ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.2
ನಗರದ ನೈಜ ಸೇವಾ ಸಂಸ್ಥೆಗಳ ಹಿತದೃಷ್ಟಿಯಿಂದ ಸಿ.ಎ. (ಸಿವಿಕ್ ಅಮೆನಿಟಿ) ನಿವೇಶನಗಳ ನವೀಕರಣ ಶುಲ್ಕ ಹಾಗೂ ಬಿಗಿಯಾದ ನಿಯಮಗಳ ಸರಳೀಕರಣಕ್ಕೆ ಒತ್ತಾಯಿಸಿ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್ ಹಾಗೂ ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಬುಧವಾರ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.
30 ವರ್ಷಗಳ ಗುತ್ತಿಗೆ ಅವಧಿ ಮುಗಿದ ನಂತರ ಸಿ.ಎ. ನಿವೇಶನಗಳ ನವೀಕರಣ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸದೆ, ಸರಳೀಕೃತ ನಿಯಮಗಳನ್ನು ಜಾರಿಗೆ ತರಬೇಕು. ನವೀಕರಣದಲ್ಲಿ ನಿಯಮ ಉಲ್ಲಂಘಿಸುವ ಅಥವಾ ದುರುಪಯೋಗಪಡಿಸಿಕೊಳ್ಳುವ ಸಂಸ್ಥೆಗಳ ವಿರುದ್ಧ ಮಾತ್ರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನೈಜವಾಗಿ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ತೊಂದರೆ ನೀಡಬಾರದು.
ಗಮನಿಸಿ: ಸ್ವಂತ ಸಾಧನೆ ಇಲ್ಲ, ಅಪ್ಪನ ಹೆಸರಿನಿಂದ ಸಚಿವರಾಗಿದ್ದಿರಾ: ಸಿದ್ರಾಮಣ್ಣ
ಕಟ್ಟಡ ನಿರ್ಮಾಣಕ್ಕೆ ನಿಗದಿಪಡಿಸಿರುವ 3 ವರ್ಷಗಳ ಗಡುವನ್ನು ಪ್ರಸ್ತುತ ಸ್ಥಿತಿಗತಿಗಳನ್ನು ಆಧರಿಸಿ ಸೂಕ್ತವಾಗಿ ವಿಸ್ತರಿಸಬೇಕು. ಲಾಭ ರಹಿತ, ಶೈಕ್ಷಣಿಕ, ಕ್ರೀಡೆ ಮತ್ತು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ನೈಜ ಸಂಸ್ಥೆಗಳಿಗೆ ಕಡಿಮೆ ನವೀಕರಣ ಶುಲ್ಕ ಹಾಗೂ ಸಬ್ಸಿಡಿ ದರದಲ್ಲಿ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು.
ನಿವೇಶನ ನವೀಕರಣ ಸೇರಿದಂತೆ ಇನ್ನೂ ಹಲವು ಪ್ರಮುಖ ಸಮಸ್ಯೆಗಳನ್ನು ಹಾಗೂ ಸಲಹೆಗಳನ್ನು ಸಚಿವರ ಗಮನಕ್ಕೆ ತರಲಾಗಿದ್ದು, ಶಾಸಕರ ಪ್ರಸ್ತಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಇಲಾಖಾ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸಾರ್ವಜನಿಕ ಮತ್ತು ನೈಜ ಸಂಸ್ಥೆಗಳ ಹಿತರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
