ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.22
ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯಲ್ಲಿರುವ ತೀವ್ರ ಲೋಪದೋಷಗಳು ಕಂಡುಬರುತ್ತಿದ್ದು, ಮಲೆನಾಡಿನ 20,668 ಚ.ಕಿ.ಮೀ ವ್ಯಾಪ್ತಿಯ 1,576 ಹಳ್ಳಿಗಳ ಲಕ್ಷಾಂತರ ಕೃಷಿಕರು, ಸಾಗುವಳಿದಾರರು ಹಾಗೂ ಗ್ರಾಮೀಣ ಜನರ ಹಕ್ಕುಪತ್ರ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಎಂಎಲ್ಸಿ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್.ಅರುಣ್ ಒತ್ತಾಯಿಸಿದರು.
ಅವರು ಕಸ್ತೂರಿ ರಂಗನ್ ವರದಿ ಹಾಗೂ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ಕುರಿತು ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ವರದಿ ಜಾರಿಯಾಗುವುದರಿಂದ ಉಂಟಾಗುವ ಸಮಸ್ಯೆಗಳನ್ನು ಅಂಕಿ-ಅಂಶಗಳ ಸಹಿತ ಮಂಡಿಸಿದ್ದು, ಇದರ ವರದಿ ಸಂಬಂಧಪಟ್ಟಂತಹ ಪ್ರಮುಖ ತಾಂತ್ರಿಕ ಹಾಗೂ ವಾಸ್ತವಿಕ ಬೇಡಿಕೆಗಳು ಸಹ ಸಭೆಯ ಮುಂದಿಟ್ಟರು.
ಪ್ರಸ್ತುತ ಕರಡಿನಲ್ಲಿ ‘ಬಫರ್ ಝೋನ್’ ಬಗ್ಗೆ ಯಾವುದೇ ನಿಖರತೆ ಇಲ್ಲದಿರುವುದರಿಂದ ಕೃಷಿ ಭೂಮಿ ಅನಗತ್ಯವಾಗಿ ಅರಣ್ಯ ನಿಯಂತ್ರಣಕ್ಕೆ ಸಿಲುಕುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಖಾಸಗಿ ಕೃಷಿ ಭೂಮಿಯ ನಡುವೆ 1 ಎಕರೆ ನಿಯಂತ್ರಿತ ಬಫರ್ ಝೋನ್” ಎಂಬ ನಿರ್ದಿಷ್ಟ ತಾಂತ್ರಿಕ ಚೌಕಟ್ಟನ್ನು ತಕ್ಷಣವೇ ನಿಗದಿಪಡಿಸಬೇಕು.
ಉಪಗ್ರಹ ತಂತ್ರಜ್ಞಾನ, ಡ್ರೋನ್ ಸರ್ವೆ ಹಾಗೂ ಕಂದಾಯ-ಅರಣ್ಯ ಇಲಾಖೆಗಳ ಜಂಟಿ ಕ್ಷೇತ್ರ ಪರಿಶೀಲನೆಯ ಮೂಲಕ ಅರಣ್ಯ, ಕಂದಾಯ ಮತ್ತು ಜನವಸತಿ ವಲಯಗಳ ನಡುವೆ ಸ್ಪಷ್ಟ ಭೌಗೋಳಿಕ ಗಡಿರೇಖೆಯನ್ನು ಅಂತಿಮಗೊಳಿಸಬೇಕು. ಪ್ರಸ್ತುತ ಇರುವ ಸ್ಥಿತಿಯನ್ನು ಆಧರಿಸಿ ‘ಫ್ರೀಜ್’ ಮಾಡಿ ಜನಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಕೇರಳ ಸರ್ಕಾರವು ತನ್ನ ರಾಜ್ಯದಲ್ಲಿ ಸುಮಾರು 13,000 ಚ.ಕಿ.ಮೀ ವ್ಯಾಪ್ತಿಯಲ್ಲಿ ಜನವಸತಿ ಮತ್ತು ಕೃಷಿ ಭೂಮಿಯನ್ನು ಪ್ರತ್ಯೇಕಿಸಲು ನಡೆಸಿದ ಪ್ರತ್ಯಕ್ಷ ಭೌತಿಕ ಸರ್ವೆಯ ಮಾದರಿಯನ್ನು ಕರ್ನಾಟಕದಲ್ಲೂ ಅಧ್ಯಯನ ಮಾಡಿ ಜಾರಿಗೆ ತರಬೇಕು.
