ಶಿವಮೊಗ್ಗ,ಅ.27: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಶಿವಮೊಗ್ಗ ಶಾಖೆ ನೀಡುವ ‘ಜೀವಮಾನ ಸಾಧನಾ ಪ್ರಶಸ್ತಿ’ಗೆ ಭಾಜನರಾದ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಹಾಗೂ ದಕ್ಷಿಣ ಭಾರತದ ಪ್ರತಿಷ್ಠಿತ ‘ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್’ ಪಡೆದ ಹಿರಿಯ ಪತ್ರಕರ್ತ ಜೇಸುದಾಸ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಮತ್ತು ಪತ್ರಕರ್ತರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಇಬ್ಬರೂ ಹಿರಿಯ ಪತ್ರಕರ್ತರು ತಮ್ಮ ವೃತ್ತಿಬದುಕಿನ ಅನುಭವಗಳನ್ನು ಹಂಚಿಕೊಂಡು, ಸಹೋದ್ಯೋಗಿಗಳ ಪ್ರೀತಿ, ಅಭಿಮಾನ ಮತ್ತು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.
‘ಶಿವಮೊಗ್ಗ ಟೈಮ್ಸ್’ ಪತ್ರಿಕೆಯ ಸಂಪಾದಕರೂ ಆಗಿರುವ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘವು ವಿವಿಧ ಮಾನದಂಡಗಳ ಆಧಾರದಲ್ಲಿ ತಮ್ಮನ್ನು ಜೀವಮಾನ ಸಾಧನಾ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆದರೆ, ಈ ಪ್ರಶಸ್ತಿಯ ಸಂಭ್ರಮವನ್ನು ಇಡೀ ಪತ್ರಿಕಾ ಬಳಗ ಒಟ್ಟಾಗಿ ಅಭಿನಂದಿಸಿ ಹಂಚಿಕೊಂಡಿರುವುದು ಮತ್ತಷ್ಟು ಖುಷಿ ನೀಡಿದೆ. ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಸಹೋದ್ಯೋಗಿಗಳು ತೋರಿದ ಪ್ರೀತಿ ಹಾಗೂ ಆತ್ಮೀಯವಾಗಿ ಸನ್ಮಾನಿಸಿರುವುದು ತಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.
‘ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್’ ಪುರಸ್ಕೃತ ಪತ್ರಕರ್ತ ಜೇಸುದಾಸ್ ಮಾತನಾಡಿ, ಪ್ರಶಸ್ತಿಯ ಸಂತೋಷವನ್ನು ಪತ್ರಿಕಾ ಮಿತ್ರರ ಪ್ರೀತಿ ಮತ್ತಷ್ಟು ಹೆಚ್ಚಿಸಿದೆ. ತಮ್ಮನ್ನು ಆತ್ಮೀಯವಾಗಿ ಗೌರವಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾ ಬಳಗದ ಇನ್ನಷ್ಟು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದಿದ್ದರೆ ಕಾರ್ಯಕ್ರಮ ಮತ್ತಷ್ಟು ಅರ್ಥಪೂರ್ಣವಾಗುತ್ತಿತ್ತು. ಕೆಲಸದ ಒತ್ತಡದಿಂದ ಹಲವರು ಬರಲು ಸಾಧ್ಯವಾಗದಿದ್ದರೂ, ತಮ್ಮ ಮೇಲೆ ಸಹೋದ್ಯೋಗಿಗಳು ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ಎಂದೆಂದಿಗೂ ಋಣಿಯಾಗಿರುವುದಾಗಿ ಹೇಳಿದರು.
ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಪತ್ರಕರ್ತರ ವೃತ್ತಿ ಬದುಕಿನಲ್ಲಿ ಪ್ರಶಸ್ತಿಗಳು ಹೊಸ ಚೈತನ್ಯ ತುಂಬುವ ಶಕ್ತಿಯಿದ್ದಂತೆ. ಇಬ್ಬರೂ ಹಿರಿಯ ಪತ್ರಕರ್ತರಿಗೆ ದೊರೆತ ಗೌರವಗಳು ಅವರ ಸಾಧನೆಗೆ ಮತ್ತಷ್ಟು ಉತ್ತೇಜನ ನೀಡುವುದರ ಜತೆಗೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿಗಳು ಲಭಿಸುವಂತಾಗಲಿ. ಅವರ ಸಾಧನೆಗಳು ಇತರ ಪತ್ರಕರ್ತರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.
‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಹಿರಿಯ ವರದಿಗಾರ ರಾಮಚಂದ್ರ ಗುಣಾರಿ ಮಾತನಾಡಿ, ಪ್ರಶಸ್ತಿ ಪುರಸ್ಕೃತರಾದ ಇಬ್ಬರೂ ಪತ್ರಕರ್ತರನ್ನು ಹತ್ತಿರದಿಂದ ಕಂಡಿದ್ದೇನೆ. ಇಬ್ಬರೂ ಬಹುಮುಖ ವ್ಯಕ್ತಿತ್ವದವರು. ತಮ್ಮ ವೃತ್ತಿಯಲ್ಲಿನ ಸಾಧನೆ, ಅನುಭವ ಮತ್ತು ವೈಶಿಷ್ಟ್ಯಪೂರ್ಣ ಕಾರ್ಯಶೈಲಿಯ ಮೂಲಕ ಪ್ರಶಸ್ತಿಗೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಹೊನ್ನಾಳಿ ಚಂದ್ರಶೇಖರ್ ಮತ್ತು ಸಂತೋಷ್ ಕಾಚಿನಕಟ್ಟೆ ಮಾತನಾಡಿ, ಇಬ್ಬರು ಹಿರಿಯ ಪತ್ರಕರ್ತರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿರುವುದು ಇಡೀ ಪತ್ರಿಕಾ ಬಳಗಕ್ಕೆ ಸಂಭ್ರಮದ ಸಂಗತಿಯಾಗಿದೆ. ಇಂತಹ ಸಾಧನೆಗಳ ಸಂಭ್ರಮ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಕೆಯುಡಬ್ಲ್ಯುಜೆ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ ಹಾಗೂ ಗಿರೀಶ್ ಉಮ್ರಾಯ್ ಮಾತನಾಡಿ, ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅವರು ‘ನಾವಿಕ’ ಪತ್ರಿಕೆಯ ಬೆಳವಣಿಗೆಯಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ಸ್ಮರಿಸಿದರು. ಅವರ ವೃತ್ತಿಪರ ಅನುಭವ ಮತ್ತು ಕೊಡುಗೆಗಳು ಅವರನ್ನು ಹಲವು ಗೌರವಗಳಿಗೆ ಅರ್ಹರನ್ನಾಗಿಸಿವೆ ಎಂದು ಹೇಳಿದರು. ಇದೇ ವೇಳೆ ಜೇಸುದಾಸ್ ಅವರ ಜನಪರ ಕಾಳಜಿಯ ಪತ್ರಿಕೋದ್ಯಮವನ್ನು ಪ್ರಶಂಸಿಸಿದರು.
ಕೆಯುಡಬ್ಲ್ಯುಜೆ ಜಿಲ್ಲಾ ಶಾಖೆಯ ಅಧ್ಯಕ್ಷ ಎಚ್.ಯು. ವೈದ್ಯನಾಥ್ ಅವರು ಎಸ್. ಚಂದ್ರಕಾಂತ್ ಅವರ ವೃತ್ತಿ ಬದುಕು ಮತ್ತು ಸಾಧನೆಗಳನ್ನು ಪರಿಚಯಿಸಿ, ಇಬ್ಬರು ಹಿರಿಯ ಪತ್ರಕರ್ತರು ಪ್ರಶಸ್ತಿಗೆ ಪಾತ್ರರಾಗಿರುವುದು ಹೊಸ ತಲೆಮಾರಿನ ಪತ್ರಕರ್ತರಿಗೆ ಸ್ಫೂರ್ತಿ ನೀಡಲಿದೆ ಎಂದರು.
ಕೆಯುಡಬ್ಲ್ಯುಜೆ ನಗರ ಕಾರ್ಯದರ್ಶಿ ಕೆ.ಆರ್. ಸೋಮನಾಥ್ ಉಪಸ್ಥಿತರಿದ್ದರು. ಸಂಘದ ಜಿಲ್ಲಾ ಶಾಖೆಯ ಉಪಾಧ್ಯಕ್ಷ ದೇಶಾದ್ರಿ ಹೊಸ್ಮನೆ ಕಾರ್ಯಕ್ರಮ ನಿರೂಪಿಸಿದರು.
