Homeಜಿಲ್ಲೆಕಾಂಗ್ರೆಸ್‌ನಲ್ಲಿ ಕಡೆಗಣನೆ: ಅಲ್ಪಸಂಖ್ಯಾತರ ಆರೋಪ - ಪಕ್ಷ ಬೆಂಬಲಿಗರಿಗೆ ಅವಕಾಶ ಸಿಗಲಿ: ಆಯನೂರು ಮಂಜುನಾಥ್

ಕಾಂಗ್ರೆಸ್‌ನಲ್ಲಿ ಕಡೆಗಣನೆ: ಅಲ್ಪಸಂಖ್ಯಾತರ ಆರೋಪ – ಪಕ್ಷ ಬೆಂಬಲಿಗರಿಗೆ ಅವಕಾಶ ಸಿಗಲಿ: ಆಯನೂರು ಮಂಜುನಾಥ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.28

ಸ್ಥಳೀಯ ಪ್ರಾಧಿಕಾರ ಮತ್ತು ನಿಗಮ ಮಂಡಳಿಗಳಲ್ಲಿ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡುವಂತೆ ಅಲ್ಪಸಂಖ್ಯಾತ ಸಮುದಾಯಗಳು ಬಹಿರಂಗವಾಗಿ ಆಗ್ರಹಿಸಿವೆ.

ಮಾಜಿ ಸಂಸದ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೇಸ್ ನಲ್ಲಿನ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಮುಖಂಡರುಗಳು ಕಾಂಗ್ರೆಸ್ ಚುನಾವಣೆಯಲ್ಲಿ ಮಾತ್ರ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುತ್ತಿದ್ದು, ಯಾವುದೇ ಸ್ಥಾನ ಮಾನ ಕೊಡದೆ ಕಡೆಗಣಿಸಿದೆ ಎಂದು ಅಳಲು ತೋಡಿಕೊಂಡರು.

ಆಯನೂರು ಮಂಜುನಾಥ್ ಅವರು ಮಾತನಾಡಿ, ಶಿವಮೊಗ್ಗ-ಭದ್ರಾವತಿ ನಗರಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಿವಮೊಗ್ಗ ವಿಧಾನ ಸಭಾ ಕ್ಷೇತ್ರವೊಂದರಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಸುಮಾರು 82 ಲಕ್ಷ ಮತದಾರರಿದ್ದಾರೆ. ಅವರುಗಳು ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಂದರ್ಭದಲ್ಲೂ ಬೆಂಬಲವಾಗಿ ನಿಂತಿದ್ದಾರೆ. ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲ. ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ನೋವಿದೆ. ತಮ್ಮ ಪರವಾಗಿ ನಿಂತು ಸರ್ಕಾರ ಮತ್ತು ಪಕ್ಷದ ನಾಯಕರ ಗಮನ ಸೆಳೆಯಬೇಕು ಎಂದು ಅಲ್ಪಸಂಖ್ಯಾತರು ಮಾಡಿಕೊಂಡ ಮನವಿ ಮೇರೆಗೆ ನಾನು ಮಾತನಾಡುತ್ತಿದ್ದೇನೆ ಎಂದರು.