ಇಂಗ್ಲಿಷ್ನಲ್ಲಿರುವ ಈ ಕರಡು ಅಧಿಸೂಚನೆಯು ಸಾಮಾನ್ಯ ರೈತರಿಗೆ ಅರ್ಥವಾಗುತ್ತಿಲ್ಲ. ಆದ್ದರಿಂದ ತಕ್ಷಣವೇ ಇದನ್ನು ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿ, ಬಾಧಿತವಾಗುವ ಶಿವಮೊಗ್ಗದ 484 ಗ್ರಾಮಗಳು ಸೇರಿದಂತೆ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ‘ವಿಶೇಷ ಗ್ರಾಮಸಭೆ’ ಕರೆದು ಸಾರ್ವಜನಿಕರ ಹಾಗೂ ರೈತರ ಅಭಿಪ್ರಾಯ ಕ್ರೋಡೀಕರಿಸಬೇಕು ಎಂದರು.
ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿನ ವಾಸ್ತವ ಪರಿಸ್ಥಿತಿ, ಮೂಲಭೂತ ಸಮಸ್ಯೆಗಳು ಹಾಗೂ ಅಲ್ಲಿನ ಪರಿಸರ ಮತ್ತು ಜನರಲ್ಲಿ ಆತಂಕಗಳ ಕುರಿತು ಪ್ರಸ್ತಾಪಿಸ ಅವರು, ಕಸ್ತೂರಿ ರಂಗನ್ ವರದಿಯನ್ವಯ ಕರ್ನಾಟಕದ 20,668 ಚ.ಕಿ.ಮೀ ಬೃಹತ್ ಪ್ರದೇಶ ಮತ್ತು 1,576ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ವಲಯಕ್ಕೆ ಸೇರುತ್ತಿವೆ. ಇದರಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅತಿ ಹೆಚ್ಚು ಭಾಗಗಳು ಸೇರಿವೆ.
ಉತ್ತರ ಕನ್ನಡದ ನಂತರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದ 484 ಗ್ರಾಮಗಳು ಹಾಗೂ ಕೃಷಿ ಭೂಮಿ ಈ ಕರಡು ವರದಿಯ ವ್ಯಾಪ್ತಿಗೆ ಬರುತ್ತವೆ. ಅರಣ್ಯ ವಿಭಾಗದ ವಿವಿಧ ವರ್ಗೀಕರಣಗಳಾದ ಮೀಸಲು ಅರಣ್ಯ, ಡೀಮ್ಡ್ ಅರಣ್ಯ, ವನ್ಯಜೀವಿ ವಲಯ ಹಾಗೂ ಮಂಗಗಳ ಕಾಟ ಮತ್ತು ಬೆಳೆ ನಷ್ಟದಿಂದ ರೈತರು ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದು, ಈ ಕರಡಿನಿಂದಾಗಿ ಅವರ ಬದುಕು ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಭೀತಿ ಎದುರಾಗಿದೆ ಎಂದು ವಿವರಿಸಿದರು.
ಮುಳುಗಡೆ ಸಂತ್ರಸ್ತರ ದಶಕಗಳ ಆತಂಕ ಹಾಗೂ ಸಾಗುವಳಿ ಚೀಟಿ/ಹಕ್ಕುಪತ್ರ:
ಲಿಂಗನಮಕ್ಕಿ ಸೇರಿದಂತೆ ವಿವಿಧ ಜಲಾಶಯಗಳ ನಿರ್ಮಾಣದಿಂದ ಸಂತ್ರಸ್ತರಾದ ಸಾವಿರಾರು ಕುಟುಂಬಗಳಿಗೆ ದಶಕಗಳು ಕಳೆದರೂ ಇನ್ನೂ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ಸಿಗದೆ ಅನಿಶ್ಚಿತತೆಯಲ್ಲಿ ದಿನ ದೂಡುತ್ತಿದ್ದಾರೆ. ವರದಿಯ ಆತಂಕದಿAದಾಗಿ ರಸ್ತೆ, ಡಾಂಬರೀಕರಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಹಾಗೂ ಸಾಗುವಳಿ ಚೀಟಿ ಹೊಂದಿರುವ ರೈತರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸರ್ಕಾರ ತಕ್ಷಣವೇ ಈ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಹಾಗೂ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು ಎಂದರು.
ಸೊಪ್ಪಿನ ಬೆಟ್ಟ ಮತ್ತು ರೈತರ ಜೀವನೋಪಾಯ:
ಮಲೆನಾಡಿನ ಅಡಿಕೆ ಹಾಗೂ ತೋಟಗಾರಿಕೆ ಕೃಷಿಗೆ ಪ್ರಮುಖ ಆಧಾರವಾಗಿರುವ ‘ಸೊಪ್ಪಿನ ಬೆಟ್ಟ’ ವ್ಯವಸ್ಥೆಯನ್ನೇ ನಂಬಿಕೊAಡಿರುವ ಸುಮಾರು 10,000 ಕುಟುಂಬಗಳ ಹಿತಾಸಕ್ತಿಯನ್ನು ಸರ್ಕಾರ ಕಡ್ಡಾಯವಾಗಿ ಕಾಯಬೇಕು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ವೈಜ್ಞಾನಿಕ ಪರಿಶೀಲನೆ:
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಸ್ಥಳೀಯವಾಗಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದ್ದು, ವಿಸ್ತೃತ ಯೋಜನಾ ವರದಿ ಇಲ್ಲದೆಯೇ ಅಪಾರ ಪ್ರಮಾಣದ ಹಣ ವೆಚ್ಚವಾಗಿರುವ ಬಗ್ಗೆಯೂ ಸರ್ಕಾರ ಗಮನಹರಿಸಬೇಕು.
ತಾಪಮಾನ ಏರಿಕೆ ಹಾಗೂ ಪರಿಸರ-ಜನಜೀವನದ ಸಮತೋಲನ:
ಇತ್ತೀಚೆಗೆ ಮಲೆನಾಡಿನಲ್ಲೂ ತಾಪಮಾನ 38ಲಿಅ ದಾಟುತ್ತಿದ್ದು, ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯನ್ನು ಕಾಪಾಡುವುದು ಅಗತ್ಯ. ಆದರೆ ಪರಿಸರ ರಕ್ಷಣೆಯ ನೆಪದಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಜನರ ದಿನನಿತ್ಯದ ಜೀವನವನ್ನು ದುಸ್ಥಿತಿಗೆ ತಳ್ಳಬಾರದು.
ಸರ್ವಪಕ್ಷ ನಿಯೋಗದಿಂದ ‘ಲೈವ್’ ಗ್ರೌಂಡ್ ರಿಪೋರ್ಟ್ :
ಪ್ರಸ್ತಾವಿತ ಪ್ರದೇಶಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸರ್ವಪಕ್ಷ ನಿಯೋಗವು ಸ್ವತಃ ಪ್ರತ್ಯಕ್ಷವಾಗಿ ಭೇಟಿ ನೀಡಿ, ವಾಸ್ತವ ಭೌಗೋಳಿಕ ಪರಿಸ್ಥಿತಿಯನ್ನು ಪರಿಶೀಲಿಸಬೇಕು.
2013ರ ಮೂಲ ಕರಡು ಅಧಿಸೂಚನೆ ಸಂಪೂರ್ಣ ತಿರಸ್ಕಾರ:
2013ರಿಂದ ಇಲ್ಲಿಯವರೆಗೆ 7 ಬಾರಿ ಕರಡು ಅಧಿಸೂಚನೆ ಬಂದಿದ್ದು, ಈ ಹಿಂದೆ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು ಪಕ್ಷಾತೀತವಾಗಿ ಇದನ್ನು ತಿರಸ್ಕರಿಸಿದ್ದವು. ಮಲೆನಾಡಿನ ನೆಲದ ವಾಸ್ತವಕ್ಕೆ ವಿರುದ್ಧವಾಗಿರುವ ಈ ಮೂಲ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರವು ಸಂಪೂರ್ಣವಾಗಿ ತಿರಸ್ಕರಿಸಬೇಕು.
ಸಂಸದರಾದ ಬಿ. ವೈ. ರಾಘವೇಂದ್ರ ಅವರ ಶ್ರಮ:
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಲೆನಾಡಿನ ರೈತರ ಹಾಗೂ ಸಾಗುವಳಿದಾರರ ಪರವಾಗಿ ಸೂಕ್ತ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
