Homeರಾಜಕೀಯಸಂವಾದವಲ್ಲ “ಪೊಲಟಿಕಲ್ ಕೌಂಟರ್”:ರೈತರ ಸಮಸ್ಯೆ ನಗಣ್ಯ-ಬಿಜೆಪಿಗರಿಗೆ ಮುಖಭಂಗ!!

ಸಂವಾದವಲ್ಲ “ಪೊಲಟಿಕಲ್ ಕೌಂಟರ್”:ರೈತರ ಸಮಸ್ಯೆ ನಗಣ್ಯ-ಬಿಜೆಪಿಗರಿಗೆ ಮುಖಭಂಗ!!

Spread the love

ಆಕಾಶ್. ಆರ್. ಎಸ್

ಕಸ್ತೂರಿ ರಂಗನ್ ವರದಿ ಕುರಿತು ಇಂದು ತೀರ್ಥಹಳ್ಳಿ ನಡೆದ ಮುಖ್ಯಮಂತ್ರಿಯೊಂದಿಗಿನ ಸಂವಾದದ ವೇದಿಕೆಯು ಸಂಪೂರ್ಣವಾಗಿ “ಪೊಲಟಿಕಲ್ ಕೌಂಟರ್” ವೇದಿಕೆಯಾಗಿ ಮಾರ್ಪಟ್ಟಿದ್ದು, ಇವುಗಳ ಮಧ್ಯೆ ಅಲ್ಲಿನ ರೈತರ ಸಮಸ್ಯೆಗಳು ನಗಣ್ಯವಾಗಿ ಹೋದವು.

ಮಲೆನಾಡಿನ ಜನರು ಕಸ್ತೂರಿ ರಂಗನ್ ವರದಿ ಜಾರಿಯಾಗುತ್ತದೆ ಎಂಬ ಆತಂಕದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಪರಿಸರವಾದಿಗಳು, ಸಾಮಾಜಿಕ ಚಿಂತಕರು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರು ಕೂಡ ಹಲವು ದಿನಗಳಿಂದ ಪತ್ರಿಕಾಗೋಷ್ಠಿ ನಡೆಸಿ ಇದರಿಂದಾಗುವ ಅನಾನುಕೂಲಗಳ ಬಗ್ಗೆ ತಿಳಿಸುತ್ತಿದ್ದರು. ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಬಿಜೆಪಿಯವರು ಈ ವಿಚಾರವಾಗಿ ಕೆಸರೆರಚಾಟವನ್ನು ಕೂಡ ಆರಂಭಿಸಿದ್ದರು.

ಆದರೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ತೀರ್ಥಹಳ್ಳಿಯಲ್ಲಿ ಹಾಗೂ ಈಸೂರಿನಿಂದ ಶಿಕಾರಿಪುರದವರೆಗೆ ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು. ಈ ವೇಳೆ ಕಾಂಗ್ರೆಸ್ ನೊಳಗಿನ ಬಣ ರಾಜಕೀಯವು ಬೆಳಕಿಗೆ ಬಂತು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡರು ಹಾಗೂ ಅವರ ಬಳಗ ಗೈರು ಕಾಂಗ್ರೆಸ್ ಗೆ ಮುಜುಗರವು ಉಂಟು ಮಾಡಿತ್ತು.

ಗಮನಿಸಿ: ಭಾವನೆಗಳ ಮೇಲೆ ರಾಜಕಾರಣ ಮಾಡಲ್ಲ: ಚೆನ್ನಿಗೆ ಡಿಕೆ ಗುನ್ನ

ಇತ್ತ ಬಿಜೆಪಿಯೂ ಕೂಡ ಶುಕ್ರವಾರ ಶಿಕಾರಿಪುರದಲ್ಲಿ ರೈತರ ಸಮಸ್ಯೆ ಕುರಿತಾಗಿ ಸಭೆ ಮಾಡಿದ್ದರು. ಅದರೆ ರೈತರ ಸಮಸ್ಯೆ ಎಷ್ಟರ ಮಟ್ಟಿಗೆ ಕೇಳಿದ್ದಾರೆ ಎನ್ನುವುದು ಅವರವರ ಆತ್ಮಸಾಕ್ಷಿಗೆ ಬಿಡೊಣ. ಆದರೆ ಇವತ್ತು ರೂಪಗೊಂಡ “ ಪೊಲಿಟಕಲ್ ಕೌಂಟರ್”  ವೇದಿಕೆಗೆ ಇದೇ ಮೂಲ ಎಂದರೆ ತಪ್ಪಿಲ್ಲ.