ಚುನಾವಣೆ ಸಂದರ್ಭದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ಒಬ್ಬರಿಗೆ ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ದಿಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದರು. ಆದರೆ ಸರ್ಕಾರ ಬಂದು ಮೂರುವರೆ ವರ್ಷ ಕಳೆದ ಇದೀಗ ಹೊಸ ಮುಖ್ಯಮಂತ್ರಿಗಳು ಬಂದಿದ್ದಾರೆ. ಈ ಸಂದರ್ಭದಲ್ಲಾದರೂ ಕೊಟ್ಟ ಮಾತು ಈಡೇರಿಸಬೇಕು ಎಂಬುದ ಅಲ್ಪಸಂಖ್ಯಾತರ ಒತ್ತಾಯವಾಗಿದೆ. ಶಿವಮೊಗ್ಗ-ಭದ್ರಾವತಿಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಗೆ ಬೆನ್ನೆಲುಬಾಗಿ ನಿಂತಿದ್ದು ಅವರ ಬೇಡಿಕೆ ನ್ಯಾಯ ಸಮ್ಮತವಾಗಿ ಇದಕ್ಕೆ ನನ್ನ ಬೆಂಬಲವೂ ಇದೆ ಎಂದರು.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಶೇಕಡಾ 100 ರಷ್ಟು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿಕೊAಡು ಬಂದಿದ್ದಾರೆ. ಜಿಲ್ಲೆಯಲ್ಲಿ ಈ ಎರಡು ಸಮುದಾಯಗಳ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು, ಅವರಿಗೆ ನಗರಾಭಿವೃದ್ದಿ ಪ್ರಾಧಿಕಾರ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ, ಮಲೆನಾಡು ಪ್ರದೇಶಾಭಿವೃದ್ದಿಮಂಡಳಿ ಮತ್ತು ಮುಸ್ಲಿಂರಿಗೆ ಮೀಸಲಾಗಿರುವ ವಕ್ಫ್ ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದ ಆಯನೂರು ಮಂಜುನಾಥ್ ಅವರು ಶ್ರೀಮತಿ ಬಲ್ಕೀಶ್ ಬಾನು ಅವರನ್ನು ಎಂಎಲ್ ಸಿ ಮಾಡಿರುವುದು ಇಡೀ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯ ಎನ್ನುವಂತಿಲ್ಲ. ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಹೀಗೆ ಎಲ್ಲಾ ಸಮುದಾಯಗಳಿಗೂ ಕೊಟ್ಟಿರುವ ಅವಕಾಶ ಅಷ್ಟೇ. ಅದನ್ನು ಮುಸ್ಲಿಂ ಪ್ರಾತಿನಿಧ್ಯ ಎನ್ನುವಂತಿಲ್ಲ. ಸ್ಥಳಿಯವಾಗಿ ಅಲ್ಪಸಂಖ್ಯಾತರಿಗೆ ಅವಕಾಶಗಳನ್ನು ನೀಡುವುದು ಮುಖ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಸ್ಥಳೀಯ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಆಗಿರುವ ಅನ್ಯಾಯವನ್ನು ನಾನು ಖುದ್ದಾಗಿ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್. ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರುಗಳನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರನ್ನು ಬಿಟ್ಟು ಚುನಾವಣೆಗಳನ್ನು ನಡೆಸುವುದು ಸಾಧ್ಯವಿಲ್ಲ. ಪಕ್ಷ ಸಂಘಟನೆ ಕಷ್ಟವಾಗಲಿದೆ, ಜಿಲ್ಲೆಯಲ್ಲಿ ರಾಜಕೀಯದ ಪರಿಸ್ಥಿತಿಯನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತೇನೆ. ಅಲ್ಪಸಂಖ್ಯಾತರ ಪರ ನಿಲ್ಲುತ್ತೇನೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮುಕ್ತಿಯಾರ್ ಆಹ್ಮದ್, ಜಫ್ರುಲ್ಲಾ, ಕಿರಣ್ ಫರ್ನಾಂಡೀಸ್ , ಮರಿಯಪ್ಪ, ರಿಯಾಜ್ ಆಹಮದ್, ಎಲಿಜಬಿತ್ ರೋಡ್ರಿಸ್, ಫಾಸ್ಟರ್ ಹರೀಶ್, ಲಾರೆನ್ಸ್ ಡಿಸೋಜ, ಮಹಮ್ಮದ್ ಷರೀಪ್, ಸಂಧ್ಯಾರಾಣಿ, ಸೆಲ್ವ ಮಾರ್ಟೀಸ್ ಮತ್ತಿತರರು ಉಪಸ್ಥಿತರಿದ್ದರು.

“ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ವ್ಯಕ್ತಿಗತ ನಾಯಕರ ಬೆಂಬಲಿಗರಿಗೆ ಸ್ಥಾನಮಾನ ಸಿಗುತ್ತಿವೆ. ಅಲ್ಪಸಂಖ್ಯಾತರು ಪಕ್ಷದ ಬೆಂಬಲಿಗರು. ವ್ಯಕ್ತಿಗತ ನಾಯಕರ ಬೆಂಬಲಿಗರಿಗೆ ಅವಕಾಶ ನೀಡದ ಪಕ್ಷದ ಬೆಂಬಲಿಗರಾಗಿ ಪಕ್ಷದ ಶಕ್ತಿಯಾಗಿರುವವರಿಗೆ ಅವಕಾಶ ಕಲ್ಪಿಸಬೇಕು.”
-ಆಯನೂರುಮಂಜುನಾಥ್

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments