ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.25
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಏಕವಚನದಲ್ಲಿ ಟೀಕಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದ್ದಾರಲ್ಲದೆ, ಏಕವಚನದಲ್ಲಿ ಮಾತನಾಡುವುದಕ್ಕೆ ನಮಗೂ ಬರುತ್ತದೆ. ಆದರೆ ಸಾರ್ವಜನಿಕ ಜೀವನದಲ್ಲಿದ್ದಾಗ ಯಾರನ್ನು ಹೇಗೆ ಟೀಕಿಸಬೇಕೆನ್ನುವ ಅರಿವು ಜನಪ್ರತಿನಿಧಿಗಳಾದವರಿಗೆ ಇರಬೇಕೆಂದು ಕಿವಿ ಮಾತು ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಂಸದರು, ಶಿಕಾರಿಪುರದಲ್ಲಿ ಮಾತನಾಡುತ್ತಾ ತಾವೇ ವೀರ, ಧೀರ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಏಕವಚನದಲ್ಲಿ ಟೀಕಿಸಿದ್ದಾರೆ. ಈ ತರಹದ ವಿರಾವೇಷದ ಮಾತುಗಳನ್ನಾಡುವುದಕ್ಕೆ ನಮಗೂ ಬರುತ್ತದೆ. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆನ್ನುವ ಅರಿವಿರಬೇಕೆಂದು ಕಟಕಿದರು.
ಗಮನಿಸಿ: ನಿಮ್ಮ ಆಯುಕ್ತರಿಂದ ಗಂಭೀರ ಆರೋಪವಿದೆ-ಇದಕ್ಕೆ ಬಿಜೆಪಿಯವರ ಉತ್ತರವೇನು?
ಬಿ.ವೈ.ರಾಘವೇಂದ್ರ ಅವರ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ನಾನು ನನ್ನ ರಾಜಕೀಯ ಜೀವನದಿಂದಲೂ ಹತ್ತಿರದಿಂದ ಗಮನಿಸಿಕೊಂಡು ಬಂದಿದ್ದೇನೆ. ಅವರು ಯಾರೆಲ್ಲರಿಗೆ ಹೇಗೆ ಮಾತನಾಡಿದ್ದಾರೆಂಬುದು ಗೊತ್ತಿದೆ. ವೈಯಕ್ತಿಕ ದ್ವೇಷಕ್ಕಿಂತ ಜನರ ಸಮಸ್ಯೆಗಳು ಮತ್ತು ರೈತರ ಹಿತವೇ ಮುಖ್ಯ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಜನರ ಸಮಸ್ಯೆಗಳ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.
ಮಧು ಬಂಗಾರಪ್ಪ ಅವರಿಗೆ ಈ ಬಾರಿ ಸೊರಬದಲ್ಲಿ ಗೆದ್ದು ಬಾ ಎಂದು ಸಂಸದರು ಸವಾಲು ಹಾಕಿದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಾರಿ ಶಿಕಾರಿಪುರದಲ್ಲಿ ಅವರ ಸಹೋದರ ಗೆಲ್ಲುವುದರ ಬಗ್ಗೆಯೇ ಅವರು ಮೊದಲು ನೋಡಿಕೊಳ್ಳಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರೆ ಇವರೆಲ್ಲಿ ಇರುತ್ತಿದ್ದರು? ಕೆಲವು ತಾಂತ್ರಿಕ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಯಿತು. ಮುಂದೆ ಇದು ನಡೆಯಲ್ಲ ಎಂದು ಸವಾಲು ಹಾಕಿದರು.
ಇದೇ ವೇಳೆ, ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕೃಷಿ ಕ್ಷೇತ್ರಕ್ಕೆ ತೀವ್ರ ಹೊಡೆತ ಬಿದ್ದಿದೆ. ಮಳೆ ಆಶ್ರಿತ ಪ್ರದೇಶಗಳಾಗಿ ಹಲವು ತಾಲೂಕುಗಳನ್ನು ಘೋಷಿಸಲಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಅಗತ್ಯ ಆರ್ಥಿಕ ನೆರವು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಬೇಳೂರು ತಿಳಿಸಿದರು.
ಕಸ್ತೂರಿ ರಂಗನ್ ವರದಿ ಕುರಿತು ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಹಾಗೆಯೇ ವರದಿ ತಿರಸ್ಕಾರಕ್ಕೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಬಿಜೆಪಿ ನಾಯಕರ ಹೊಣೆಗಾರಿಕೆಯೂ ಇದೆ. ಕೇಂದ್ರದ ತಮ್ಮದೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಆ ಮೂಲಕ ಕಸ್ತೂರಿ ರಂಗನ ವರದಿ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕಿದೆ ಎಂದು ಒತ್ತಾಯಿಸಿದರು.