ಬಿ.ವೈ. ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಹರತಾಳು ಹಾಲಪ್ಪ ರೈತರ ಸಮಸ್ಯೆ ಕೇಳುವ ನಿಟ್ಟಿನಲ್ಲಿ ಸಚಿವ ಮಧು ಬಂಗಾರಪ್ಪ ವಿರುದ್ದ ಏಕವಚನದಲ್ಲಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು.  ಈ ಘಟನೆ ಬೂದಿ ಮುಚ್ಚಿದ ಕೆಂಡವಾಗಿತ್ತು. ಅದು ಕಸ್ತೂರಿ ರಂಗನ್ ವರದಿಯ ಸಂವಾದ ವೇದಿಕೆಯಲ್ಲಿ ಧಗಧಗಿಸಿತು.

ಈ ವೇದಿಕೆ ಸಂವಾದಕ್ಕಿಂತ “ಪೊಲಿಟಿಕಲ್ ಕೌಂಟರ್” ಗೆ ಅಂತಲೇ ಸಿದ್ದಪಡಿಸಿದ ವೇದಿಕೆಯಾಗಿತ್ತು. ಕೇವಲ ಕಾಂಗ್ರೆಸಿಗರಿಗೆ ಮಾತ್ರವಲ್ಲ ಬಿಜೆಪಿಯ ನಾಯಕರಿಗೂ ಕೂಡ. ಯಾಕೆಂದರೆ ವರದಿಯ ಚರ್ಚೆಗಿಂತ ರಾಜಕೀಯ ಕೌಂಟರ್ ಗಳೇ ಹೆಚ್ಚಿದ್ದವು. ಅದಕ್ಕೆ ಚಾಲನೆ ದೊರಕಿದ್ದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪರಿಂದ.

ಕೈ ಹಿಡಿದರು, ಖಂಡನೆಗೆ ಮುಂದು:

ವೇದಿಕೆ ಅತಿಥಿಗಳಿಂದ ತುಂಬಿ ವಂದೇ ಮಾತರಂ ಗೀತೆ ಮುಗಿಯಿತು. ಅದಾಗಲೇ ವೇದಿಕೆಯ ಬಲಭಾಗದಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ ಮಾತನಾಡಲು ಮೈಕಿನ ಮುಂದೆ ಸಿದ್ದವಾಗಿದ್ದರು.

ವಂದೇ ಮಾತರಂ ಗೀತೆಯನ್ನು ಎರಡೇ ಚರಣಕ್ಕೆ ಸಿಮೀತಗೊಳಿಸುವ ಮೂಲಕ ಜನರ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಿರಾ ಎಂದು ಹೇಳಿದ ಕೂಡಲೇ ಶಾಸಕ ಬೇಳೂರು ಗೋಪಾಲ ಕೃಷ್ಣ ಆಕ್ರೋಶ ವ್ಯಕ್ತ ಪಡಿಸಿದರು. ಮೈದಾನದಲ್ಲಿ ಕಾರ್ಯಕರ್ತರು ಕೂಡ ಕೂಗಾಡಿದರು. ವೇದಿಕೆ ಮೇಲೆ-ಕೆಳಗೆ ಡಿಕೆ ಎಂದು ಘೋಷಣೆ ಮೊಳಗಿತು. ಆದರೆ ಸಿಎಂ ಡಿ.ಕೆ. ಶಿವಕುಮಾರ್ ಮಾತ್ರ ಶಾಂತಚಿತ್ತದಿಂದ ಇವೆಲ್ಲ ನೋಡುತ್ತಾ ಕುಳಿತ್ತಿದ್ದರು.

ಚನ್ನಬಸಪ್ಪ ಇದನ್ನು ಖಂಡಿಸುವ ಮೊದಲು ಸಂಸದ ಬಿ.ವೈ. ರಾಘವೇಂದ್ರ ಅವರ ಅನುಮತಿ ಪಡೆದು ಹೊರಟ್ಟಿದ್ದರು ಆದರೆ ಅವರನ್ನು ಪಕ್ಕದಲ್ಲಿ ಇದ್ದ ಆರ್ ಎಂ ಮಂಜುನಾಥ ಗೌಡರು ಕೈ ಹಿಡಿದು ತಡೆದರು. ಆದರೂ ಚನ್ನಬಸಪ್ಪ ಖಂಡಿಸಬೇಕೆಂದು ಮೊದಲೇ ನಿರ್ಣಯಿಸಿಕೊಂಡು ಬಂದಿದ್ದರು ಅನಿಸುತ್ತದೆ.

