ಶಿವಮೊಗ್ಗ,ಅ.28: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಇಡೀ ಸಮಾಜವೇ ತಲೆತಗ್ಗಿಸುವಂತಿದೆ. ಅಧಿಕಾರದ ಆಸೆಗಾಗಿ ಹೆಣ್ಣುಮಕ್ಕಳನ್ನು, ಕುಟುಂಬಗಳನ್ನು ಬಳಸಿಕೊಂಡು ಈ ಮಟ್ಟದ ಕೀಳು ರಾಜಕಾರಣ ಮಾಡುತ್ತಿರುವುದು ಕರ್ನಾಟಕದ ಸಂಸ್ಕೃತಿಗೆ ಶೋಭೆ ತರುವಂತದ್ದಲ್ಲ ಎಂದು ಶಾಸಕಿ ಹಾಗೂ ವಿಧಾನಸಭೆ ಉಪನಾಯಕಿ ಶಾರದಾ ಪೂರ್ಯನಾಯಕ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹಿಂದೆ ಸ್ಟಿಂಗ್ ಆಪರೇಷನ್ ಎಂದರೆ ಹಾಲಿನಲ್ಲಿ, ಬೆಣ್ಣೆಯಲ್ಲಿ ಕಲಬೆರಕೆ ಮಾಡಿದ್ದನ್ನು ಹುಡುಕಿ ಹೊರಗೆ ತೆಗೆಯುವುದು, ಭ್ರಷ್ಟಾಚಾರವನ್ನು ಬಯಲು ಮಾಡುವುದು. ಅದನ್ನು ಎಲೆಕ್ಟ್ರಾನಿಕ್ ಮಾಧ್ಯಮದವರು ಮಾಡುತ್ತಿದ್ದರು. ಅದು ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಕೆಲಸವಾಗಿತ್ತು. ಆದರೆ ಇಂದು ಸ್ಟಿಂಗ್ ಆಪರೇಷನ್ ಎಂಬ ಪದದ ಅರ್ಥವೇ ಬದಲಾಗಿದೆ. ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಅದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ” ಎಂದು ಅವರು ಹೇಳಿದರು.
ಮಹಿಳಾ ಸಮಾಜಕ್ಕೆ ಅವಮಾನ: “ಈ ಕೀಳು ಮಟ್ಟದಲ್ಲಿ ಹೆಣ್ಣುಮಕ್ಕಳನ್ನು ತೋರಿಸಿಕೊಂಡು ರಾಜಕಾರಣ ಮಾಡುವ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಯಾರ ವೈಯಕ್ತಿಕ ವಿಚಾರ ಏನೇ ಇರಲಿ, ಅದರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದು ಅವರವರ ಆತ್ಮವಿಮರ್ಶೆಗೆ ಬಿಟ್ಟಿದ್ದು. ಪ್ರತಿಯೊಬ್ಬ ರಿರಾಜಕಾರಣಿಯೂ ನಾವು ಹೇಗಿದ್ದೇವೆ, ನಮ್ಮ ಚೌಕಟ್ಟು ಏನು ಎಂದು ಯೋಚಿಸಿಕೊಳ್ಳಬೇಕು. ಆದರೆ ಅಧಿಕಾರಕ್ಕಾಗಿಯೇ ಇದನ್ನು ಒಂದು ಅಸ್ತçವಾಗಿ ಇಟ್ಟುಕೊಂಡು ಮಾಡುವುದು, ಇದು ಇಡೀ ಮಹಿಳಾ ಸಮಾಜ ತಲೆತಗ್ಗಿಸುವ ಕೆಲಸ” ಎಂದು ಕಿಡಿಕಾರಿದರು.
ಕುಟುಂಬ, ಏಜೆನ್ಸಿ ದುರ್ಬಳಕೆ: “ಕುಟುಂಬವನ್ನು ಮೇಜರ್ ಆಗಿ ಇಟ್ಟುಕೊಂಡು, ಏಜೆನ್ಸಿಗಳನ್ನು ಬಳಸಿಕೊಂಡು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಕೇವಲ ಅಧಿಕಾರದ ಆಸೆಗೋಸ್ಕರ ಈ ಮಟ್ಟಕ್ಕೂ ಹೋಗುತ್ತಾರಾ ಎಂಬುದು ಬೇಸರ ತಂದಿದೆ. ಕರ್ನಾಟಕದಲ್ಲಿ ಈ ರೀತಿಯ ರಾಜಕಾರಣ ಎಂದೂ ಇರಲಿಲ್ಲ. ಬೇರೆ ರಾಜ್ಯಗಳಲ್ಲಿ ಈ ರೀತಿ ದುರ್ಬಳಕೆ ಆಗುತ್ತಿದೆ ಎಂದು ನಾವು ಕೇಳುತ್ತಿದ್ದೆವು, ನೋಡುತ್ತಿದ್ದೆವು. ಆದರೆ ಈಗ ನಮ್ಮ ರಾಜ್ಯದಲ್ಲೇ ಇದು ನಡೆಯುತ್ತಿರುವುದು ದುರಂತ. ಪಕ್ಷಾತೀತವಾಗಿ, ಸಾರ್ವಜನಿಕರು ಸಹ ಇದು ಯಾಕೆ ಈ ಮಟ್ಟಕ್ಕೆ ಹೋಗುತ್ತಿದೆ ಎಂದು ಯೋಚಿಸುತ್ತಿದ್ದಾರೆ. ಯಾರೂ ಸಹ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ” ಎಂದು ಅವರು ಹೇಳಿದರು.
ಎಂಎಲ್ಸಿ ಫಲಿತಾಂಶ-ವಿದ್ಯಾವಂತರ ತೀರ್ಪು:
ಇದೇ ವೇಳೆ ನಿನ್ನೆ ಪ್ರಕಟವಾದ ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು.
“ನಾಲ್ಕು ಸೀಟುಗಳಲ್ಲಿ ಎನ್ಡಿಎ 4 ಕ್ಕೂ 4 ರಲ್ಲಿ ಗೆಲುವು ಸಾಧಿಸಿದೆ. ಒಪ್ಪಂದದ ಪ್ರಕಾರ ಒಂದು ಸೀಟು ಜೆಡಿಎಸ್ಗೆ ಸಿಕ್ಕಿದ್ದು, ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಇನ್ನುಳಿದ ಮೂರು ಸೀಟು ಬಿಜೆಪಿಗೆ ಸಿಕ್ಕಿದೆ. ಇದು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರ. ಅಂದರೆ ಸಮಾಜದಲ್ಲಿ ಗುರುತಿಸಿಕೊಂಡಿರುವ, ಶಿಕ್ಷಣ ನೀಡುವಂತಹ ವಿದ್ಯಾವಂತ ಸಮೂಹದಿಂದ ಆಯ್ಕೆಯಾದ ಫಲಿತಾಂಶ. ಇದು ನಮಗೆ ಸಿಕ್ಕ ದೊಡ್ಡ ಗೆಲುವು” ಎಂದು ಹರ್ಷ ವ್ಯಕ್ತಪಡಿಸಿದರು.
