ಶಿವಮೊಗ್ಗ,ಅ.23; ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ವಿಚಾರ ವೇದಿಕೆ ಮತ್ತು ಎಸ್ ಬಂಗಾರಪ್ಪ ಫೌಂಡೇಷನ್ ಕೊಡ ಮಾಡುವ ಬಂಗಾರ ಪ್ರಶಸ್ತಿ ಗಳ ಪ್ರದಾನ ಸಮಾರಂಭ ಆಕ್ಟೋಬರ್ 26 ರಂದು ಸೊರಬದ ಬಂಗಾರಧಾಮದಲ್ಲಿ ನಡೆಯಲಿದೆ.
2026 ನೇ ಸಾಲಿನ ಸೇವಾ ಬಂಗಾರ ಪ್ರಶಸ್ತಿಗೆ ಗಿರಿಜನ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಚಾಮರಾಜನಗರದ ಪ್ರೊ. ಜಿ ಜಯದೇವ ,ಸಾಹಿತ್ಯ ಬಂಗಾರ ಪ್ರಶಸ್ತಿಗೆ ಖ್ಯಾತ ಸಾಹಿತಿ ನಟರಾಜ ಹುಳಿಯಾರ್, ರಂಗಭೂಮಿ ಗುಲ್ಬರ್ಗಾದ ಶೇಖ ಮಾಸ್ತರ್ ಅವರನ್ನು ’ರಂಗಬಂಗಾರ’, ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಕಬ್ಬಡಿ ಕೋಚ್ ಬಿ.ಸಿ ರಮೇಶ್ ಅವರನ್ನು ’ಕ್ರೀಡಾ ಬಂಗಾರ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಇಂದು ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದ ಎಸ್ ಬಂಗಾರಪ್ಪ ವಿಚಾರ ವೇದಿಕೆಯ ಸಂಚಾಲಕರಾದ ಕೆ.ವಿ ನಾಗರಾಜ ಮೂರ್ತಿ ಅವರು , ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಎಸ್. ಬಂಗಾರಪ್ಪ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ.
ಅದರಂತೆ ಈ ವರ್ಷವೂ ಪ್ರೊ. ಜಿ ಎಸ್ ಜಯದೇವ, ನಟರಾಜ ಹುಳಿಯಾರ್, ಬಿ.ಸಿ ರಮೇಶ್, ಶೇಖಮಾಸ್ತರ ಅವರ ಸಾಧನೆಯನ್ನು ಗುರುತಿಸಿ ’ಬಂಗಾರ ಪ್ರಶಸ್ತಿ’ ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಅ. 26 ರಂದು ಸಂಜೆ 5 ಗಂಟೆಗೆ ಸೊರಬದಲ್ಲಿ ನಡೆಯಲಿರುವ ಬಂಗಾರಪ್ಪ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾರಂಭದ ಉದ್ಘಾಟನೆಯನ್ನು ಸಭಾಪತಿ ಸಲೀಮ್ ಆಹಮ್ಮದ್ ನೆರವೇರಿಸಲಿದ್ದು, ಮುಖ್ಯಅತಿಥಿಗಳಾಗಿ ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ, ಸಣ್ಣ ನೀರಾವರಿ ಸಚಿವರಾದ ಡಾ. ಅಜಯ್ ಧರ್ಮಸಿಂಗ್ ಭಾಗವಹಿಸಲಿದ್ದು, ಸಚಿವ ಮಧುಬಂಗಾರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಎದೆತುಂಬಿ ಹಾಡುವೆನು ರಸಸಂಜೆ ಕಾರ್ಯಕ್ರಮ ನಡೆಯಲಿದ್ದು, ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷರಾದ ವೇಣುಗೋಪಾಲ್ ನಾಯಕ ಉಪಸ್ಥಿತರಿರುವರು ಎಂದು ಕೆ.ವಿ ನಾಗರಾಜ ಮೂರ್ತಿಅವರು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಎನ್. ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ ಯೋಗೀಶ್, ಜಿಲ್ಲಾ ವಕ್ತಾರ ಜಿ.ಡಿ ಮಂಜುನಾಥ್ , ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ ಮತ್ತಿತರರು ಉಪಸ್ತಿತರಿದ್ದರು.