ಬಿಜೆಪಿ ನಾಯಕರಿಗೆ ಮುಖಭಂಗ:

ಶಿಕಾರಿಪುರ ಸಭೆಗೆ ಇದು ರೀ ಕೌಂಟರ್ ಕಾರ್ಯಕ್ರಮವಾಗಿತ್ತು. ಯಾಕೆಂದರೆ ಹೆಸರಲ್ಲಿ ಮಾತ್ರ ಕಸ್ತೂರಿ ರಂಗನ್ ವರದಿ ಕುರಿತು ಸಿಎಂ ಸಂವಾದ ಎನ್ನುವುದನ್ನು ಬಿಟ್ಟರೆ ವೇದಿಕೆ ಮೇಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಲ್ಲಿ ಅಂತಹದ್ಯಾವುದೇ ಲಕ್ಷಣಗಳು ಕಂಡು ಬರುತ್ತಿರಲಿಲ್ಲ.

ಆರಂಭದಲ್ಲಿ ಪರಿಸರವಾದಿ, ರೈತರು ತಮ್ಮ ಸಮಸ್ಯೆಯನ್ನು ಸಿಎಂ ಮುಂದೆ ಪ್ರಸ್ತುತ ಪಡಿಸಿದ್ದು ಬಿಟ್ಟರೆ, ಇನ್ನುಳಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಲ್ಲಿ ರಾಜಕಾರಣದ ಭಾಷಣ ಗರಿಗೆದರಿ ನಿಂತಿತ್ತು. ಕಾಂಗ್ರೆಸ್, ಬಿಜೆಪಿಯವರನ್ನು ಮಾತ್ರವಲ್ಲ ಸಿಎಂ ಕೂಡ ಅಂತಹದ್ದೆ ಧಾಟಿಯಲ್ಲಿ ಭಾಷಣ ಮಾಡುವ ಮೂಲಕ ರಾಜಕಾರಣದ ನಶೆಯನ್ನು ಇನ್ನಷ್ಟು ಚೆನ್ನಾಗಿ ತೀಡಿದರು.

ಬಿಜೆಪಿಯವರು “ಮಾಡಿದುಣ್ಣು ಮರಾಯ” ಎಂಬಂತೆ ಶಿಕಾರಿಪುರದಲ್ಲಿ ಆಡಿದ ಮಾತುಗಳಿಗೆ ಬೆಲೆತೆತ್ತುತ್ತ ಕಾಂಗ್ರೆಸಿಗರ ವಿರುದ್ದ ಸೊಲ್ಲೆತ್ತದೆ ಕೂತ್ತಿದ್ದರೆ. ಇತ್ತ ಕಾಂಗ್ರೆಸ್ “ಮೇಕೆ ಮೂತಿಗೆ ಮೊಸರು” ಸವರಿದಂತೆ ಮೇಲ್ನೊಟಕ್ಕೆ ಶರಾವತಿ ಸಂತ್ರಸ್ತರು, ಕಸ್ತೂರಿ ರಂಗನ್ ವರದಿ ಬಗ್ಗೆ ಕಾಳಜಿಯಿದೆ ಎಂಬಂತೆ  ಮಾತನಾಡುತ್ತಾ ಬಿಜೆಪಿಗರನ್ನು ಕುಟುಕುತ್ತಾ ಇದ್ದರು. ನೋಡುಗರಿಗೆ ಇದು ಮುಂಬರುವ ಚುನಾವಣಾ ರಾಜಕೀಯಕ್ಕೆ ಸನ್ನಧವೆಂಬಂತೆ ಗೋಚರವಾಗುತ್ತಿತ್ತು.

ಈಗ ಕಾಂಗ್ರೆಸ್ ಸಮೂಹದ ದಾಳಿಯಿಂದ ಬಿಜೆಯ ನಾಯಕರು ಗಾಯಗೊಂಡಿದ್ದಾರೆ. ಆದರೆ ಅವರುಗಳು ಪ್ರತಿದಾಳಿಗೆ ಹವಣಿಸದೆ ಸುಮ್ಮನಿರುವುದಿಲ್ಲ.  ಇಂದಲ್ಲ ನಾಳೆ ಪ್ರತಿರೋಧ ಸಿಡಿಯುತ್ತದೆ. ಕಾಂಗ್ರೆಸ್ ಹಚ್ಚಿರುವ ಈ ರಾಜಕೀಯದ ಕಿಡಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಯಾವ ರೀತಿ ಹೊತ್ತಿ ಉರಿಯುತ್ತದೆ ಎಂಬುದು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments