್ತಿದ್ದರು. ಅದರಿಂದ ಆರ್ಥಿಕ ಲಾಭ ಮತ್ತು ಉದ್ಯೋಗ ಸೃಷ್ಟಿಯಾಗಿತ್ತು. ಈ ಭಾರಿ ಕೇವಲ 10 ಕೋಟಿ ಮೀನುಮರಿ ಸಾಕಣೆಯಾಗಿದ್ದು, ಅದನ್ನೂ ಸರ್ಕಾರ ಖರೀದಿಸಿಲ್ಲ. ಮೀನು ಸಾಕಾಣಿಕೆದಾರರು ಆರ್ಥಿಕ ನಷ್ಟ ಅನುಭವಿಸಿದ್ದಾರೆ.

ಈ ನಡುವೆ ಭದ್ರಾ ಡ್ಯಾಂನಲ್ಲಿ 64 ಟಿಎಂಸಿ ನೀರು ಸಂಗ್ರಹ ಇರಬೇಕಾಗಿತ್ತು. ಕೇವಲ 30 ಟಿಎಂಸಿ ನೀರು ಇದ್ದು, ಈ ಭಾಗದ ಕಾಲುವೆಗಳಿಗೆ ನೀರು ಹರಿಸದೇ ಇರುವ ಕಾರಣ ಭದ್ರಾ ಮೇಲ್ದಂಡೆ ಹಾಗೂ ಈ ಪ್ರದೇಶದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಅಜ್ಜಂಪುರ ಭಾಗದಲ್ಲಿ ಕುಡಿಯುವ ನೀರಿಗೆ ಕೊರತೆಯಾಗಿದೆ. ಅಂತರ್ಜಲ ಬತ್ತಿ ಹೋಗಿದೆ. ಮೋದಿ ಸರ್ಕಾರ ಹವಾಮಾನಾಧಾರಿತ ಇನ್ಸೂರೆನ್ಸ್ ಆರಂಭ ಮಾಡಿದ್ದರಿಂದ ಕಂತು ಕಟ್ಟಿದ ರೈತರಿಗೆ ಸ್ವಲ್ಪಮಟ್ಟಿಗೆ ಪರಿಹಾರ ಬಂದಿದೆ. ಆದರೆ ಮಳೆಮಾಪನವನ್ನು ರಿಪೇರಿ ಮಾಡದೇ ಇರುವುದರಿಂದ ರೈತರಿಗೆ ನಷ್ಟವಾಗಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತಳೆದಿದ್ದಾರೆ. ಅಧಿಕಾರಿಗಳು, ಮಂತ್ರಿಗಳು ಫೀಲ್ಡಿಗೆ ಹೋಗುತ್ತಿಲ್ಲ. ಸಾಲ ಮನ್ನಾ ಮಾಡಬೇಕು, ಬೆಳೆ ಪರಿಹಾರ ನೀಡಬೇಕು, ನಷ್ಟ ಭರಿಸಿಕೊಡಬೇಕು ಎಂದು ಎಲ್ಲಾ ರೈತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಆದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.

ಕಾವೇರಿ ಕೊಳ್ಳದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಈ ನಡುವೆ ಸಿಡಬ್ಲ್ಯೂಆರ್ ಸಿ  ಪ್ರತಿನಿತ್ಯ 3,500 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿದೆ. ಕದ್ದುಮುಚ್ಚಿ ನೀರು ಬಿಡುತ್ತಿದ್ದಾರೆ. ಅದಕ್ಕಾಗಿಯೇ ಆರು ತಂಡಗಳನ್ನು ರಚನೆ ಮಾಡಿ, ಬಿಜೆಪಿ ಇಡೀ ರಾಜ್ಯದಾದ್ಯಂತ ರೈತರ ಬಳಿಗೆ ತೆರಳಿ ರೈತರಿಗೆ ಧೈರ್ಯ ತುಂಬಿ, ಸರ್ಕಾರಕ್ಕೆ ಸಂಪೂರ್ಣ ವರದಿ ನೀಡಿ ಶಾಸನ ಸಭೆಯಲ್ಲಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ ಎಂದರು.

ಭದ್ರಾವತಿ ತಾಲ್ಲೂಕಿನ ತ್ಯಾಜ್ಯವಳ್ಳಿ, ಚಾಮೇನಹಳ್ಳಿ, ಹತ್ತಿಕಟ್ಟಿ ಹಾಗೂ ಭದ್ರಾ ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ, ರೈತರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಈ ತಂಡ ಸಮಾಲೋಚನೆ ನಡೆಸಿ ವಾಸ್ತವ ಸ್ಥಿತಿಯನ್ನು ಕಣ್ಣಾರೆ ನೋಡಿದೆ. ಸರ್ಕಾರಕ್ಕೆ ವರದಿ ನೀಡಲಿದೆ ಎಂದರು.

ಈ ಬರಪೀಡಿತ ಪ್ರದೇಶಗಳ ಭೇಟಿನೀಡಿದ ತಂಡದಲ್ಲಿ ಶಾಸಕರಾದ ಸುನೀಲ್‌ಕುಮಾರ್, ಡಿ.ಎಸ್.ಅರುಣ್, ಗುರುರಾಜ್ ಘಂಟಿಹೊಳಿ, ಎಸ್.ಎನ್.ಚನ್ನಬಸಪ್ಪ, ಪ್ರಮುಖರಾದ ಎನ್.ಕೆ.ಜಗದೀಶ್, ಹರಿಕೃಷ್ಣ, ಗಣೇಶ್ ಬಿಳಕಿ ಸೇರಿದಂತೆ ಬಿಜೆಪಿಯ ಹಲವು ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments